ವರದಿಗಾರ: ಅತ್ಯಾಚಾರ ಪ್ರಕರಣದ ಆರೋಪಿ, ಸ್ವಯಂ ಘೋಷಿತ ದೇವ ಮಾನವ, ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ಗೆ ಶಿಕ್ಷೆ ಪ್ರಕಟವಾದ ಸಂದರ್ಭದಲ್ಲಿ ಪಂಚಕುಲಾದಲ್ಲಿ ಹಿಂಸಾಚಾರ ನಡೆಸುವಂತೆ ಆತನ ದತ್ತುಪುತ್ರಿ ಎಂದು ಹೇಳಲಾಗುತ್ತಿರುವ ಹನಿಪ್ರೀತ್ ಇನ್ಸಾನ್ 5ಕೋಟಿಯನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಡೇರಾ ಸಚ್ಚಾ ಸೌಧಾದ ಇಬ್ಬರು ಸದಸ್ಯರಿಗೆ ತಲಾ 1.25 ಕೋಟಿ ರೂಪಾಯಿ ಹಣವನ್ನು ಹಂಚಿದ್ದರು ಎಂದು ಹರಿಯಾಣ ಪೊಲೀಸ್ ತಿಳಿಸಿದ್ದಾರೆ.
ಹನಿಪ್ರೀತ್ ಮತ್ತು ಬಂಧನಕ್ಕೊಳಗಾಗಿರುವ ಚಂಕೊರ್ ಸಿಂಗ್ ಮತ್ತು ದಾನ್ ಸಿಂಗ್ ವಿಚಾರಣೆಯ ಸಂದರ್ಭದಲ್ಲಿ ಹಣ ಹಂಚಿದ್ದ ಮಾಹಿತಿ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿರುವುದಾಗಿ ವರದಿ ಮಾಡಿವೆ.
ಹನಿಪ್ರೀತ್ ವಿಚಾರಣೆ ವೇಳೆ ದಾರಿತಪ್ಪಿಸುತ್ತಿದ್ದು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪಂಚಕುಲಾ ಪೊಲೀಸ್ ಆಯುಕ್ತ ಎ.ಎಸ್.ಚಾವ್ಲಾ ಹೇಳಿದ್ದಾರೆ
ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ಗೆ ಶಿಕ್ಷೆ ಪ್ರಕಟವಾದ ದಿನ ಆಗಸ್ಟ್ 25ರಂದು ನಡೆದ ಭಾರೀ ಹಿಂಸಾಚಾರದಲ್ಲಿ 35 ಮಂದಿ ಮೃತಪಟ್ಟಿದ್ದರು.
