ವರದಿಗಾರ: ಇಲ್ಲಿನ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಭಾರೀ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡುತ್ತಿದ್ದರೂ ನಿಗದಿತ ಸಮಯದೊಳಗೆ ಚುನಾವಣಾ ಖರ್ಚು ವೆಚ್ಚಗಳ ವಿವರಗಳನ್ನು ಸಲ್ಲಿಸದಿರುವ ಯಾವುದೇ ರಾಜಕೀಯ ಪಕ್ಷವನ್ನು ಕೂಡ ಚುನಾವಣಾ ಆಯೋಗ ಅಮಾನ್ಯಗೊಳಿಸಿಲ್ಲವೆಂದು ಹೇಳಿದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಸಂಸದ ವರುಣ್ ಗಾಂಧಿ, ಚುನಾವಣಾ ಆಯೋಗವು ‘ಹಲ್ಲಿಲ್ಲದ ಹುಲಿ’ ಎಂದು ಕುಟುಕಿದ್ದಾರೆ.
ರಾಜಕೀಯ ಪಕ್ಷಗಳು ಭಾರೀ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿರುವುದರಿಂದ ಹಣಬಲ ಇಲ್ಲದ ಸಾಮಾನ್ಯ ವರ್ಗದ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಕನಸಿನ ಮಾತಾಗಿದೆ.
ಚುನಾವಣಾ ಆಯೋಗ ಎರಡು ದಿನಗಳ ಹಿಂದೆ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ದಿನಾಂಕವನ್ನು ಪ್ರಕಟಿಸಿತ್ತು. ಆದರೆ ಗುಜರಾತ್ ದಿನಾಂಕ ಪ್ರಕಟಿಸದಿರುವುದನ್ನು ಕಾಂಗ್ರೆಸ್ ಬಲವಾಗಿ ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ವರುಣ್ ಗಾಂಧಿ ಅವರಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
