ವರದಿಗಾರ ವಿಶೇಷ

ಭಾರತದ ಸಂವಿಧಾನ ತಿರುಚುವಿಕೆಗೆ ಪ್ರಯತ್ನಿಸುತ್ತಿದೆಯೇ ಆರೆಸ್ಸೆಸ್?

ವರದಿಗಾರ ಡೆಸ್ಕ್ : ಹೀಗೊಂದು ಪ್ರಶ್ನೆ ಬಹಳ ಕಾಲದಿಂದಲೂ ದೇಶದ ಜನರನ್ನು ಕಾಡುತ್ತಿದೆ. ಈ ಕುರಿತು ‘ನ್ಯಾಶನಲ್ ಹೆರಾಲ್ಡ್’ ಗೆ ನೀಡಿರುವ ಸಂದರ್ಶನದಲ್ಲಿ ಆರೆಸ್ಸೆಸ್ ನಾಯಕ ಗೋವಿಂದಾಚಾರ್ಯ ‘ಭಾರತದ ಸಂವಿಧಾನದಿಂದ ಜಾತ್ಯತೀತತೆ ಮತ್ತು ಸಮಾಜವಾದವನ್ನು ತೊಡೆದು ಹಾಕಬೇಕಾಗಿದೆ’ ಎಂದು ಹೇಳಿದ್ದಾರೆ. ಅವರ ಮಾತುಗಳಲ್ಲಿ ಬಲಪಂಥೀಯ ವಿಚಾರಧಾರೆಗಳು ಸದ್ದಿಲ್ಲದೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಕುರಿತು ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ವಿವರಗಳಿವೆ. ಗೋವಿಂದಾಚಾರ್ಯ ತನ್ನನ್ನೋರ್ವ ‘ಮಾಜಿ ಆರೆಸ್ಸೆಸ್’ ಕಾರ್ಯಕರ್ತ ಎಂದು ಹೇಳಿಕೊಳ್ಳಲು ಇಷ್ಟಪಡುತ್ತಾರಾದರೂ, ಎಲ್ಲೂ ಅವರು ಆರೆಸ್ಸೆಸ್ಸನ್ನು ತ್ಯಜಿಸಿದ ಬಗ್ಗೆ ಉಲ್ಲೇಖಿಸಿಲ್ಲ. ಮಾತ್ರವಲ್ಲ ಎಂದಿಗೂ ತನ್ನ ಬಲಪಂಥೀಯ ವಿಚಾರಧಾರೆಗಳಿಂದ ಹೊರ ಬಂದವರಲ್ಲ. ಆರೆಸ್ಸೆಸನ್ನು ಬಲ್ಲ ಯಾರಿಗೂ ಆರೆಸ್ಸೆಸ್ಸಿನಲ್ಲಿ ಯಾರೂ ‘ಮಾಜಿ’ಗಳಾಗಲ್ಲ ಎನ್ನುವುದೂ ಒಂದು ಸತ್ಯವಾಗಿದೆ. 74ರ ಹರೆಯದ ಗೋವಿಂದಾಚಾರ್ಯ, ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ‘ರಾಷ್ಟ್ರೀಯ ಸ್ವಾಭಿಮಾನ’  ಎಂಬ ಆಂದೋಲನ ಹುಟ್ಟು ಹಾಕಿ, ಆ ಮೂಲಕ ತನ್ನ ಕನಸಿನ ‘ಭಾರತ’ವನ್ನು ನಿರ್ಮಿಸಬೇಕಾಗಿದೆ ಎಂದಿದ್ದರು.  ‘ನ್ಯಾಶನಲ್ ಹೆರಾಲ್ಡ್’ ನಡೆಸಿದ ಸಂದರ್ಶನದಲ್ಲಿ ಗೋವಿಂದಾಚಾರ್ಯ  ಸಂವಿಧಾನದಲ್ಲಿನ ಜಾತ್ಯತೀತತೆ ಪದವನ್ನು ಪಾಶ್ಚಿಮಾತ್ಯ ದೇಶಗಳಿಂದ ಎರವಲು ಪಡೆದಿದ್ದು, ಅದನ್ನು ಇಲ್ಲವಾಗಿಸಬೇಕಾಗಿದೆ’ ಎಂದಿದ್ದಾರೆ.

