ರಾಷ್ಟ್ರೀಯ ಸುದ್ದಿ

ಗೋಧ್ರಾ ರೈಲು ಹತ್ಯಾಕಾಂಡ: 11 ಅಪರಾಧಿಗಳ ಮರಣದಂಡನೆ ಜೀವಾವಧಿಯಾಗಿ ಪರಿವರ್ತನೆ

ವರದಿಗಾರ: ಗುಜರಾತ್ ರೈಲು ಹತ್ಯಾಕಾಂಡ ಪ್ರಕರಣದಲ್ಲಿ 11 ಅಪರಾಧಿಗಳ ಶಿಕ್ಷೆ ಎತ್ತಿ ಹಿಡಿದಿರುವ ಗುಜರಾತ್‌ ಹೈಕೋರ್ಟ್‌ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ 2011ರ ಮಾರ್ಚ್‌ 1ರಂದು 11 ಜನರಿಗೆ ಮರಣದಂಡನೆಯನ್ನು ವಿಧಿಸಿತ್ತು.

ಘಟನೆಯಲ್ಲಿ ಸಾವಿಗೀಡಾದ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗುಜರಾತ್‌ ಸರಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.

ವಿಶೇಷ ತನಿಖಾ ತಂಡದ ತನಿಖೆ ಬಳಿಕ ವಿಶೇಷ ನ್ಯಾಯಲಯವು ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದ 31 ಜನರ ಪೈಕಿ 11 ಮಂದಿಗೆ ಮರಣದಂಡನೆ ಮತ್ತು ಇತರ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು ಹಾಗೂ 63 ಜನರನ್ನು ಖುಲಾಸೆಗೊಳಿಸಿತ್ತು. ಈ ತೀರ್ಪು ಪ್ರಶ್ನಿಸಿ ಗುಜರಾತ್‌ ಹೈಕೋರ್ಟ್‌ನಲ್ಲಿ ಹಲವು ಮೇಲ್ಮನವಿಗಳು ಸಲ್ಲಿಕೆಯಾಗಿದ್ದವು.

2002ರ ಫೆಬ್ರುವರಿ 27ರಂದು ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದರಿಂದ ಅಯೋಧ್ಯೆಯಿಂದ ಮರಳುತ್ತಿದ್ದ 59 ಕರಸೇವಕರು ಸಜೀವ ದಹನವಾಗಿದ್ದರು. ಗೋಧ್ರಾ ರೈಲು ಹತ್ಯಾಕಾಂಡದ ನಂತರ ಗುಜರಾತ್‌ನ ಅನೇಕ ಕಡೆಗಳಲ್ಲಿ ಕೋಮು ಗಲಭೆಯಾಗಿ 1,200 ಜನರ ಹತ್ಯೆ ನಡೆದಿತ್ತು. ಈ ಬಗ್ಗೆ ಹಲವು ತನಿಖಾ ತಂಡಗಳು ಹತ್ಯೆಯಾದವರ ಸಂಖ್ಯೆ 2,500ಕ್ಕಿಂತಲೂ ಹೆಚ್ಚಿತ್ತು ಎಂದು ಹೇಳಿತ್ತು.

ತನಿಖೆಗೆ ಗುಜರಾತ್‌ ಸರಕಾರ ರಚಿಸಿದ್ದ ನಾನಾವತಿ ಆಯೋಗವು, ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹೊತ್ತಿರುವುದು ಆಕಸ್ಮಿಕ ಅಲ್ಲ, ಪೆಟ್ರೋಲ್ ಸುರಿದು ಬೋಗಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯನ್ನು ಸಲ್ಲಿಸಿತ್ತು.

2011ರಲ್ಲಿ ವಿಶೇಷ ನ್ಯಾಯಾಲಯ ತೀರ್ಪು:
ಆರಂಭದಲ್ಲಿ ಒಟ್ಟು 134 ಮಂದಿಯನ್ನು ಆರೋಪಿಗಳೆಂದು ಹೇಳಲಾಗಿದ್ದು 14 ಮಂದಿಯನ್ನು ಸಾಕ್ಷ್ಯಗಳ ಕೊರತೆಯಿಂದ ಬಿಡುಗಡೆ ಮಾಡಲಾಗಿತ್ತು. ಐವರು ಬಾಲಾಪರಾಧಿಗಳಾಗಿದ್ದರು ಮತ್ತು ಒಂಬತ್ತು ವರ್ಷಗಳ ವಿಚಾರಣೆ ಅವಧಿಯಲ್ಲಿ ಐವರು ಅಸು ನೀಗಿದ್ದರು ಹಾಗೂ 16 ಮಂದಿ ನಾಪತ್ತೆಯಾಗಿದ್ದರು. ಹೀಗಾಗಿ 94 ಆರೋಪಿಗಳ ವಿರುದ್ಧ ವಿಚಾರಣೆ ನಡೆಸಲಾಗಿತ್ತು.

