ರಾಜ್ಯ ಸುದ್ದಿ

ನಾವಿಂದು ಸುರಕ್ಷಿತವಾಗಿರಲು ಸೈನಿಕರು ಕಾರಣ: ಸಿ.ಎಂ ಸಿದ್ದರಾಮಯ್ಯ

ವರದಿಗಾರ-ಬೆಂಗಳೂರು: ದೇಶ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಬಗೆಗಿನ ನಮ್ಮ ಕಾಳಜಿ ಕೇವಲ ಬಾಯಿ ಮಾತಿನದ್ದಲ್ಲ. ನಾವಿಂದು ಮನೆಯೊಳಗೆ ಸುರಕ್ಷಿತವಾಗಿ ನಿಶ್ಚಿಂತೆಯಿಂದ ಇರಲು ಕಾರಣ, ಪ್ರಾಣವನ್ನು ಒತ್ತೆ ಇಟ್ಟು ಗಡಿಯಲ್ಲಿ ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರು ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ನಗರದ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಮಂಗಳವಾರ 71 ನೇ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿ ಮಾತನಾಡುತ್ತಿದ್ದರು.
ಯುದ್ಧ ಅಥವಾ ಸೈನಿಕ ಕಾರ್ಯಾಚರಣೆಯಲ್ಲಿ ಮಡಿದ ಇಲ್ಲವೆ ಶಾಶ್ವತ ಅಂಗವಿಕಲರಾದ ಕರ್ನಾಟಕ ಮೂಲದ ಯೋಧರ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ರಾಜ್ಯದಲ್ಲಿ ಸಮಗ್ರ ಉನ್ನತ ಶಿಕ್ಷಣವನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೇರಿಸಲು ವಿಶೇಷ ಜ್ಞಾನ ನಗರ ಯೋಜನೆ, ಹೊಸದಾಗಿ 3500 ಗ್ರಾಮಗಳಿಗೆ ಉಚಿತ ವೈಫೈ ನೀಡುವುದಾಗಿ ಸ್ವಾತಂತ್ರ್ಯ ಭಾಷಣದಲ್ಲಿ ಮುಖ್ಯಮಂತ್ರಿ ಘೋಷಿಸಿದ್ದಾರೆ.
‘ಭಾರತದ 71ನೇ ಸ್ವಾತಂತ್ರ್ಯೋತ್ಸವದ ಸುಸಂದರ್ಭದಲ್ಲಿ ನಾಡಿನ ಸಮಸ್ತ ಬಂಧು-ಬಾಂಧವರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು’ ಶುಭಾಶಯ ಸಲ್ಲಿಸಿ,ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.

ಅವರ ಸ್ವಾತಂತ್ರ್ಯೋತ್ಸವ ಸಂದೇಶದ ಪೂರ್ಣ ಸಾರ ಇಲ್ಲಿದೆ.

‘ತ್ಯಾಗ, ಬಲಿದಾನದ ಹೋರಾಟದ ಮೂಲಕ ಗುಲಾಮಗಿರಿಯ ಸಂಕೋಲೆಯಿಂದ ದೇಶವನ್ನು ಬಿಡುಗಡೆಗೊಳಿಸಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೂ ನಾಡಿನ ಜನತೆಯ ಪರವಾಗಿ ಗೌರವದ ನಮನಗಳು ಎಂದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಷವನ್ನು ಕಳೆದ ವಾರವಷ್ಟೇ ನಾವು ಆಚರಿಸಿದ್ದೇವೆ. ಆ ಚಳುವಳಿಯಲ್ಲಿ ಸಾವು-ನೋವುಗಳಿಗೆ ಈಡಾದ ಲಕ್ಷಾಂತರ ಸಂಖ್ಯೆಯ ನಿಜವಾದ ದೇಶಭಕ್ತರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

‘ನಾವಿಂದು ಮನೆಯೊಳಗೆ ಸುರಕ್ಷಿತವಾಗಿ, ನಿಶ್ಚಿಂತೆಯಿಂದ ಇರಲು ಕಾರಣ ದೇಶದ ಸ್ವಾತಂತ್ರ್ಯವನ್ನು ಪ್ರಾಣ ಒತ್ತೆ ಇಟ್ಟು ಗಡಿಯಲ್ಲಿ ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರು. ಹೋರಾಡುತ್ತಿರುವ ಮತ್ತು ಹೋರಾಡುತ್ತಲೇ ವೀರ ಮರಣವನ್ನಪ್ಪಿದ ನಮ್ಮ ಹೆಮ್ಮೆಯ ಸೈನಿಕರಿಗೆ ಒಮ್ಮೆ ತಲೆಬಾಗಿ ನಮಿಸೋಣ ಎಂದರು.

