ವರದಿಗಾರ: ಕೇಂದ್ರ ಸರಕಾರದ ಧಮನಕಾರಿ ನೀತಿಯ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಅ.15ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ‘ನಮಗೂ ಹೇಳಲಿಕ್ಕಿದೆ’ ಮಹಾ ಸಮಾವೇಶಕ್ಕೆ “ಮುಸ್ಲಿಮ್ಸ್ ಯೂನಿಟಿ”ಯು ತನ್ನ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ.
ಭಾರತದಲ್ಲಿ ಜನಪರವಾಗಿ ಕ್ರಿಯಾಶೀಲವಾಗಿರುವ ಹಲವು ಸರಕಾರೇತರ ಸಂಘ-ಸಂಸ್ಥೆಗಳಲ್ಲದೆ ಕೆಲವು ಮುಸ್ಲಿಮ್ ಧಾರ್ಮಿಕ ವಿದ್ವಾಂಸರ ಮೇಲೆ ನಿಷೇಧ ಹೇರಿದ ಬಳಿಕ ಇದೀಗ ಕೇಂದ್ರ ಸರಕಾರದ ಕೇಸರಿ ಕಣ್ಣು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮೇಲೆ ಬಿದ್ದಿದೆ. ದಮನಿತರ ಪರ ಧ್ವನಿ ಎತ್ತುವ, ಸರಕಾರಗಳ ವೈಫಲ್ಯಗಳನ್ನು ಎತ್ತಿ ಹಿಡಿಯುವ ಪ್ರಗತಿಪರ ಸಂಘಟನೆಗಳು ಅದರಲ್ಲೂ ವಿಶೇಷವಾಗಿ ಮುಸ್ಲಿಮ್ ಸಂಘಟನೆಗಳ ಕುರಿತು ಕೇಂದ್ರ ಸರ್ಕಾರದ ನಿಲುವು ಖಂಡನೀಯ. ತಮ್ಮನ್ನು ವಿರೋಧಿಸುವ, ಭಿನ್ನಾಭಿಪ್ರಾಯಗಳನ್ನು ಇಲ್ಲವಾಗಿಸುವ ಈ ಹಿಂದುತ್ವ ಮನೋಸ್ಥಿತಿಯ ಸರ್ಕಾರದ ವಿರುದ್ಧ ಪಿಎಫ್ಐ ನಡೆಸುತ್ತಿರುವ ಆಂದೋಲನ ಅತ್ಯಂತ ಪ್ರಸಕ್ತವಾದುದು. ಈ ಆಂದೋಲನದೊಂದಿಗೆ ಯೂನಿಟಿ ಕೈಜೋಡಿಸಲಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರವನ್ನು ಟೀಕಿಸುವ ಮತ್ತು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರೀಕ ಮತ್ತು ಸಂಘಟನೆಗಳಿಗೆ ಇದೆ. ಇದು ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಸಂವಿಧಾನ ನೀಡಿರುವ ಹಕ್ಕು. ಆದರೆ ಪ್ರಶ್ನಿಸುವ ಸಂಘಟನೆಗಳು ಮತ್ತು ವ್ಯಕ್ತಿಗಳ ಮೇಲೆ ನಿಷೇಧ ಎಂಬ ಬೆದರುಗೊಂಬೆಯನ್ನು ತೋರಿಸಿ ಹೆದರಿಸುವ ಸರ್ಕಾರದ ಧೋರಣೆ ಖಂಡನೀಯ. ಯಾವುದೇ ಸಂಘಟನೆಯನ್ನು ನಿಷೇಧಿಸುವ ಮೊದಲು ಆ ಸಂಘಟನೆಯ ಕಾರ್ಯಚಟುವಟಿಕೆ, ಧ್ಯೇಯೋದ್ದೇಶಗಳನ್ನು ಪರಿಶೀಲಿಸಬೇಕು, ಆದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವಿಷಯದಲ್ಲಿ ಈ ಕಾನೂನಾತ್ಮಕ ನೀತಿಗಳನ್ನೆಲ್ಲಾ ಗಾಳಿಗೆ ತೂರಿ ಸಂಘಪರಿವಾರದ ನಿರ್ದೇಶನದ ನೀತಿ/ನಿಯಮಗಳನ್ನು ಮಾತ್ರ ಪಾಲಿಸಲಾಗುತ್ತಿದೆ. ಪಿಎಫ್ಐ ವಿರುದ್ಧ ಕಟ್ಟುಕತೆಗಳನ್ನು ಸೃಷ್ಟಿಸಿ, ಸಮಾಜದಲ್ಲಿ ಈ ಸಂಘಟನೆಯನ್ನು ಸಂಶಯಾಸ್ಪದವಾಗಿ ನೋಡುವಂತೆ ಮಾಡುವ ಹುನ್ನಾರ ಈ ಬೆಳವಣಿಗೆಯ ಹಿಂದಿದೆ. ಪಿಎಫ್ಐ ಸಂಘಟನೆಯ ಜನಪರ ಧೋರಣೆ, ಜಾತ್ಯತೀತ ನಿಲುವು, ಪ್ರಗತಿಪರ ಚಿಂತನೆ, ಎಲ್ಲಾ ಶೋಷಿತರಿಗೂ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಹೇಗೆ ತಾನೆ ಸಂಘಪರಿವಾರದ ಶಕ್ತಿಗಳು ಸಹಿಸಿಕೊಳ್ಳಲು ಸಾಧ್ಯ.
