ವರದಿಗಾರ ಡೆಸ್ಕ್: 2002ರ ಗುಜರಾತ್ ಹತ್ಯಾಕಾಂಡದಲ್ಲಿ ಸಂಚು ನಡೆಸಿದ ಆರೋಪದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಇತರರ ವಿರುದ್ಧ ಘಟನೆಯನ್ನು ಪುನರ್ ಪರಿಶೀಲಿಸಿ ತನಿಖೆ ನಡೆಸುವಂತೆ ಆದೇಶವನ್ನು ಕೋರಿ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ್ದ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಾಕಿಯಾ ಜಾಫ್ರಿ ಮತ್ತು ಸಾಮಾಜಿಕ ಹೋರಾಟಗಾರ್ತಿ ಟೀಸ್ತಾ ಸೆಟಲ್ವಾಡ್ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದ್ದು, ಗುಜರಾತ್ ಕೋಮು ಗಲಭೆಯ ಹಿಂದೆ ದೊಡ್ಡ ಮಟ್ಟದ ಪಿತೂರಿ ಅಡಗಿರಲಿಲ್ಲವೆಂದು ತೀರ್ಪನ್ನು ನೀಡಿದೆ.
ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಸೋನಿಯಾ ಗೊಕಾನಿ ಅವರು, ಇಂದಿನ ತೀರ್ಪಿನಲ್ಲಿ ಅಸಮಾಧಾನವಿದ್ದರೆ ತಮಗೆ ಸುಪ್ರೀಂ ಕೋರ್ಟಿಗೆ ಹೋಗಬಹುದೆಂದು ತಿಳಿಸಿದೆ.
ಈ ಪ್ರಕರಣವನ್ನು ವಿಶೇಷ ತನಿಖಾ ತಂಡದ ತನಿಖೆಗೆ ಆದೇಶಿಸುವ ಅಧಿಕಾರವು ತನಗಿಲ್ಲ ಎಂಬ ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಝಾಕಿಯಾ ಜಾಫ್ರಿ ಗೆ ಹೈಕೋರ್ಟ್ ಅವಕಾಶ ನೀಡಿತ್ತು.
ಸುಪ್ರೀಕೋರ್ಟ್ ನಿಂದ ನೇಮಿಸಲ್ಪಟ್ಟಿರುವ ವಿಶೇಷ ತನಿಖಾ ತಂಡ (SIT) 2012ರಲ್ಲಿ ನರೇಂದ್ರ ಮೋದಿ ಸಹಿತ ಇತರ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿತ್ತು. ಸಿಟ್ ವರದಿ ಪ್ರಶ್ನಿಸಿ ಜಾಫ್ರಿ ಅಹ್ಮದಾಬಾದ್ ಮೆಟ್ರೊಪಾಲಿಟಿನ್ ಮ್ಯಾಜಿಸ್ಟೇಟ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಪ್ರಿಯವರ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನಲೆಯಲ್ಲಿ ಜಾಫ್ರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