‘ಇದೇ ವೇಳೆ ಆಂತರಿಕ ಭದ್ರತೆಯ ರಕ್ಷಣೆಗಾಗಿ ಶ್ರಮಿಸುತ್ತಿರುವ ಸಮವಸ್ತ್ರ ಪಡೆಯ ಮೇರು ಸಾಧಕರಿಗೂ ನಮ್ಮ ನಮನಗಳನ್ನು ಸಲ್ಲಿಸೋಣ.
ಯೋಧರ ಕುಟುಂಬದ ಒಬ್ಬ ಅವಲಂಬಿತರಿಗೆ ಸರ್ಕಾರಿ ಉದ್ಯೋಗ

‘ದೇಶರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಬಗೆಗಿನ ನಮ್ಮ ಕಾಳಜಿ ಕೇವಲ ಬಾಯಿ ಮಾತಿನದ್ದಲ್ಲ. ಈ ಹಿನ್ನೆಲೆಯಲ್ಲಿ ಯುದ್ಧದಲ್ಲಿ ಅಥವಾ ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಅಥವಾ ಶಾಶ್ವತ ಅಂಗವೈಕಲ್ಯ ಹೊಂದಿದ ಕರ್ನಾಟಕ ಮೂಲದ ಯೋಧರ ಕುಟುಂಬದ ಒಬ್ಬ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಘೋಷಿಸಿದರು.

ಕೋಮುವಾದ, ಜಾತಿವಾದದ ಆತಂಕ
‘ಕೋಮುವಾದ ಹಾಗೂ ಜಾತಿವಾದವೂ ಸೇರಿದಂತೆ ಬಹುರೂಪಿ ಫ್ಯಾಸಿಸಂ ನಾಲ್ಕು ದಿಕ್ಕುಗಳಿಂದಲೂ ಆವರಿಸುತ್ತಿರುವ ದಿನಗಳಲ್ಲಿ ನಾವಿದ್ದೇವೆ. ಇದು ಜಾತಿ ಹಾಗೂ ಧರ್ಮಗಳ ಭೇದವಿಲ್ಲದೆ ಬೆಳೆಯುತ್ತಿರುವುದೂ ಕೂಡಾ ಆತಂಕಕಾರಿ ಸಂಗತಿಯಾಗಿದೆ.

‘ಧರ್ಮ ವೈಯಕ್ತಿಕವಾದುದು. ಅದನ್ನು ವ್ಯಕ್ತಿ, ಸಮುದಾಯ ಮತ್ತು ಕೋಮುಗಳ ನಡುವೆ ದ್ವೇಷ ಸೃಷ್ಟಿಸಿ ಆ ಮೂಲಕ ರಾಜಕೀಯ ಲಾಭ ಪಡೆಯುವ ಸಾಧನಗಳಾಗಿ ಬಳಸಿಕೊಳ್ಳುವುದು ಧರ್ಮದ್ರೋಹದ ಕೆಲಸ. ಇಂತಹ ಕೃತ್ಯಗಳಲ್ಲಿ ತೊಡಗಿರುವ ದೇಶ ವಿರೋಧಿಗಳ ಹುನ್ನಾರಗಳನ್ನು ವಿಫಲಗೊಳಿಸುತ್ತೇವೆ ಎಂದು ಪ್ರತಿಯೊಬ್ಬ ಪ್ರಜೆಯೂ ಈ ದಿನ ಪಣತೊಡಬೇಕಾಗಿದೆ.

