ರಾಷ್ಟ್ರೀಯ ಸುದ್ದಿ

ಅಮಿತ್ ಶಾರ ಮಗನ ‘ಸಂಶಯಾಸ್ಪದ’ ವ್ಯವಹಾರ ಬಯಲಿಗೆಳೆದ ‘ದಿ ವೈರ್’ : ನಡುಗಿದ ದಿಲ್ಲಿ ದರ್ಬಾರ್!

ಬಿಜೆಪಿ ಅಧಿಕಾರಕ್ಕೇರಿದ ಒಂದೇ ವರ್ಷದಲ್ಲಿ ಹದಿನಾರು ಸಾವಿರ ಪಟ್ಟು ಹೆಚ್ಚಿದ ವಹಿವಾಟು!

ಜಯ್ ಶಾ ಪರವಾಗಿ ವಾದಿಸಲು ರೆಡಿಯಾದ ಸಾಲಿಸಿಟರ್ ಜನರಲ್ !

ಶಾ ಪರವಾಗಿ ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಬ್ಯಾಟಿಂಗ್ ; ಕಾರಣ ಗೊತ್ತೆಂದ ಟ್ವಿಟ್ಟರಿಗರು!

ಅಮಿತ್ ಶಾ ಕೇರಳ ಭೇಟಿ ರದ್ದುಗೊಳ್ಳಲು ಇದೇ ಕಾರಣವೆಂದು ಅಣಕವಾಡಿದ ಟ್ವಿಟ್ಟರಿಗರು !

ವರದಿಗಾರ :  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರ ಮಗ ಜಯ್  ಶಾ ನೇತೃತ್ವದ ‘ಟೆಂಪಲ್ ಎಂಟರ್’ಪ್ರೈಸಸ್’ ಕಂಪನಿ , ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮತ್ತು ತಂದೆ ಅಮಿತ್ ಶಾ ಬಿಜೆಪಿ ಅಧ್ಯಕ್ಷನಾದ ನಂತರದ ಒಂದು ವರ್ಷದ ವಹಿವಾಟಿನಲ್ಲಿ  ಒಟ್ಟು 16000 ಪಟ್ಟು ಏರಿಕೆಯಾಗಿದ್ದು, ಈ ಕುರಿತು ‘ದಿ ವೈರ್’ ಅಂತರ್ಜಾಲ ಸುದ್ದಿ ತಾಣ,  ತನಿಖಾ ವರದಿಯೊಂದನ್ನು ಹೊರ ತಂದಿದ್ದು, ಕಾಂಗ್ರೆಸ್ ಇದರ ಬಗ್ಗೆ ವಿಸ್ತೃತ ತನಿಖೆಯೊಂದನ್ನು ನಡೆಸಬೇಕೆಂದು ಪಟ್ಟು ಹಿಡಿದಿದೆ. 50,000 ವಹಿವಾಟಿನಲ್ಲಿ 18,728 ರೂಗಳ ಲಾಭ ಗಳಿಸಿದ್ದ ಕಂಪನಿ, ಮುಂದಿನ ವರ್ಷ 80.5 ಕೋಟಿ ರೂಗಳ ವಹಿವಾಟು ನಡೆಸಿ 1.4 ಕೋಟಿಗಳ ನಷ್ಟವನ್ನು ತೋರಿಸಿದ್ದನ್ನು ತನಿಖಾ ವರದಿ ಬೊಟ್ಟು ಮಾಡಿದೆ. . ವಿಪರ್ಯಾಸವೆಂದರೆ ಭ್ರಷ್ಟಾಚಾರದ ಕುರಿತು ಪುಂಖಾನುಪುಂಖ ಭಾಷಣಗೈಯ್ಯುವ ನರೇಂದ್ರ ಮೋದಿಯ ಸಚಿವ ಸಂಪುಟದ ಸಚಿವರುಗಳೇ ಅಮಿತ್ ಶಾರ ಮಗನ ಅವ್ಯವಹಾರದ ಪರ ಬ್ಯಾಟಿಂಗ್ ಮಾಡುತ್ತಿರುವುದು !