 

ಸಂದರ್ಶನದ ವಿವರಗಳು ಇಲ್ಲಿದೆ:

ಇತ್ತೀಚೆಗೆ ಮೋಹನ್ ಭಾಗ್ವತ್ ಭಾರತದ ಸಂವಿಧಾನವನ್ನು ತಿದ್ದುಪಡಿಗೊಳಿಸಬೇಕಾಗಿದೆ ಎಂದಿದ್ದರು, ತಾವು 2016 ರಲ್ಲಿ ‘ಭಾರತೀಯತೆ’ಗಾಗಿ ಅದನ್ನು ಮರು ಬರೆಯಬೇಕಾಗಿದೆ ಎಂದಿದ್ದೀರಿ. ಎರಡೂ ಹೇಳಿಕೆಗಳಿಗೇನಾದರೂ ಸಾಮ್ಯತೆಗಳಿವೆಯೇ?

ತಿದ್ದುಪಡಿ ಮತ್ತು ಮತ್ತೊಮ್ಮೆ ಬರೆಯುವುದು ಎರಡು ಬೇರೆ ಬೇರೆ ವಿಷಯಗಳು. ನಮ್ಮ ಗುರಿ ಸಂವಿಧಾನವನ್ನು ಭಾರತಕ್ಕನುಗುಣವಾಗಿ ಬದಲಾವಣೆಗೊಳಿಸುವುದಾಗಿದೆ. ತಿದ್ದುಪಡಿಯಿಂದ ಇದನ್ನು ಪ್ರಾರಂಭಿಸುವುದಾರೆ ಅದರಲ್ಲಿ ತಪ್ಪೇನಿಲ್ಲ. ಆದರೆ ತಿದ್ದುಪಡಿ ಎನ್ನುವುದು ಅಲ್ಪಾವಧಿಯ ಉದ್ದೇಶವನ್ನಷ್ಟೆ ಹೊಂದಿರುತ್ತದೆ ಆದರೆ ಮತ್ತೊಮ್ಮೆ ಬರೆಯುವುದು ದೀರ್ಘಾವಧಿಯ ಉದ್ದೇಶಗಳನ್ನು ಪೂರ್ತಿಗೊಳಿಸುತ್ತದೆ. ಇಬ್ಬರು ವ್ಯಕ್ತಿಗಳು ಒಂದೇ ಗುರಿಯನ್ನು ಎರಡು ಪದಗಳಲ್ಲಿ ಕರೆಯಬಹುದಾಗಿದೆ.

ಸಂವಿಧಾನದಲ್ಲಿರುವ ತಮ್ಮ ಆಕ್ಷೇಪಣೆಗಳೇನು?

ನಮ್ಮ ಸಂವಿಧಾನವು ಪ್ರತ್ಯೇಕತಾವಾದದ ಕಲ್ಪನೆಯನ್ನು ಆಧರಿಸಿದೆ. ಇದು ಭಾರತೀಯ ಮೌಲ್ಯ ವ್ಯವಸ್ಥೆಯ ವಿರುದ್ಧವಾಗಿರುವ ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತದೆ. ಒಬ್ಬ ವ್ಯಕ್ತಿ ಮತ್ತು ರಾಜ್ಯಗಳ ನಡುವಿನ ಸಂಬಂಧವನ್ನು ಪ್ರತಿಬಿಂಬಿಸುವ ಸಿದ್ಧಾಂತವೆಂದೂ ನೀವದನ್ನು ಕರೆಯಬಹುದು. ಆದರೆ ಭಾರತೀಯ ನಾಗರಿಕತೆಯು ಕುಟುಂಬ ವ್ಯವಸ್ಥೆ, ಸಂಗ್ರಹಣೆಯ ಆಧಾರದ ಮೇಲೆ ಅವಲಂಬಿತವಾಗಿದೆ. ಜಾತಿ ವ್ಯವಸ್ಥೆ, ಪಂಚಾಯತ್ ವ್ಯವಸ್ಥೆ ಮುಂತಾದ ನಮ್ಮ ಸಮಾಜದ ಇತರ ಪ್ರಮುಖ ಅಂಶಗಳು ಸಂವಿಧಾನದಲ್ಲಿ ಪ್ರತಿಬಿಂಬಿಸಲ್ಪಟ್ಟಿಲ್ಲ. ಪ್ರತ್ಯೇಕತಾವಾದವು ಪಶ್ಚಿಮ ಕಲ್ಪನೆಯಾಗಿದೆ. ಇದು ಭಾರತೀಯ ಸಂವಿಧಾನದ ಆಧಾರವಾಗಿರಬಾರದು. ಒಂದು ಹೊಸ ಸಂವಿಧಾನವನ್ನು ಬರೆಯಬೇಕು, ಇದು ಸರ್ವರ (ಎಲ್ಲರೂ) ಪರವಾಗಿ ಮಾತನಾಡಬೇಕು, ಒಂದು ವ್ಯಕ್ತಿಯ ಪರವಾಗಿಯಲ್ಲ.