ಎನ್ಐಎಯನ್ನು ದುರುಪಯೋಗಪಡಿಸಿಕೊಂಡಿರುವ ಕೇಂದ್ರದ ಎನ್ಡಿಎ ಸರಕಾರ, ತಮಗೆ ಬೇಕಾದ ರೀತಿಯಲ್ಲಿ ಎನ್ಐಎ ವರದಿ ತಯಾರಿಸಿಕೊಳ್ಳುತ್ತಿದೆ. ಸಂಘ ಪರಿವಾರದ ಅಡುಗೆ ಮನೆಯಲ್ಲಿ ಬೆಂದ ವಿಷಯಗಳೇ ಸರಕಾರಿ ವರದಿಗಳಾಗಿ ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ನಿಷೇಧ ಎಂಬ “ಗುಮ್ಮ”ನನ್ನು ತೋರಿಸಿ ಪ್ರಗತಿಪರ ಸಂಘಟನೆಗಳನ್ನು ಹೆದರಿಸುವ ತಂತ್ರ ಫಲಕಾರಿಯಾಗದು ಎಂಬುದನ್ನು ಈ ಸಮಾವೇಶದ ಮೂಲಕ ಕೇಂದ್ರ ಸರಕಾರಕ್ಕೆ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ಸ್ ಯೂನಿಟಿ ಕೂಡ ಸಮಾವೇಶಕ್ಕೆ ಬೆಂಬಲ ಸೂಚಿಸಿದೆ.
ಯಾವ ಸಂಘಟನೆ ಸಮಾಜದಲ್ಲಿ ಕೋಮುವಾದವನ್ನು ಹರಡಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆಯೋ ಅಂತಹ ಸಂಘಟನೆಗಳ ಬಗ್ಗೆ ಮೌನವಾಗಿರುವ ಕೇಂದ್ರದ ಬಿಜೆಪಿ ಸರ್ಕಾರ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳನ್ನು ಸಂಶಯಾಸ್ಪದ ರೀತಿಯಲ್ಲಿ ನೋಡುವುದನ್ನು ಇನ್ನು ಮುಂದೆ ನಿಲ್ಲಿಸಬೇಕು. ಸಮಾಜಕ್ಕೆ ಮಾರಕವಾಗಿರುವ ಸಂಘಟನೆಗಳ ಚಲನವಲನಗಳ ಬಗ್ಗೆ, ಗೋ ರಕ್ಷಣೆ ಹೆಸರಿನಲ್ಲಿ ಮುಗ್ಧ ಜನರನ್ನು ಹತ್ಯೆ ಮಾಡುತ್ತಿರುವ ಮತ್ತು ದೇಶದ ಸಂವಿಧಾನಕ್ಕೆ ಸವಾಲೆಸೆಯುವ ಸಂಘಟನೆಗಳನ್ನು ಮೊದಲು ಸರಕಾರ ನಿಷೇಧಿಸಲಿ ಎಂಬುದು ಮುಸ್ಲಿಮ್ಸ್ ಯೂನಿಟಿಯ ಒತ್ತಾಯವಾಗಿದೆ.
ಮುಸ್ಲಿಮ್ಸ್ ಯೂನಿಟಿ ರಾಜ್ಯ ಮುಖಂಡರಾದ ಖಾಸಿಂ ಸಾಬ್ ಎ., ಎ.ಜೆ.ಖಾನ್, ಎಂ.ಕೆ.ಮೇತ್ರಿ, ಟಿ.ಶಫೀವುಲ್ಲಾ, ಮೆಹಬೂಬ್ ಮುಲ್ಲಾ, ಸೂಫಿ ವಲೀಬಾ, ಶ್ರೀಮತಿ ಸಲ್ಮಾ ಬಾನು ಪ್ರಕಣೆಯಲ್ಲಿ ತನ್ನ ಬೆಂಬಲವನ್ನು ಸೂಚಿಸಿದ್ದಾರೆ.
