ವರದಿಗಾರ : ಇತ್ತೀಚೆಗಷ್ಟೇ ಮುಂಬೈಯ ವಿಶೇಷ ನ್ಯಾಯಾಲಯವೊಂದರಿಂದ ಜಾಮೀನು ಪಡೆದು ಹೊರಬಂದ, ಅಭಿನವ್ ಭಾರತ್ ಸಂಘಟನೆಯ ಕಾರ್ಯಕರ್ತ ಸುಧಾಕರ್ ಚತುರ್ವೇದಿ, ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಾ, ಕಾಂಗ್ರೆಸ್- ಎನ್ ಸಿ ಪಿ ಸರಕಾರವು ತನ್ನನ್ನು ತಪ್ಪಾಗಿ ಆರೋಪಿಸಿತ್ತು ಹಾಗೂ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸತ್ಯ ಹೊರಬಂತು ಎಂದಿದ್ದಾನೆ. ಕಾಂಗ್ರೆಸ್ ಗೂ ಸತ್ಯದ ಅರಿವಿತ್ತು ಆದರೆ ಅವರು ನಿರ್ಲಕ್ಷಿಸಿದರು ಎಂದಿದ್ದಾನೆ.
2016ರ ಮೇ 13ರಂದು ಸುಧಾಕರ್ ಚತುರ್ವೇದಿಯನ್ನು ರಾಷ್ಟ್ರೀಯ ತನಿಖಾದಳವು ಆರೋಪಿಯನ್ನಾಗಿ ಹೆಸರಿಸಿತ್ತು. ಅಭಿನವ್ ಭಾರತ್ ಸಂಘಟನೆಯ ಪೂರ್ಣಾವಧಿ ಕಾರ್ಯಕರ್ತನಾಗಿದ್ದ ಚತುರ್ವೇದಿ, ಇತರ ಅರೋಪಿಗಳೊಂದಿಗೆ ಹಲವು ಕಡೆಗಳಲ್ಲಿ ಸಭೆ ನಡೆಸಿ ಕಾನೂನು ಬಾಹಿರ ಚಟುವಟಿಕೆಗಳ ಪಿತೂರಿ ನಡೆಸಿದ್ದಾಗಿ ಹೇಳಿಕೊಂಡಿದ್ದನೆಂದು ಎನ್ ಐ ಎ ತಿಳಿಸಿತ್ತು.
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಪ್ರವೀಣ್ ತಕ್ಕಾಕಿಗೆ ಕ್ಲೀನ್ ಚಿಟ್ ನೀಡಿದ್ದ ಎನ್ ಐ ಎ, ಸುಧಾಕರ್ ಚತುರ್ವೇದಿ, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಕೆಲವರನ್ನು ಅರೋಪಿಗಳೆಂದು ಹೆಸರಿಸಿತ್ತು.
ತನಗೆ ಕೂಡಾ ಕ್ಲೀನ್ ಚಿಟ್ ಸಿಗಬಹುದೆಂಬ ಭರವಸೆಯಿತ್ತು ಎಂದು ಆತ ಹೇಳಿದ್ದಾನೆ. ಸನಾತನ ಸಂಸ್ಥೆ ಹಾಗೂ ಆರೆಸ್ಸೆಸ್ ನಂತಹ ಸಂಘಟನೆಗಳನ್ನು ನಿಷೇಧಿಸಲು ಮಹಾರಾಷ್ಟ್ರ ಎಟಿಎಸ್ ತನ್ನ ವಿರುದ್ಧ ಕೃತಕ ಪುರಾವೆಗಳನ್ನೊದಗಿಸಿದೆ ಎಂದು ಆರೋಪಿಸಿದನು. ತನ್ನ ಪೊಲೀಸ್ ವಿಚಾರಣೆಯ ವೇಳೆ ಎಲ್ ಕೆ ಅಡ್ವಾನಿ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರ ಬಗ್ಗೆ ಕೇಳಲಾಯಿತು ಎಂದು ತಿಳಿಸಿದನು. ಎಟಿಎಸ್ ತನ್ನನ್ನು ಚಿತ್ರಹಿಂಸೆಗೊಳಪಡಿಸಿದೆ ಹಾಗೂ ಅಕ್ರಮವಾಗಿ ಬಂಧನದಲ್ಲಿರಿಸಿತ್ತು ಎಂದೂ ಆರೋಪಿಸಿದ್ದಾನೆ.
