ವರದಿಗಾರ: ದಲಿತ ಯುವಕನನ್ನು ಪ್ರೇಮಿಸಿದ್ದಾಳೆಂಬ ಏಕೈಕ ಕಾರಣಕ್ಕೆ ಸ್ವತಃ ತಮ್ಮ ಮಗಳನ್ನೇ ಕೊಂದಿರುವ ಆಘಾತಕಾರಿ ಘಟನೆ ಮಧುರೈ ನ ಕಿಲವನೇರಿ ಗ್ರಾಮದಲ್ಲಿ ನಡೆದಿದೆ.
16ವರ್ಷದ ಪುತ್ರಿ ದಲಿತ ಯುವಕನನ್ನು ಪ್ರೇಮಿಸಿ ತಮ್ಮ ಕುಟುಂಬದ ಮಾನ ಹರಾಜು ಮಾಡುತ್ತಿದ್ದಾಳೆಂದು ಆಕೆಯ ಪೋಷಕರು ಹಗ್ಗದಿಂದ ಉಸಿರು ಗಟ್ಟಿಸಿ ಕೊಂದಿದ್ದಾರೆ ಎನ್ನಲಾಗಿದೆ.
ಮೃತ ಬಾಲಕಿ ಮೇಲ್ಜಾತಿ ವರ್ಗಕ್ಕೆ ಸೇರಿದ್ದು, ರೈತ ಕುಟುಂಬವಾಗಿತ್ತು. ಮಗಳು 10ನೇ ತರಗತಿಯಲ್ಲಿ ಅನುತ್ತೀರ್ಣಳಾಗಿದ್ದರಿಂದ ಆಕೆ ಅಕ್ಟೋಬರ್ 7ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೋಷಕರು ಜನರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ನಡೆಸಿದ್ದರು.
ಮಧುರೈ ಸರಕಾರಿ ಆಸ್ಪತ್ರೆಯಲ್ಲಿ ನಡೆಸಿದ ಪೋಸ್ಟ್ ಮಾರ್ಟಂ ಸಂದರ್ಭ ಕುತ್ತಿಗೆ ಭಾಗದಲ್ಲಿ ಹಗ್ಗ ಹಟ್ಟಿದ್ದ ಗುರುತುಗಳು ಸಿಕ್ಕಿದ್ದವು ಮತ್ತು ವರದಿಯಲ್ಲಿ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿತ್ತು.
ಪ್ರಕರಣದ ಬಗ್ಗೆ ತನಿಖೆ ನಡೆಸಲು ಪ್ರಾರಂಭಿಸಿ ಪೊಲೀಸ್ ಇಲಾಖೆ ಬಾಲಕಿಯ ಹೆತ್ತವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆಯ ಬಳಿಕ ಸತ್ಯಾಂಶ ಹೊರಬಂದಿದ್ದು, ಆತ್ಮಹತ್ಯೆಯಲ್ಲ ಕೊಲೆಯೆಂದು ಸ್ಪಷ್ಟಪಡಿಸಿದ್ದು, ಹೆತ್ತವರನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