ಪ್ರತ್ಯೇಕತಾವಾದ ಹೊರತಾಗಿನ ನೀವು ಪ್ರತಿಪಾದಿಸುವ ಸಂವಿಧಾನದ ಪರಿಕಲ್ಪನೆಯೇನು?

ಸಂವಿಧಾನದಲ್ಲಿ ಹಕ್ಕುಗಳು ಮತ್ತು ಕರ್ತವ್ಯಗಳ ನಡುವೆ ಅಸಮತೋಲನವಿದೆ. ಉದಾಹರಣೆಗೆ, ‘ಮಾನವ ಹಕ್ಕುಗಳು’ ಇಂದು ಬಹಳಷ್ಟು ಚರ್ಚೆಯಲ್ಲಿರುವ ವಿಷಯವಾಗಿದೆ. ಆದರೆ ಪರಿಶೀಲನೆ ಸಮತೋಲನವಿಲ್ಲದೆ ಯಾವುದೇ ಹಕ್ಕುಗಳು ಇರುವುದಿಲ್ಲ ಎಂದು ಒಬ್ಬರು ತಿಳಿದಿರಬೇಕು. ಸಂವಿಧಾನವು ನಮಗೆ ಮೂಲಭೂತ ಹಕ್ಕನ್ನು ಕೊಟ್ಟರೆ ಅದು ಮೂಲಭೂತ ಕರ್ತವ್ಯಗಳನ್ನು ಕೂಡ ಉಲ್ಲೇಖಿಸುತ್ತದೆ. ಆದರೆ ಅದರ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ. ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪರಸ್ಪರ ಸಂಬಂಧಿಸಿ ನೋಡಬೇಕು. ನಿಮ್ಮ ಹಕ್ಕುಗಳನ್ನು ಚಲಾಯಿಸಲು, ನೀವು ನಿಮ್ಮ ಕರ್ತವ್ಯಗಳನ್ನು ಅನುಸರಿಸಬೇಕು. ಯಾರೂ ಸಂಪೂರ್ಣ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುವುದಿಲ್ಲ.

ನೀವು ಸಂವಿಧಾನದ ಪೀಠಿಕೆಯನ್ನೂ ಬದಲಾಯಿಸುತ್ತೀರಾ ಹಾಗಾದರೆ?

ಸಂವಿಧಾನದ ಪೀಠಿಕೆ ಭಾರತದ ಮೌಲ್ಯಗಳಿಗೆ ವಿರುದ್ಧವಾಗಿದೆ. ‘ಜಾತ್ಯತೀತತೆ’ ಮತ್ತು ‘ಸಮಾಜವಾದ’ ಸಂವಿಧಾನಕ್ಕೆ ಏಕೆ ಸೇರಿಸಲ್ಪಟ್ಟಿದೆ? ತುರ್ತು ಪರಿಸ್ಥಿತಿಯಲ್ಲಿ 42 ನೇ ತಿದ್ದುಪಡಿಯ ನಂತರ ಜಾತ್ಯತೀತತೆ ಮತ್ತು ಸಮಾಜವಾದವನ್ನು ಸೇರಿಸಲಾಯಿತು.

ಪಾಶ್ಚಾತ್ಯ ದೇಶಗಳಲ್ಲಿ ಕೆಲವು ಐತಿಹಾಸಿಕ ಅವಶ್ಯಕತೆಗಳಿಂದ ಜಾತ್ಯತೀತತೆ ಹುಟ್ಟಿಕೊಂಡಿತು. ಪಶ್ಚಿಮ ದೇಶಗಳಲ್ಲಿ ಪೋಪ್ ಮತ್ತು ರಾಜರ ನಡುವೆ ಅಧಿಕಾರದ ವಿಭಜನೆಯನ್ನು ಜಾತ್ಯತೀತತೆ ಎಂದು ವ್ಯಾಖ್ಯಾನಿಸಲಾಗಿದೆ. ಅದು ಭಾರತಕ್ಕೆ ಅನ್ವಯವಾಗುವುದಿಲ್ಲ. ಭಾರತ ಮತ್ತು ಭಾರತೀಯತೆ ಶತಮಾನಗಳಿಂದಲೂ ಅಸ್ತಿತ್ವದಲ್ಲಿತ್ತು ಎಂಬುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.