‘ನಮ್ಮದು ಸರ್ವರನ್ನೂ ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು-ಸಮಬಾಳು ನೀಡುವ, ನಾಡಿನ ಪ್ರತಿಯೊಬ್ಬ ಪ್ರಜೆಯ ಜೀವನಮಟ್ಟ ಸುಧಾರಣೆಯನ್ನು ಗುರಿಯಾಗಿಟ್ಟು ಕೊಂಡ ಸರ್ವೋದಯ ತತ್ವದ ಅಭಿವೃದ್ದಿ ಮಾದರಿ. ಇದನ್ನು ನಾನು ‘ಕರ್ನಾಟಕ ಅಭಿವೃದ್ದಿ ಮಾದರಿ’ ಎಂದು ಹೆಮ್ಮೆಯಿಂದ ಕರೆಯುತ್ತೇನೆ.

‘ಅಭಿವೃದ್ಧಿ ಮಾದರಿಗೆ ಸಾಮಾಜಿಕ ನ್ಯಾಯದ ಕನಸುಗಾರ ಬಸವಣ್ಣ, ಗ್ರಾಮ ಸ್ವರಾಜ್ಯದ ಹರಿಕಾರ ಮಹಾತ್ಮ ಗಾಂಧಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಹೋರಾಟಗಾರ ಡಾ ಬಿ.ಆರ್.ಅಂಬೇಡ್ಕರ್ ಮತ್ತಿತರ ಸಾಮಾಜಿಕ ಮತ್ತು ರಾಜಕೀಯ ಚಿಂತಕರ ಆಶಯಗಳು ಪ್ರೇರಣೆ ನೀಡಿವೆ.

‘ಕಾಯಕ ಜೀವಿಗಳ ಚಳುವಳಿಯ ನೇತಾರ ಬಸವಣ್ಣನವರು ನಮ್ಮೆಲ್ಲರ ಮನಸ್ಸಲ್ಲಿ ಸದಾ ನೆಲೆಸಿ ಮಾರ್ಗದರ್ಶನ ನೀಡುತ್ತಿದ್ದರು. ಇದೀಗ ಅವರ ಭಾವಚಿತ್ರಗಳನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಕಬೇಕೆಂದು ನಮ್ಮ ಸರ್ಕಾರ ಆದೇಶ ಹೊರಡಿಸಿದೆ. ಇದು ಜ್ಞಾನ, ಅನ್ನ ಮತ್ತು ಸೇವೆಯ ತ್ರಿ-ವಿಧ ದಾಸೋಹದ ಮೂಲಕ ಸಮ ಸಮಾಜ ನಿರ್ಮಾಣದ ಕನಸು ಕಂಡ ಬಸವಣ್ಣ ನಮ್ಮ ಹಾದಿಯ ತೋರುಗಂಬ ಎಂಬುದಕ್ಕೆ ಸಾಕ್ಷಿ.

ಹಿಂದಿ ಹೇರಿಕೆ ವಿರುದ್ಧ ಸಂದೇಶ ರವಾನೆ
‘ನಮ್ಮದು ಬಹು ಭಾಷೆ, ಬಹುಧರ್ಮ, ಬಹು ಸಂಸ್ಕøತಿ, ಬಹು ಮಾದರಿಯ ಬಹುತ್ವದ ವ್ಯವಸ್ಥೆ. ರಾಜ್ಯಗಳಲ್ಲಿ ರಾಜ್ಯಭಾಷೆ ಸಾರ್ವಭೌಮ ಭಾಷೆಯೇ ಹೊರತು ಬೇರಾವುದೇ ಮತ್ತೊಂದು ಭಾಷೆ ಆ ನೆಲದ ಬದುಕಿನ ಮೇಲೆ ಆಧಿಪತ್ಯವನ್ನು ಮೆರೆಯುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು. ಸಂವಿಧಾನವೂ ಇದನ್ನು ಒಪ್ಪುವುದಿಲ್ಲ ಎಂದ ಸಿಎಂ, ಹಿಂದಿ ಹೇರಿಕೆ ವಿರುದ್ಧ ಸಂದೇಶ ರವಾನಿಸಿದರು.

