ವರದಿಗಾರ : ಪೂರ್ವ ಜೆರುಸಲೆಮ್’ನ ಶುವಫತ್ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲಿ ಸೈನ್ಯವು ಸೋಮವಾರ ರಾತ್ರಿ 11 ರ ಹರೆಯದ ಫ್ಯಾಲೇಸ್ತೀನಿಯನ್ ಬಾಲಕನ ತಲೆಗೆ ರಬ್ಬರ್ ಗುಂಡನ್ನು ಹೊಡೆದಿದೆ.
ಇಸ್ರೇಲಿ ಪಡೆಗಳು ರಬ್ಬರ್ ಲೇಪಿತ ಉಕ್ಕಿನ ಗುಂಡನ್ನು ಬಾಲಕನ ಹಣೆಗೆ ಹೊಡೆದಿದೆ. ಬಾಲಕನನ್ನು ಜೆರುಸಲೇಮ್’ನಲ್ಲಿರುವ ಇಸ್ರೇಲಿನ ಹದಸ್ಸಾ ಮೆಡಿಕಲ್ ಸೆಂಟರ್’ಗೆ ತಲುಪಿಸಲಾಯಿತು ಎಂದು ಫ್ಯಾಲೇಸ್ತೀನಿಯನ್ ರೆಡ್ ಕ್ರೆಸೆಂಟ್ ಹೇಳಿದೆ.
ಮಾನ್ ನ್ಯೂಸ್ ಏಜೆನ್ಸಿ ಪ್ರಕಾರ, ನಿರಾಶ್ರಿತರ ಶಿಬಿರಕ್ಕೆ ಪ್ರವೇಶಿಸಿದ ಇಸ್ರೇಲಿ ಪಡೆಗಳು ಅಲ್ಲಿನ ಸ್ಥಳೀಯ ಯುವಕರೊಂದಿಗೆ ಘರ್ಷಣೆಗಿಳಿಯಿತು. ರಬ್ಬರ್ ಬುಲೆಟಿನಿಂದ ಈ ಬಾಲಕನಲ್ಲದೆ 60ರ ಹರೆಯದ ವ್ಯಕ್ತಿಯೋರ್ವರ ಸಹಿತ ಮೂವರು ಫ್ಯಾಲೆಸ್ತೀನಿಯರು ಗಾಯಗೊಂಡಿದ್ದಾರೆ.
ಫ್ಯಾಲೆಸ್ತೀನಿಯನ್ ಬಾಲಕರ ಮೇಲೆ ಇಸ್ರೇಲಿ ಪಡೆಗಳು ಬುಲೆಟ್ ಪ್ರಯೋಗಿಸುವುದು ಇದೇ ಮೊದಲ ಬಾರಿಯಲ್ಲ, 2014ರ ಡಿಸೆಂಬರ್ ನಲ್ಲಿ ಪೂರ್ವ ಜೇರುಸಲೇಮ್’ನ ಇಸ್ಸಾವಿಯ ಎಂಬಲ್ಲಿ ಇಸ್ರೇಲಿ ಪಡೆಗಳು ಮುಹಮ್ಮದ್ ಜಮಾಲ್ ಉಬೈದ್ ಎಂಬ 5 ವರ್ಷದ ಬಾಲಕನನ್ನು ಆತನು ತನ್ನ ಸ್ಕೂಲ್ ಬಸ್ ನಿಂದ ಕೆಳಗಿಳಿಯುವಾಗ ಬುಲೆಟ್ ಪ್ರಯೋಗಿಸಿ ಗಾಯಗೊಳಿಸಿತ್ತು. ಅದಲ್ಲದೆ, 2015 ಮೇ ತಿಂಗಳಲ್ಲಿ ಶುವಫತ್ ನಿರಾಶ್ರಿತರ ಶಿಬಿರದಲ್ಲಿ ಜೆರುಸಲೇಮ್ ಪೊಲೀಸರು 10 ವರ್ಷದ ಬಾಲಕನ ಕಣ್ಣಿಗೆ ಗುಂಡು ಹೊಡೆದಿತ್ತು. 2016 ರ ನವೆಂಬರ್ ತಿಂಗಳಲ್ಲಿ ಜಲಾಝುನ್ ನಿರಾಶ್ರಿತರ ಶಿಬಿರದಲ್ಲಿ ಫಾರೆಸ್ ಬಾಯೆದ್ ಎಂಬ 15 ವರ್ಷದ ಬಾಲಕನ ತಲೆಗೆ ರಬ್ಬರ್ ಗುಂಡನ್ನು ಹೊಡೆದಿತ್ತು. ಹಲವು ತಿಂಗಳವರೆಗೆ ಕೋಮಾದಲ್ಲಿದ್ದ ಬಾಲಕನು ರಮಲ್ಲಾದ ಆಸ್ಪತ್ರೆಯೊಂದರಲ್ಲಿ ಮರಣ ಹೊಂದಿದನು.
ಇಸ್ರೇಲಿ ಮಾಧ್ಯಮಗಳ ಫ್ಯಾಲೆಸ್ತೀನಿ ವಿರೋಧಿ ಧೋರಣೆಯಿಂದಾಗಿ ಫ್ಯಾಲೆಸ್ತೀನಿ ಮಕ್ಕಳ ಮೇಲೆ ಇಸ್ರೇಲಿ ಪಡೆಗಳು ನಡೆಸುವ ದೌರ್ಜನ್ಯದ ವಿವರಗಳು ಇಸ್ರೇಲಿನ ಸಾಮಾನ್ಯ ಪ್ರಜೆಗೆ ತಲುಪುವುದಿಲ್ಲ.