ಈ 94 ಆರೋಪಿಗಳಲ್ಲಿ ಪ್ರಮುಖ ಆರೋಪಿಗಳಾದ ಮೌಲಾನಾ ಉಮರ್ಜಿ, ಮೊಹಮ್ಮದ್ ಹುಸೇನ್ ಕಲೊಟಾ, ಮೊಹಮ್ಮದ್ ಅನ್ಸಾರಿ ಮತ್ತು ನನುಮಿಯಾ ಚೌಧುರಿ ಸೇರಿದಂತೆ 63 ಮಂದಿಯನ್ನು ಖುಲಾಸೆಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಗುಜರಾತ್‌ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಗೋಧ್ರಾ ರೈಲು ಹತ್ಯಾಕಾಂಡದ ನಂತರದ ಪ್ರಮುಖ ಘಟನಾವಳಿಗಳು :

2002 ಫೆ. 27: ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದರಿಂದ 59 ಕರಸೇವಕರ ಸಜೀವ ದಹನ.

ಫೆ. 28- ಮಾರ್ಚ್ 31: ಗುಜರಾತ್‌ನ ಅನೇಕ ಕಡೆಗಳಲ್ಲಿ ಕೋಮು ಗಲಭೆ, 1,200 ಮಂದಿಯ ಹತ್ಯೆ. ಸತ್ತವರಲ್ಲಿ ಬಹುತೇಕರು ಮುಸ್ಲಿಮರು.

ಮಾರ್ಚ್ 3: ರೈಲು ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬಂಧಿಸಿದವರ ಮೇಲೆ ‘ಪೋಟಾ’ ಕಾಯ್ದೆ ಹೇರಿಕೆ.

ಮಾರ್ಚ್ 6: ಗೋಧ್ರಾ ಹತ್ಯಾಕಾಂಡ ಮತ್ತು ನಂತರ ನಡೆದ ಕೋಮು ಗಲಭೆಗಳ ತನಿಖೆಗೆ ವಿಚಾರಣಾ ಆಯೋಗದ ನೇಮಕ.

ಮಾರ್ಚ್ 9: ಬಂಧಿತರ ವಿರುದ್ಧ ಐಪಿಸಿ ಕಲಂ 120 ಬಿ ಪ್ರಕಾರ ಕ್ರಿಮಿನಲ್ ಸಂಚಿನ ಆರೋಪ.

ಮಾರ್ಚ್ 27: ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು, ಬಂಧಿತರ ವಿರುದ್ಧ ಹೇರಲಾಗಿದ್ದ ‘ಪೋಟಾ’ ರದ್ದು.

ಮೇ 27: 54 ಜನರ ವಿರುದ್ಧ ಮೊದಲ ದೋಷಾರೋಪ ಪಟ್ಟಿ ಸಲ್ಲಿಕೆ.

2003, ಫೆ. 18: ಬಿಜೆಪಿ ರಾಜ್ಯದಲ್ಲಿ ಪುನಃ ಆಯ್ಕೆಯಾದ ಬಳಿಕ ಬಂಧಿತರ ವಿರುದ್ಧ ಮತ್ತೆ ‘ಪೋಟಾ’ ಹೇರಿಕೆ.

2003, ನ. 21: ಗೋಧ್ರಾ ಹತ್ಯಾಕಾಂಡ ಸೇರಿದಂತೆ ಎಲ್ಲ ಕೋಮು ಗಲಭೆಗಳ ನ್ಯಾಯಾಂಗ ವಿಚಾರಣೆ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ತಡೆ.

2004, ಸೆ. 4: ಲಾಲು ಪ್ರಸಾದ ರೈಲ್ವೆ ಸಚಿವರಾಗಿದ್ದಾಗ ಗೋದ್ರಾ ಘಟನೆಯ ತನಿಖೆಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಯು. ಸಿ. ಬ್ಯಾನರ್ಜಿ ಸಮಿತಿ ನೇಮಕ.

2004, ಸೆ. 21: ಕೇಂದ್ರದ ಯುಪಿಎ ಸರ್ಕಾರ ಪೋಟಾ ರದ್ದುಪಡಿಸಿದ್ದರಿಂದ ಗೋದ್ರಾ ಬಂಧಿತರ ವಿರುದ್ಧ ಪೋಟಾ ಕಾಯ್ದೆಯಡಿ ಹೂಡಲಾಗಿದ್ದ ಪ್ರಕರಣ ರದ್ದಿಗೆ ಪರಿಶೀಲನೆ.