‘ಸ್ಥಳೀಯ ಭಾಷೆಯ ಸ್ವಾಯತ್ತತೆಯನ್ನು ಉಳಿಸಿಕೊಂಡೇ ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ನೀಡುವ ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆಗೆ ನಮ್ಮ ಸರ್ಕಾರ ಬದ್ಧವಾಗಿದೆ.

‘ಹಸಿವು ಮುಕ್ತ ಕರ್ನಾಟಕ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಮಾಡಿದ ಸಂಕಲ್ಪ. ಪ್ರತಿ ತಿಂಗಳು ತಲಾ ಏಳು ಕೆ.ಜಿ ಅಕ್ಕಿಯನ್ನು ಉಚಿತವಾಗಿ ಒದಗಿಸುತ್ತಿರುವ ಅನ್ನಭಾಗ್ಯ ಯೋಜನೆ ರಾಜ್ಯದ ನಾಲ್ಕು ಕೋಟಿ ಜನ ನೆಮ್ಮದಿಯಿಂದ ಎರಡು ಹೊತ್ತು ಊಟ ಮಾಡುವ ಅವಕಾಶ ಕಲ್ಪಿಸಿದೆ. ಜೊತೆಗೆ ಕಡಿಮೆ ಬೆಲೆಗೆ ಬೇಳೆ ನೀಡುತ್ತಿದ್ದೇವೆ. ಅಕ್ಕಿ ಖರೀದಿಗಾಗಿ ವ್ಯಯ ಮಾಡುತ್ತಿದ್ದ ದುಡಿಮೆಯ ಹಣವನ್ನು ಜೀವನ ಮಟ್ಟದ ಸುಧಾರಣೆಯ ಇತರ ಉದ್ದೇಶಗಳಿಗೆ ಫಲಾನುಭವಿಗಳು ಬಳಸಬಹುದಾಗಿದೆ.

‘ರಾಜ್ಯವು ಕಳೆದ ಮೂರು ವರ್ಷಗಳಿಂದ ಸತತವಾಗಿ ಬರದ ಬವಣೆಯಿಂದ ಬಳಲುತ್ತಿದ್ದರೂ ಎಲ್ಲೂ ಯಾರೂ ಅನ್ನಕ್ಕಾಗಿ ಪರಡಾಡುವ ಸ್ಥಿತಿ ಉದ್ಭವವಾಗಲಿಲ್ಲ. ಬರದ ಕಾರಣಕ್ಕಾಗಿ ಸಾವು-ನೋವುಗಳು ಸಂಭವಿಸಲಿಲ್ಲ. ವ್ಯಾಪಕವಾಗಿ ಗುಳೆ ಹೋಗುವ ಸಂಕಷ್ಟ ಎದುರಾಗಲಿಲ್ಲ. ಇದಕ್ಕೆಲ್ಲಾ ನಮ್ಮ ಅನ್ನಭಾಗ್ಯ ಯೋಜನೆಯ ಸಫಲತೆಯೇ ಸಾಕ್ಷಿ.

ಅ.2ರಿಂದ ಮಾತೃಪೂರ್ಣ ಯೋಜನೆ
‘ಇದೇ ರೀತಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಮಾತೃಪೂರ್ಣ ಯೋಜನೆ ನಮ್ಮ ಸರ್ಕಾರದ ಮಾತೃ ಹೃದಯದ ಕಾಳಜಿಗೆ ಸಾಕ್ಷಿಯಾಗಿದೆ. ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷಾಚರಣೆಯ ಪ್ರಾರಂಭದ ಸಂಸ್ಮರಣೆಯಲ್ಲಿ ಅಕ್ಟೋಬರ್ 2ರಿಂದ ರಾಜ್ಯದ ಎಲ್ಲಾ ಅಂಗನವಾಡಿಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು. ಸುಮಾರು 12 ಲಕ್ಷ ಮಂದಿ ಇದರ ಲಾಭ ಪಡೆಯಲಿದ್ದಾರೆ ಎಂದು ಸಿಎಂ ಹೇಳಿದರು.

