ವರದಿಗಾರ: ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್ ಸರಕಾರ ನಿರಾಸಕ್ತಿ ತೋರಿಸುತ್ತಿದೆ ಎಂದು ಆರೋಪಿಸಿ ಪಕ್ಷದಿಂದ ಅಮಾನತುಗೊಂಡಿದ್ದ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿಯನ್ನು ಪಕ್ಷದಿಂದ ಉಚ್ಚಾಟಿಸಿರುವುದಾಗಿ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಜಿ. ಪರಮೇಶ್ವರ ಆದೇಶ ಹೊರಡಿಸಿದ್ದಾರೆ.
ಪಾಟೀಲ ನಡಹಳ್ಳಿ ವಿಧಾನ ಸಭೆಯ ಒಳಗೆ ಮತ್ತು ಹೊರಗೆ ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ವಹಿತಾಸಕ್ತಿಯಿಂದ ಈ ರೀತಿಯ ವರ್ತನೆ ತೋರಿಸುವ ಮೂಲಕ ಪಕ್ಷದ ನೀತಿನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿ 2015ರ ಏ. 23ರಂದು ನಡಹಳ್ಳಿ ಅವರನ್ನು ಅಮಾನತು ಮಾಡಲಾಗಿತ್ತು. ಬಳಿಕ, ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡು ಕೆಪಿಸಿಸಿಗೆ ನಡಹಳ್ಳಿ ಉತ್ತರ ನೀಡಿದ್ದರು.
ನಿಮ್ಮ ಉತ್ತರ ಸಮಂಜಸವಾಗಿಲ್ಲ. ಅಲ್ಲದೆ, ಅಂದಿನಿಂದ ಈವರೆಗೆ ಪಕ್ಷದ ನೀತಿನಿಯಮಗಳನ್ನು ನೀವು ಉಲ್ಲಂಘಿಸುತ್ತಲೇ ಬಂದಿದ್ದು, ಇದರಿಂದ ಪಕ್ಷದ ಘನತೆ, ಗೌರವಗಳಿಗೆ ಹಾನಿ ಆಗಿದೆ. ಈ ಕಾರಣದಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿಮ್ಮನ್ನು ಉಚ್ಚಾಟಿಸಲಾಗಿದೆ’ ಎಂದು ನಡಹಳ್ಳಿಗೆ ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.
