ವರದಿಗಾರ-ದೆಹಲಿ: ರಾಜಕೀಯ ಸೇರುವ ಇಚ್ಛಾಶಕ್ತಿ ಹೊಂದಿದ ಯುವಕರು ಮೊದಲು ಮದುವೆಯಾಗಬೇಕು ಎಂದು ಬ್ರಹ್ಮಚಾರಿಯಾಗಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸಲಹೆ ನೀಡಿದ್ದಾರೆ.
ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅವಿವಾಹಿತರಾಗಿ ಉಳಿಯುವುದು ಅಷ್ಟು ಸುಲಭದ ವಿಷಯವಲ್ಲ. ಹೀಗಿರುವುದು ಕತ್ತಿಯ ಮೇಲಿನ ನಡಿಗೆಗಿಂತಲೂ ಕಷ್ಟಕರ ಎಂದು ಹಿರಿಯರಾದ ಹಜಾರೆ ಹೇಳಿದ್ದಾರೆ. ನನ್ನ ಹಾದಿಯನ್ನು ನೀವು ಅನುಸರಿಸಿ ಮದುವೆಯಾಗದೇ ಇರಬೇಡಿ. ಯಾಕೆಂದರೆ ಕಳಂಕ ರಹಿತ ಜೀವನ ನಡೆಸಲು ಅದು ಕಷ್ಟವಾಗಬಹುದು ಎಂದು ಅಣ್ಣಾ ಹಜಾರೆ ಕಿವಿಮಾತು ನೀಡಿದ್ದಾರೆ.
2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ ಅವರು, ವಿದೇಶಗಳಲ್ಲಿ ಇರಿಸಿದ್ದ ಕಪ್ಪು ಹಣವನ್ನು ವಾಪಸ್ ತರುವ ವಿಚಾರದಲ್ಲಿ ಭಾರತವು ಇತರ ದೇಶಗಳಿಂದ ಪಾಠ ಕಲಿಯಬೇಕು ಎಂದರು.
ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಅಪಾಯಕಾರಿ ಬೆಳವಣಿಗೆಯಾಗಿದೆ, ಅಲ್ಲೇ ಭ್ರಷ್ಟಾಚಾರ ಹೆಚ್ಚಿದರೆ ಜನರಿಗೆ ಹೇಗೆ ನ್ಯಾಯ ಸಿಗಲು ಸಾಧ್ಯ ಎಂದು ಅಣ್ಣಾ ಹಜಾರೆ ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.
2011ರಲ್ಲಿ ಹಜಾರೆ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆ ಹಮ್ಮಿಕೊಂಡಾಗ, ವಯಸ್ಸಿನ ಅಂತರವಿಲ್ಲದೇ ಅವರಿಗೆ ದೇಶದಾದ್ಯಂತ ಜನಬೆಂಬಲ ವ್ಯಕ್ತವಾಗಿತ್ತು.