198 ಇಂದಿರಾ ಕ್ಯಾಂಟೀನ್‍
‘ಸುಮಾರು ಒಂದು ಕೋಟಿಗೂ ಮಿಗಿಲಾದ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ನಗರ ಪ್ರದೇಶದ ಜನತೆಯ ಅದರಲ್ಲಿಯೂ ವಿಶೇಷವಾಗಿ ಇಲ್ಲಿನ ಶ್ರಮಿಕ ವರ್ಗ ಹಾಗೂ ಬಡ ವಲಸಿಗರ ಹಸಿವನ್ನು ನೀಗಿಸುವ ಉದ್ದೇಶದಿಂದ ಮಹತ್ವಾಕಾಂಕ್ಷಿ ‘ಇಂದಿರಾ ಕ್ಯಾಂಟೀನ್’ ಯೋಜನೆಗೆ ನಾಳೆಯೇ ಚಾಲನೆ ನೀಡಲಾಗುವುದು.ನಗರದ ಪ್ರತಿ ವಾರ್ಡ್‍ಗೆ ಒಂದರಂತೆ 198 ಇಂದಿರಾ ಕ್ಯಾಂಟೀನ್‍ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 101 ಇಂದಿರಾ ಕ್ಯಾಂಟೀನ್‍ಗಳು ಪ್ರಾರಂಭವಾಗಲಿವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

‘ವಿದ್ಯಾರ್ಥಿ ಸಮುದಾಯದ ಬಗ್ಗೆ ನಮ್ಮ ಸರ್ಕಾರ ವಿಶೇಷ ಕಾಳಜಿ ವಹಿಸುತ್ತಾ ಬಂದಿದೆ. ಸ್ವಾತಂತ್ರ್ಯದ ಪ್ರಮುಖ ಆಶಯವಾದ ಸರ್ವರಿಗೂ ಸಮಾನ ಶಿಕ್ಷಣದ ಕನಸು ಈಡೇರಬೇಕು ಎನ್ನುವ ದೃಷ್ಟಿಯಿಂದ ರಾಜ್ಯದಲ್ಲಿ ‘ಶಿಕ್ಷಣ ಹಕ್ಕು’ ಕಾಯಿದೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದೇವೆ.

‘ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ, ಅಂಗನವಾಡಿ ಒಳಗೊಂಡಂತೆ 1.08 ಕೋಟಿ ಶಾಲಾ ಮಕ್ಕಳಿಗೆ ವಾರಕ್ಕೆ ಐದು ದಿನ ಹಾಲು ನೀಡುತ್ತಿದ್ದೇವೆ. ಅದೇ ರೀತಿ ವಾರಕ್ಕೆ ಎರಡು ದಿನ ಅಂಗನವಾಡಿ ಮಕ್ಕಳಿಗೆ ಮೊಟ್ಟೆಯನ್ನು ವಿತರಿಸುವ ಮೂಲಕ ಅಗತ್ಯ ಪೌಷ್ಟಿಕತೆ ಲಭ್ಯವಾಗುವಂತೆ ಮಾಡುವ ಯೋಜನೆಗೆ ಚಾಲನೆ ನೀಡಿದ್ದೇವೆ. ಅಲ್ಲದೆ, 62.59 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, 47.45 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಶೂ ಮತ್ತು ಸಾಕ್ಸ್ ಹಾಗೂ ಐದು ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ನೀಡಿದ್ದೇವೆ. ವಿದ್ಯಾಸಿರಿ ಯೋಜನೆಯಡಿ ₹319 ಕೋಟಿ ವೆಚ್ಚದಲ್ಲಿ 2.7 ಲಕ್ಷ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗೆ ಮಾಸಿಕ ₹1,500 ಧನ ಸಹಾಯ ಒದಗಿಸುತ್ತಿದ್ದೇವೆ.