ನಾವು ಜನ್ಮತಃ  ‘ಜಾತ್ಯತೀತ’ರು.  ಪಾಶ್ಚಿಮಾತ್ಯರಿಂದ ಎರವಲು ಪಡೆದ ಜಾತ್ಯತೀತತೆಯ ಅಗತ್ಯ ನಮಗಿಲ್ಲ. ಭಾರತದಲ್ಲಿ ಹುಟ್ಟಿದ ಪ್ರತಿಯೊಂದು ಧರ್ಮವೂ ಜಾತ್ಯತೀತವಾಗಿದೆ, ಆದರೆ ಇಲ್ಲಿಗೆ ಬಂದ ಇಸ್ಲಾಂ ಅಥವಾ ಕ್ರೈಸ್ತ ಧರ್ಮದ ಅನುಯಾಯಿಗಳು ಕೋಮುವಾದಿಗಳಾಗಿದ್ದಾರೆ. ಭಾರತದಲ್ಲಿ ಜಾತ್ಯತೀತತೆಯ ಅರ್ಥವೇನು? ಇದು ಹಿಂದೂಗಳ ವಿರೋಧ ಮತ್ತು ಮುಸ್ಲಿಮರ ಅಥವಾ ಇತರ ಅಲ್ಪಸಂಖ್ಯಾತರ ಮನವೊಲಿಸುವಿಕೆಯನ್ನು ಸೂಚಿಸುತ್ತದೆ. ನಾವು ಸಾಧ್ಯವಾದಷ್ಟು ಬೇಗ ಈ ಪದವನ್ನು ತೊಡೆದುಹಾಕಬೇಕು. ಭಾರತೀಯ ಸನ್ನಿವೇಶದಲ್ಲಿ ಇದು ಸಂಪೂರ್ಣವಾಗಿ ಅಪ್ರಸ್ತುತವಾಗಿದೆ.

ಸಮಾಜವಾದದ ಕುರಿತು ತಮ್ಮ ನಿಲುವುಗಳೇನು?

ಸಮಾಜವಾದದ ಅರ್ಥವೇನೆಂದು ನಾವಿನ್ನೂ ನಿರ್ಧರಿಸಿಲ್ಲ. ನಮ್ಮಲ್ಲೇ ಕೆಲವರಿಗೆ ಈ ಕುರಿತು ಸಂಶಯಗಳಿವೆ. ಸಮಾಜವಾದವು ಸಂಖ್ಯಾಶಾಸ್ತ್ರ ಅಥವಾ ಉತ್ಪಾದನೆಯ ಸಾಮಾಜಿಕತೆ ಎಂದು ಅರ್ಥವೇನು? ರಷ್ಯಾದಲ್ಲಿ ಜನಿಸಿದ ಸಮಾಜವಾದವು ಪ್ರತಿಗಾಮಿ ಸಿದ್ಧಾಂತವಾಗಿದೆ. ತುರ್ತು ಪರಿಸ್ಥಿತಿಯಲ್ಲಿ 42 ನೇ ತಿದ್ದುಪಡಿಯ ನಂತರ ಇದನ್ನು ಅಳವಡಿಸಲಾಯಿತು. ಸಮಾಜವಾದದ ಚೈತನ್ಯವನ್ನು ವ್ಯಕ್ತಪಡಿಸಲು – ನಾವು ಭಾರತೀಯ ಸಂಪ್ರದಾಯದ ಪ್ರಕಾರ ಉತ್ತಮವಾದ ಪದವನ್ನು ಹೊಂದಿದ್ದೇವೆ. ಅದು ಅಂತ್ಯೋದಯವಾಗಿದೆ. ಎಂದರೆ ಅಂತಿಮ್ ಆದ್ಮಿ (ಕೊನೆಯ ವ್ಯಕ್ತಿ). ಕೊನೆಯ ವ್ಯಕ್ತಿಯನ್ನೂ ಮನಸ್ಸಿನಲ್ಲಿರಿಸಿಯಾಗಿರಬೇಕು ನಮ್ಮೆಲ್ಲಾ ಕಾರ್ಯಗಳು. ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಪದವನ್ನು ಕೂಡ ತೆಗೆದು ಹಾಕಬೇಕಾಗಿದೆ

ಭಾರತ ಒಂದು ಪ್ರಜಾಸತ್ತಾತ್ಮಕ ರಾಷ್ಟ್ರ, ಇದಕ್ಕೂ ನಿಮ್ಮ ಆಕ್ಷೇಪಣೆಗಳಿವೆಯೇ?

