ವರದಿಗಾರ ಡೆಸ್ಕ್ : 2016 ನವಂಬರ್ 10 ರಂದು ಮೈಸೂರು ಸಬ್ ಜೈಲಿನಲ್ಲಿ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವಿಚಾರಣಾಧೀನ ಖೈದಿಯಾಗಿದ್ದ ಮಂಗಳೂರು ಮೂಲದ ಮುಸ್ತಫಾ ಕಾವೂರು ಎಂಬವರನ್ನು ಜೈಲಿನೊಳಗಡೆ ಹತ್ಯೆಗೈದಿದ್ದ ಕಿರಣ್ ಶೆಟ್ಟಿ ಅಲಿಯಾಸ್ ಗೂಂಡಾ ಬಾಂಬೇ ಕಿರಣ್ ಎಂಬಾತನ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಳ್ಳಿ ಹಾಕಿದೆ.
ಮಂಗಳೂರು ಪರಿಸರದಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣವೊಂದರಲ್ಲಿ ಅದಾಗಲೇ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಈತ ವಿಚಾರಣಾಧೀನ ಖೈದಿಯಾಗಿ ಮೈಸೂರು ಜೈಲಿನಲ್ಲಿದ್ದ. ಅಡುಗೆ ಸೌಟನ್ನು ಹರಿತವಾದ ಆಯುಧವನ್ನಾಗಿಸಿ ಜೈಲಿನೊಳಗಡೆ ಮುಸ್ತಫಾ ಕಾವೂರ್ ಎಂಬವರನ್ನು ಇರಿದು ಹತ್ಯೆಗೈದಿದ್ದ. ವಿಧಿ ವಿಜ್ಞಾನ ವರಧಿಯ ಪ್ರಕಾರ ಇದು ದೃಢಪಟ್ಟಿದ್ದು, ಮುಸ್ತಫಾ ಕಾವೂರರ ಮೈಮೇಲೆ 44 ಬಾರಿ ಇರಿತದ ಗಾಯಗಳು ಇದ್ದವೆಂದು ವರದಿ ತಿಳಿಸಿತ್ತು. ಈ ಪ್ರಕರಣದಲ್ಲಿ ಆತ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಪಬ್ಲಿಕ್ ಪ್ರಾಸಿಕ್ಯೂಶನ್ ಆರೋಪಿಯ ಜಾಮೀನಿಗೆ ವಿರೋಧ ವ್ಯಕ್ತಪಡಿಸಿತ್ತು. ಮುಸ್ತಫಾ ಕಾವೂರರ ಹೆಂಡತಿ ಕೂಡಾ ಆರೋಪಿಗೆ ಜಾಮೀನು ನೀಡಬಾರದಾಗಿ ತನ್ನ ವಕೀಲ ಅಬ್ದುಲ್ ಲತೀಫ್’ರವರ ಮೂಲಕ ಮನವಿ ಸಲ್ಲಿಸಿದ್ದರು. ಈ ವಾದವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ಆರೋಪಿಯ ಜಾಮೀನನ್ನು ನಿರಾಕರಿಸಿ ತೀರ್ಪು ನೀಡಿದೆ.