‘ಸರ್ಕಾರಿ ಮತ್ತು ಅನುದಾನಿತ ವೈದ್ಯಕೀಯ, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸುವ ಮೂಲಕ ಇಂದಿನ ತಂತ್ರಜ್ಞಾನ ಆಧರಿತ ಶಿಕ್ಷಣಕ್ಕೆ ಹಾಗೂ ರಾಜ್ಯದ ಯುವಪೀಳಿಗೆಯನ್ನು ಪ್ರಸಕ್ತ ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಸಜ್ಜುಗೊಳಿಸಿ ಕೌಶಲ್ಯ ವೃದ್ಧಿಸಲು ಮಹತ್ವಾಕಾಂಕ್ಷಿ ‘ಕೌಶಲ್ಯ ಕರ್ನಾಟಕ’ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದೇವೆ. ಇದರಡಿ ಪ್ರತಿವರ್ಷ ಐದು ಲಕ್ಷ ಯುವ ಜನತೆಯನ್ನು ತರಬೇತಿಗೊಳಿಸಲು ಯೋಜಿಸಿದ್ದೇವೆ.

‘ಸಂವಿಧಾನಶಿಲ್ಪಿ ಡಾಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

‘ತಾಂತ್ರಿಕ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಲು ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ 23 ಹೊಸ ಹಾಸ್ಟೆಲ್‍ಗಳನ್ನು ಸ್ಥಾಪಿಸಲಾಗುವುದು. ರಾಜ್ಯದಲ್ಲಿ ಸಮಗ್ರ ಉನ್ನತ ಶಿಕ್ಷಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ವಿಶೇಷವಾದ “ಜ್ಞಾನ ನಗರ” ಪ್ರಾರಂಭಿಸಲು ಯೋಜನೆ ರೂಪಿಸಲಾಗುವುದು.

‘ಹೈದರಾಬಾದ್-ಕರ್ನಾಟಕದ ಪ್ರದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ರಾಯಚೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಎಲ್ಲಾ ಕಾಲೇಜುಗಳನ್ನು ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ತರಲಾಗುವುದು.

‘ರಾಜ್ಯದ ಎಲ್ಲಾ ಅಡುಗೆ ಅನಿಲ ಸಂಪರ್ಕ ಇಲ್ಲದ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಿ, ರಾಜ್ಯವನ್ನು ಸೀಮೆಎಣ್ಣೆ–ಮುಕ್ತ ರಾಜ್ಯವನ್ನಾಗಿ ರೂಪಿಸಲು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮವಹಿಸಿದ್ದೇವೆ. ಪಡಿತರ ಸೀಮೆಎಣ್ಣೆ ಯನ್ನು ಬಿಟ್ಟುಕೊಡುವವರಿಗೆ ಪುರ್ನಬೆಳಕು ಯೋಜನೆಯಲ್ಲಿ ಉಚಿತವಾಗಿ ರೀಚಾರ್ಜಬಲ್ ಎಲ್‌ಇಡಿ ದೀಪ ನೀಡಲು ಯೋಜಿಸಿದ್ದೇವೆ.

ರೈತರ ಏಳಿಗೆಗಾಗಿ ₹40 ಸಾವಿರ ಕೋಟಿ

‘ಕೃಷಿ ನಮ್ಮ ಸರ್ಕಾರದ ಆದ್ಯತೆಯ ಕ್ಷೇತ್ರ. ನಾನು ಮಂಡಿಸಿದ ಪ್ರತಿ ಆಯವ್ಯಯದಲ್ಲೂ ರಾಜ್ಯ ಸರ್ಕಾರದ ಆದಾಯದ ಒಂದು ದೊಡ್ಡ ಪಾಲನ್ನು ಕೃಷಿಗೆ ಮೀಸಲಿರಿಸಿದ್ದೇನೆ. ಪ್ರಸಕ್ತ ಸಾಲಿನ ಆಯವ್ಯಯವನ್ನು ಅವಲೋಕಿಸಿದರೂ ಇದನ್ನು ಕಾಣಬಹುದು.

