ವರದಿಗಾರ: ಭಾರತ ದೇಶಕ್ಕೆ ಕೆಲಸ ಮಾಡುವ ಪ್ರಧಾನಿ ಬೇಕೇ ಹೊರತು ಮಾತನಾಡುವ ಪ್ರಧಾನಿಯಲ್ಲ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
‘ಮೂರು ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ ಏನು ಮಾಡಿದೆ’ ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನೆಗೆ ಅಮಿತ್ ಷಾ ಪ್ರತಿಕ್ರಿಯಿಸುತ್ತಾ , ಪಕ್ಷವು ಈ ದೇಶಕ್ಕೆ ಮಾತನಾಡುವ ಪ್ರಧಾನಿಯನ್ನು ನೀಡಿದೆ ಎಂಬ ಹೇಳಿಕೆಯನ್ನು ನೀಡಿದ್ದರು.
ಈ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿಕೆಯ ಕುರಿತು ತಿರುಗೇಟು ನೀಡಿರುವ ಮಾಯಾವತಿ, ನಮ್ಮ ದೇಶಕ್ಕೆ ಕೆಲಸ ಮಾಡುವ ಪ್ರಧಾನಿ ಬೇಕೇ ಹೊರತು ಮಾತನಾಡುವ ಪ್ರಧಾನಿಯಲ್ಲ. ಕೊನೆಗೂ ಪ್ರಧಾನಿ ಕೇವಲ ಮಾತನಾಡುತ್ತಾರೆ ಎಂಬುವುದನ್ನು ಇವರು ಒಪ್ಪಿಕೊಂಡಿದ್ದಾರೆ. ಇದೇ ಮೊದಲ ಬಾರಿ ದೇಶಕ್ಕೆ ಜನರೊಂದಿಗೆ ಮಾತನಾಡದೆ ತಾವೊಬ್ಬರೇ ನಿರ್ಧಾರವನ್ನು ಕೈಗೊಳ್ಳುವ ಪ್ರಧಾನಿ ಸಿಕ್ಕಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಆಡಳಿತದಲ್ಲಿರುವ ಬಿಜೆಪಿ ಸರಕಾರ ಬೆಲೆ ಏರಿಕೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮಿತಿ ಮೀರುತ್ತಿದೆ. ಕೇಂದ್ರದ ಮಾದರಿಯನ್ನೇ ಉತ್ತರ ಪ್ರದೇಶದಲ್ಲೂ ಜಾರಿಗೆ ತರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