2005, ಜ. 17: ಯು. ಸಿ.ಬ್ಯಾನರ್ಜಿ ಸಮಿತಿಯಿಂದ ಪ್ರಾಥಮಿಕ ವರದಿ ಸಲ್ಲಿಕೆ. ಎಸ್-6 ಬೋಗಿಯಲ್ಲಿ ಬೆಂಕಿ ಆಕಸ್ಮಿಕ ಎಂಬ ಅಭಿಪ್ರಾಯ ನೀಡಿಕೆ.

2005, ಮೇ 16: ಆಪಾದಿತರ ವಿರುದ್ಧ ಪೋಟಾ ಕಾಯ್ದೆಯಡಿ ಪ್ರಕರಣ ದಾಖಲಿಸದಂತೆ ಪೋಟಾ ಪುನರ್ವಿಮರ್ಶಾ ಸಮಿತಿಯ ಸಲಹೆ.

2006, ಅ. 13: ನಾನಾವತಿ ಆಯೋಗವು ಎಲ್ಲ ಗಲಭೆಗಳ ವಿಚಾರಣೆ ನಡೆಸುತ್ತಿರುವುದರಿಂದ ಬ್ಯಾನರ್ಜಿ ಸಮಿತಿ ರಚನೆ ಕಾನೂನು ಮತ್ತು ಸಂವಿಧಾನ ಬಾಹಿರ ಹಾಗೂ ಈ ಸಮಿತಿಯ ಪ್ರಾಥಮಿಕ ವರದಿಗೆ ಬೆಲೆ ಇಲ್ಲ ಎಂದು ಗುಜರಾತ್ ಹೈಕೋರ್ಟ್ ತೀರ್ಪು.

2008, ಮಾರ್ಚ್ 26: ಗೋದ್ರಾ ಹತ್ಯಾಕಾಂಡ ಮತ್ತು ಇತರ ಎಂಟು ಕೋಮು ಗಲಭೆಗಳ ತನಿಖಗೆ ಸುಪ್ರೀಂಕೋರ್ಟ್‌ನಿಂದ ವಿಶೇಷ ತನಿಖಾ ತಂಡ ರಚನೆ.

2008, ಸೆ. 18: ನಾನಾವತಿ ಆಯೋಗದ ವರದಿ ಸಲ್ಲಿಕೆ. ಪೂರ್ವ ಯೋಜಿತ ಸಂಚಿನಿಂದ ನಡೆದ ಕೃತ್ಯ, ಪೆಟ್ರೋಲ್ ಸುರಿದು ಬೋಗಿಗೆ ಬೆಂಕಿ ಹಚ್ಚಲಾಗಿದೆ ಎಂಬ ಅಂಶವನ್ನು ಒಳಗೊಂಡ ವರದಿ.

2009, ಫೆ. 12: ಪೋಟಾ ಪುನರ್ವಿಮರ್ಶಾ ಸಮಿತಿಯ ಸಲಹೆಗೆ ಹೈಕೋರ್ಟ್ ಮಾನ್ಯತೆ.

2009, ಫೆ. 20: ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಗೋದ್ರಾ ಸಂತ್ರಸ್ತರಿಂದ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ.

2009, ಮೇ 1: ಗೋದ್ರಾ ಹತ್ಯಾಕಾಂಡ ಮತ್ತು ಇತರ ಕೋಮು ಗಲಭೆ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂಕೋರ್ಟ್.

2009, ಜೂನ್ 1: ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಗೋದ್ರಾ ಹತ್ಯಾಕಾಂಡ ವಿಚಾರಣೆ ಪುನರಾರಂಭ.

2010, ಮೇ 6: ಗೋದ್ರಾ ಹತ್ಯಾಕಾಂಡ ಪ್ರಕರಣ ಸೇರಿದಂತೆ 9 ಕೋಮು ಗಲಭೆ ಪ್ರಕರಣದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ.

2010, ಸೆ. 28: ವಿಚಾರಣೆ ಮುಕ್ತಾಯ. ತಡೆಯಾಜ್ಞೆ ಇದ್ದುದರಿಂದ ತೀರ್ಪು ಪ್ರಕಟನೆ ಮುಂದಕ್ಕೆ.

2011, ಜ. 18: ಸುಪ್ರೀಂಕೋರ್ಟ್‌ನಿಂದ ತಡೆಯಾಜ್ಞೆ ತೆರವು.

2011, ಫೆ. 22: ವಿಶೇಷ ತ್ವರಿತ ನ್ಯಾಯಾಲಯದಿಂದ ತೀರ್ಪು ಪ್ರಕಟ .

2011, ಮಾರ್ಚ್‌ 1: ಗುಜರಾತ್ ರೈಲು ಹತ್ಯಾಕಾಂಡದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದ 31 ಜನರ ಪೈಕಿ 11 ಮಂದಿಗೆ ಮರಣದಂಡನೆ ಮತ್ತು ಇತರ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group