‘ಕೃಷಿಗೆ ₹5080 ಕೋಟಿ, ತೋಟಗಾರಿಕೆಗೆ ₹1091 ಕೋಟಿ, ಪಶು ಸಂಗೋಪನೆಗೆ ₹2245 ಕೋಟಿ, ರೇಷ್ಮೆ ₹429 ಕೋಟಿ, ಮೀನುಗಾರಿಕೆಗೆ ₹337 ಕೋಟಿ, ನೀರಾವರಿಗೆ ₹15,929 ಕೋಟಿ, ಸಣ್ಣ ನೀರಾವರಿಗೆ ₹2099 ಕೋಟಿ, ಸಹಕಾರ ಕ್ಷೇತ್ರಕ್ಕೆ ₹1663 ಕೋಟಿ, ವಿದ್ಯುತ್ ಸಬ್ಸಿಡಿಗೆ ₹9000 ಕೋಟಿ, ಹಾಲಿನ ಪ್ರೋತ್ಸಾಹ ಧನಕ್ಕೆ ₹1206 ಕೋಟಿ ಹಾಗೂ ಸಾಲದ ಮೇಲಿನ ಬಡ್ಡಿ ಸಹಾಯಧನಕ್ಕಾಗಿ ₹800 ಕೋಟಿ ಹೀಗೆ ಸುಮಾರು ₹40,000 ಕೋಟಿಗಳನ್ನು ಪ್ರಸಕ್ತ ಸಾಲಿನ ಆಯವ್ಯಯ ಪತ್ರದಲ್ಲಿ ರೈತರ ಏಳಿಗೆಗಾಗಿ ನಿಗದಿಪಡಿಸಿದ್ದೇವೆ.

‘ರಾಜ್ಯದಲ್ಲಿ 1.67 ಲಕ್ಷಕ್ಕೂ ಹೆಚ್ಚು ಕೃಷಿ ಹೊಂಡಗಳ ಹಾಗೂ ಸುಮಾರು 2500 ಪಾಲಿ ಹೌಸ್‍ಗಳ ನಿರ್ಮಾಣ, 78 ಲಕ್ಷ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಣೆ, ಹನಿ ನೀರಾವರಿಗೆ ಎಲ್ಲಾ ವರ್ಗದ ರೈತರಿಗೂ ಶೇಕಡಾ 90 ರಷ್ಟು ಸಹಾಯಧನ, ಸುಮಾರು 13 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣ, ಕೃಷಿ ಯಂತ್ರಧಾರೆ ಯೋಜನೆಯಡಿ ಆರು ಲಕ್ಷ ರೈತರಿಗೆ ಕೃಷಿ ಸಲಕರಣೆಗಳನ್ನು ಬಾಡಿಗೆಗೆ ನೀಡಿಕೆ, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ಐದು ರೂಪಾಯಿ ಪ್ರೋತ್ಸಾಹ ಧನ ಇವು ನಮ್ಮ ಸರ್ಕಾರದ ರೈತಪರ ಯೋಜನೆಗಳು.

‘ದೇಶದಲ್ಲಿಯೇ ಮೊದಲ ಬಾರಿಗೆ ಶೂನ್ಯ ಬಡ್ಡಿದರದಲ್ಲಿ ಮೂರು ಲಕ್ಷ ರೂ ವರೆಗೆ ಸಾಲ ನೀಡುತ್ತಿದ್ದೇವೆ. ಇದರ ಜೊತೆಗೆ ಶೇಕಡಾ ಮೂರರ ಬಡ್ಡಿ ದರದಲ್ಲಿ ₹10 ಲಕ್ಷ ವರೆಗೆ ಸಾಲ ನೀಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 4,55,457 ರೈತರಿಗೆ ₹50,010 ಕೋಟಿ ಸಾಲ ನೀಡಲಾಗಿದೆ. ಇದೇ ಅವಧಿಯಲ್ಲಿ 10.7 ಲಕ್ಷ ರೈತರ 2359 ಕೋಟಿ ರೂ ಸಾಲವನ್ನು ಮನ್ನಾ ಮಾಡಲಾಗಿದೆ.

‘ಇದೀಗ 2017ರ ಜೂನ್ 20ಕ್ಕೆ ಅನ್ವಯವಾಗುವಂತೆ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ 50 ಸಾವಿರ ವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗಿದೆ. ಇದರಿಂದಾಗಿ ರಾಜ್ಯದ 22,27,506 ರೈತರ ಒಟ್ಟು ₹8165 ಕೋಟಿ ಸಾಲ ಮನ್ನಾ ಮಾಡಿದಂತಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group