‘ದಿ ವೈರ್’ ವರದಿಯಲ್ಲಿರುವಂತೆ “ಟೆಂಪಲ್‌ ಎಂಟರ್‌ ಪ್ರೈಸಸ್” ಸಂಸ್ಥೆಯು ರಿಜಿಸ್ಟ್ರಾರ್‌ ಆಫ್‌ ಕಂಪೆನೀಸ್‌ ಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ 2013 ಮತ್ತು 2014ರಲ್ಲಿ ಕ್ರಮವಾಗಿ ರು.6, 230 ಮತ್ತು ರು.1,724 ನಷ್ಟ ಅನುಭವಿಸಿತ್ತು.  ಆದರೆ 2014–15ರಲ್ಲಿ ಕಂಪೆನಿ ರೂ 50 ಸಾವಿರ ವಹಿವಾಟು ನಡೆಸಿ, ಕಂಪೆನಿಯು ರೂ.18,728 ಲಾಭ ಗಳಿಸಿದೆ. 2015-16 ರಲ್ಲಿ  80.5 ಕೋಟಿ ರೂಗಳ ವಹಿವಾಟು ನಡೆಸಿತ್ತೆಂದು ವರದಿಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 2016ರಲ್ಲಿ ಕಂಪನಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತು. ಹಿಂದೆ ಅನುಭವಿಸಿದ್ದ ನಷ್ಟದ ಕಾರಣದಿಂದಾಗಿತ್ತು ಕಂಪನಿಯನ್ನು ಸ್ಥಗಿತಗೊಳಿಸಿತ್ತು ಎಂದು ನಿರ್ದೇಶಕರ ವರದಿಯಲ್ಲಿ ತಿಳಿಸಲಾಗಿತ್ತು.

ಕುತೂಹಲಕರ ಸಂಗತಿಯೆಂದರೆ ‘ದಿ ವೈರ್’ ಈ ತನಿಖಾ ವರದಿಯನ್ನು ಅಕ್ಟೋಬರ್ 8 ರಂದು ಪ್ರಕಟಿಸಿತ್ತು. ಅಕ್ಟೋಬರ್ 6 ರಂದು ತನಿಖಾ ವರದಿ ಸಿದ್ಧಪಡಿಸಿದ ವರದಿಗಾರ್ತಿ ರೋಹಿಣಿ ಸಿಂಗ್, ವಾಟ್ಸಪ್ ಮೂಲಕ ಜಯ್ ಶಾರವರಲ್ಲಿ ಸ್ಪಷ್ಟೀಕರಣ ಕೇಳಿ ಸಂದೇಶ ಕಳಿಸುತ್ತಾರೆ. ಅದಕ್ಕೆ ಉತ್ತರಿಸುವ ಜಯ್, ತಾನು ಈಗ ಹೊರಗಡೆ ಇರುವುದಾಗಿಯೂ, ತಮ್ಮ ಪ್ರಶ್ನೆಗಳನ್ನು ನನ್ನ ಚಾರ್ಟಡ್ ಅಕೌಂಟಂಟ್’ಗೆ ಕಳಿಸಿದ್ದಾಗಿಯೂ ಹೇಳುತ್ತಾರೆ.

ಆದರೆ ‘ದಿ ವೈರ್’ ಸ್ಥಾಪಕ ಸಿದ್ಧಾರ್ಥ್ ಪ್ರಕಾರ ಜಯ್ ಶಾ ತನ್ನ ಸಿ ಎ ಗೆ ಮಾಹಿತಿ ನೀಡುವ ಬದಲು ಸರಕಾರದ ಅಡಿಶನಲ್ ಸಾಲಿಸಿಟರ್ ಜನರಲ್ (ASG) ತುಷಾರ್ ಮೆಹ್ತಾರವರಿಗೆ ಈ ಮಾಹಿತಿ ನೀಡಿದ್ದಾರೆ ಎಂದಾಗಿದೆ.

