ಜಾರ್ಖಂಡ್ ನ ರಾಮಗಢದಲ್ಲಿ ನಡೆದ ಅಲೀಮುದ್ದೀನ್ ಅನ್ಸಾರಿಯವರ ಗುಂಪು ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಜಲೀಲ್ ಅನ್ಸಾರಿಯವರ ಪತ್ನಿಯು, ಜಲೀಲ್ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುವದಕ್ಕಿಂತ ನಿಮಿಷಗಳ ಮುನ್ನ ‘ಅಪಘಾತ’ದಲ್ಲಿ ಸಾವಿಗೀಡಾಗಿದ್ದಾರೆ.
ಜಲೀಲ್ ಅನ್ಸಾರಿಯವರು ಅಕ್ಟೋಬರ್ 12ರಂದು ಸಾಕ್ಷ್ಯ ನೀಡಲು ತನ್ನ ಪತ್ನಿ ಜುಲೇಖಾ ಖಾತೂನ್ ಜೊತೆಗೆ ಆಗಮಿಸಿದ್ದರು. ತನ್ನ ಗುರುತಿನ ಚೀಟಿಯನ್ನು ತರಲು ಮರೆತ ಕಾರಣ ಅವರು ತನ್ನ ಪತಿಯನ್ನು ಅಲೀಮುದ್ದೀನ್ ಅನ್ಸಾರಿಯವರ ಮಗನ ಜೊತೆಗೆ ಮನೆಗೆ ಕಳುಹಿಸಿದ್ದರು. ಅವರು ಪ್ರಯಾಣಿಸುತ್ತಿದ್ದ ಮೋಟರ್ ಸೈಕಲ್ ಗೆ ಹಿಂದಿನಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ, ಜಲೀಲ್ ಅನಾರಿಯವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದರು.
ಜಲೀಲ್ ಅನ್ಸಾರಿಯವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅವರು ತನ್ನ ಪತ್ನಿಯ ಜೊತೆ ಬೆಳಿಗ್ಗೆ 10 ಗಂಟೆಗೆ ರಾಮಗಢದ ನ್ಯಾಯಾಲಯಕ್ಕೆ ತಲುಪಿದ್ದರು. ಗುರುತಿನ ಚೀಟಿಗಳನ್ನು ತರಲು ಮರೆತ ಕಾರಣ ತನ್ನ ಪತ್ನಿಯನ್ನು ಹತ್ಯೆಗೊಳಗಾದ ಅಲೀಮುದ್ದೀನ್ ಅನ್ಸಾರಿಯವರ ಮಗನ ಜೊತೆಗೆ ಮನೆಗೆ ಕಳುಹಿಸಿದ್ದರು. ಇದೇ ಸಮಯದಲ್ಲಿ ಆರೋಪಿಗಳ ಬೆಂಬಲಿಗರು ಜಲೀಲ್ ಅವರಿಗೆ, ನ್ಯಾಯಾಲಯದಲ್ಲಿ ಸಾಕ್ಷಿ ನೀಡಲು ಮುಂದುವರೆದಲ್ಲಿ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗಬಹುದೆಂದು ಬೆದರಿಕೆ ನೀಡಿದ್ದರು.
ಅಲೀಮುದ್ದೀನ್ ಅನ್ಸಾರಿಯವರನ್ನು ಗೋಸಾಗಾಟದ ಆರೋಪದಲ್ಲಿ ಜೂನ್ 29ರಂದು ಹತ್ಯೆ ಮಾಡಿದ್ದರು. ಆರೋಪಿಗಳಲ್ಲಿ ನಿತ್ಯಾನಂದ ಮಾಹ್ಟೋ ಎನ್ನುವವನು ಬಿಜೆಪಿಯ ಮಾಧ್ಯಮ ವಿಭಾಗದ ಜಿಲ್ಲಾ ಉಸ್ತುವಾರಿಯಾಗಿದ್ದಾನೆ. ಇತರ ಆರೋಪಿಗಳಾದ ದೀಪಕ್ ಮಿಶ್ರಾ ಮತ್ತು ಛೋಟು ವರ್ಮಾ – ಇಬ್ಬರೂ ಸ್ಥಳೀಯ ಗೋ ರಕ್ಷಾ ಸಮಿತಿಯೊಂದಿಗೆ ಸಂಬಂದವನ್ನು ಹೊಂದಿದವರಾಗಿದ್ದಾರೆ. ಇನ್ನೋರ್ವ ಆರೋಪಿ ರಾಜ್ ಕುಮಾರ್, ಸ್ಥಳೀಯ ಗೋ ರಕ್ಷಾ ಸಮಿತಿಯಲ್ಲಿ ಇತ್ತೀಚೆಗೆ ನೇಮಕಾತಿಗೊಂಡಿದ್ದನು.