ಇದಕ್ಕೆ ಪೂರಕವಾಗಿ ಅದೇ ದಿನ ಸರಕಾರಿ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ  ಹೇಳಿಕೆಯೊಂದನ್ನು ನೀಡಿ, ‘ತಾನು ಜಯ್ ಶಾರ ಪರವಾಗಿ ಕೋರ್ಟಿನಲ್ಲಿ ವಾದಿಸುವುದಾಗಿ ಹೇಳಿರುವುದು ಸಿದ್ಧಾರ್ಥ್’ರವರ ವಾದಕ್ಕೆ ಪುಷ್ಟಿ ನೀಡುತ್ತದೆ.  ಓರ್ವ ಸರಕಾರಿ ಅಭಿಯೋಜಕ ‘ಖಾಸಗಿ ವ್ಯಕ್ತಿ’ಯ ಕೇಸಿನಲ್ಲಿ ಯಾಕೆ ಅಷ್ಟೊಂದು ಮುತುವರ್ಜಿ ವಹಿಸುವುದೆಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ‘ದಿ ವೈರ್’ ತಂಡದ ಸ್ಥಾಪಕಾಧ್ಯಕ್ಷ ಸಿದ್ಧಾರ್ಥ್ ಟ್ವೀಟ್ ಕೂಡಾ ಮಾಡಿದ್ದಾರೆ. ತುಷಾರ್ ಮೆಹ್ತಾ ಹಲವಾರು ಸಿಬಿಐ ಕೇಸುಗಳಲ್ಲಿ ಕೇಂದ್ರ ಸರಕಾರದ ಪರವಾಗಿ ವಾದಿಸುವವರಾಗಿದ್ದಾರೆ. ತುಷಾರ್ ಮೆಹ್ತಾ ಈ ಖಾಸಗಿ ಕೇಸಿನ ಪರ ವಾದಿಸಬೇಕಾದರೆ ಕಾನೂನು ಸಚಿವಾಲಯದ ಅನುಮತಿ ಪಡೆಯಬೇಕಾಗಿದೆ. ಈ ಹಂತದಲ್ಲಿ ಅದು ಅಷ್ಟೊಂದು ಕಷ್ಟಕರವೆಂದು ಅನಿಸುವುದಿಲ್ಲ ಕೂಡಾ. ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಆರೋಪಿಗಳ ಪರವಾಗಿ ಸರಕಾರಿ ವಕೀಲರೇ ವಾದಿಸಲು ಮುಂದೆ ಬಂದಿರುವುದು ಸರಕಾರ ಕಾನೂನನ್ನು ಎಷ್ಟರ ಮಟ್ಟಿಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎನ್ನುವುದಕ್ಕೆ ಒಂದು ಉದಾಹರಣೆಯಾಗಿದೆ.

 

ಬಿಜೆಪಿಯ ಸುತ್ತ ಅನುಮಾನಗಳ ಹುತ್ತ

ಬಿಜೆಪಿ ಜಯ್ ಶಾ ‘ಓರ್ವ ಖಾಸಗಿ ವ್ಯಕ್ತಿ’ ಎಂದಷ್ಟೇ ಹೇಳಿ ಈ ಎಲ್ಲಾ ಘಟನೆಗಳಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಮೋದಿ ಸಂಪುಟದ ಮಂತ್ರಿಯಾಗಿರುವ ಪಿಯೂಶ್ ಗೋಯೆಲ್ ಖುದ್ದಾಗಿ ಪತ್ರಿಕಾಗೋಷ್ಟಿ ನಡೆಸಿ, ಈ ವರದಿ ಪ್ರಕಟಿಸಿರುವ ‘ದಿ ವೈರ್’ ಅಂತರ್ಜಾಲ ಸುದ್ದಿ ತಾಣದ ವಿರುದ್ಧ ಅಮಿತ್ ಶಾರ ಮಗ 100 ಕೋಟಿ ರೂಗಳ ಮಾನ ನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದು ಆಶ್ಚರ್ಯಕರವಾಗಿದೆ.

ಓರ್ವ ಜವಾಬ್ದಾರಿಯುತ ಸಚಿವ ‘ಖಾಸಗಿ ವ್ಯಕ್ತಿ’ಯ ವಿಷಯಗಳಲ್ಲಿ ಮೂಗು ತೂರಿಸುವ ಬೇಜವಾಬ್ದಾರಿ ತೋರಿಸಿದ್ದನ್ನು ಟ್ವಿಟ್ಟರಿಗರೂ ಪ್ರಶ್ನಿಸಿದ್ದಾರೆ. ಟ್ವಿಟ್ಟರಿಗರೇ ಇದಕ್ಕೆ ಉತ್ತರಿಸಿದ್ದು, ಅಮಿತ್ ಶಾರವರ ಮಗ ಜಯ್ ಶಾ ತನ್ನ ಕಂಪನಿಗೆ ಸಾಲ ತೆಗೆದುಕೊಂಡಿದ್ದೆಂದು ಹೇಳಲಾಗಿರುವ IREDA ಸಂಸ್ಥೆಯು ಅಂದು ಪಿಯೂಶ್ ಗೋಯೆಲ್’ರವರ ಖಾತೆಯಡಿಯಲ್ಲಿ ಬರುತ್ತದೆ. ಇದಕ್ಕಾಗಿ ಪಿಯೂಶ್ ಗೋಯೆಲ್ ಇಂದು ಈ ಕುರಿತು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆಂದು ಟ್ವಿಟ್ಟರಿಗರು ಟ್ವೀಟ್’ನಲ್ಲಿ ಚಾಟಿ ಬೀಸಿದ್ದಾರೆ.

ಅಮಿತ್ ಶಾ ಕೇರಳ- ಮಂಗಳೂರು ಯಾತ್ರೆ ರದ್ದಾಗಲು ಕಾರಣ ಇದೇ ಆಗಿತ್ತೇ?

ಇದೇ ವೇಳೆ ಅಕ್ಟೋಬರ್ 5 ರ ನಂತರದ ತನ್ನ ಕೇರಳ ಮತ್ತು ಮಂಗಳೂರು ಯಾತ್ರೆಯನ್ನು ಮಧ್ಯದಲ್ಲೇ ಯಾವುದೇ ಕಾರಣಗಳನ್ನು ನೀಡದೆ ರದ್ದುಗೊಳಿಸಿ ದೆಹಲಿಗೆ ವಾಪಾಸ್ ಹೋಗಿದ್ದರು. ಇದಕ್ಕೆ ಹಲವಾರು ಕಾರಣಗಳನ್ನು ಬಿಜೆಪಿ ಮೂಲಗಳು ನೀಡಿತ್ತಾದರೂ ಯಾರೂ ಅದನ್ನು ಸ್ಪಷ್ಟಪಡಿಸಿರಲಿಲ್ಲ. ಆದರೆ ಟ್ವಿಟ್ಟರಿಗರು ಇಲ್ಲೂ ಕೂಡಾ ಅಮಿತ್ ಶಾ ತನ್ನ ಕೇರಳ ಯಾತ್ರೆ ರದ್ದುಪಡಿಸಿದ್ದು ಇದೇ ಕಾರಣಕ್ಕಾಗಿದೆ ಎಂದು ಹೇಳಿಕೊಂಡಿದ್ದಾರೆ. ‘ದಿ ವೈರ್’ ತಂಡ ಜಯ್ ಶಾಗೆ ಸ್ಪಷ್ಟೀಕರಣ ಕೇಳಿ ಸಂದೇಶ ಕೇಳಿದ್ದ ದಿನವೇ ( ಅಕ್ಟೋಬರ್ 5) ಅಮಿತ್ ಶಾ ದೆಹಲಿಗೆ ವಾಪಾಸಾಗಿದ್ದರೆಂಬುವುದು ಇಲ್ಲಿ ಮಹತ್ವ ಪಡೆಯುತ್ತದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group