ಪ್ರಜಾಪ್ರಭುತ್ವದ ಕಲ್ಪನೆಯು ಮುಖ್ಯವಾದುದು, ಪದವಲ್ಲ. ನಾವು ಅಳವಡಿಸಿಕೊಂಡಿರುವ ವ್ಯವಸ್ಥೆಯು ಹಲವು ನ್ಯೂನತೆಗಳನ್ನು ಹೊಂದಿದೆ. ಇದು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವಲ್ಲ. ನಮ್ಮನ್ನು ಸ್ಪರ್ಧಾತ್ಮಕ ಪ್ರಜಾಪ್ರಭುತ್ವವೆಂದು ಕರೆಯಲಾಗುತ್ತದೆ. ಸ್ಪರ್ಧಾತ್ಮಕತೆ, ಒಮ್ಮತ ಮತ್ತು ಒಗ್ಗೂಡುವಿಕೆಯ ಬದಲಿಗೆ ಪ್ರಜಾಪ್ರಭುತ್ವದ ಚೈತನ್ಯವಾಗಿರಬೇಕು. ನಮ್ಮ ಅಧಿಕಾರ ಹಂಚಿಕೆಯ ನಿಯಮಗಳೂ ಬದಲಾಗಬೇಕಿದೆ

ನೀವು ಯಾವುದೇ ಕರಡು ತಯಾರಿಸಿದ್ದೀರಾ? ಈ ನಿಟ್ಟಿನಲ್ಲಿ ನೀವು ಸರ್ಕಾರದೊಂದಿಗೆ ಯಾವುದೇ ಸಮಾಲೋಚನೆಯನ್ನು ನಡೆಸಿದ್ದೀರಾ?

ನಾವು ಬಹಳ ಮೌನವಾಗಿ ಇದನ್ನು ಮಾಡುತ್ತಿದ್ದೇವೆ. ಚರ್ಚೆಗಳು ಸ್ವಲ್ಪ ಕಾಲದಿಂದ ನಡೆಯುತ್ತಿವೆ. ನಾನು ನಿಮಗೆ ಹೇಳಿದ್ದೆಲ್ಲವೂ ಚರ್ಚೆಯ ಆರಂಭಿಕ ಫಲಿತಾಂಶಗಳಾಗಿವೆ. ನಾವು ಸಮಾಜದ ಪ್ರತಿಯೊಂದು ವಿಭಾಗದಿಂದ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇವೆ. ಅನೇಕ ಸಂಶೋಧನಾ ಸಂಸ್ಥೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಈ ಪ್ರಕ್ರಿಯೆಯಲ್ಲಿ ತೊಡಗಿವೆ. ಮುಂದಿನ ವರ್ಷದ ಅಂತ್ಯದ ವೇಳೆಗೆ (2018), ನಿಮ್ಮೊಂದಿಗೆ ಹಂಚಿಕೊಳ್ಳಲು ಏನಾದರೂ ವಿಷಯಗಳು ಇರಲಿದೆ ಎನ್ನುವ ಕುರಿತು ನಾನು ಭರವಸೆ ಹೊಂದಿದ್ದೇನೆ. ಸಂವಿಧಾನ ಸಮಿತಿಯು ನಮ್ಮ ಸಂವಿಧಾನವನ್ನು ಅಂತಿಮಗೊಳಿಸಲು  ಮೂರು ವರ್ಷಗಳ ಕಾಲ ತೆಗೆದುಕೊಂಡಿತು. ಆದರೆ ನಾವು ಸ್ವಲ್ಪ ಹೆಚ್ಚು ಸಮಯವನ್ನು ತೆಗೆದುಕೊಳ್ಳಬಹುದು. ಆದರೆ ಅದನ್ನು ಮಾಡಿಯೇ ತೀರುತ್ತೇವೆ ಎಂಬ ವಿಶ್ವಾಸವಿದೆ.

ಏಕಕಾಲಿಕ ಚುನಾವಣೆಗಳ ಬಗ್ಗೆ ಚರ್ಚೆ ಇದೆ. ನೀವು ಅದರ ಬಗ್ಗೆ ಏನು ಯೋಚಿಸುತ್ತೀರಿ?

ಸೈದ್ಧಾಂತಿಕವಾಗಿ, ನಾನು ಏಕಕಾಲದಲ್ಲಿ ಚುನಾವಣೆಗೆ ಬೆಂಬಲ ಕೊಡುವೆನು,  ಆದರೆ ಅದರ ಅನುಷ್ಠಾನದ ಬಗ್ಗೆ ನನಗೆ ಅನುಮಾನವಿದೆ. ಅದನ್ನು ಹೇಗೆ ಕಾರ್ಯಗತಗೊಳಿಸಲಾಗುವುದು? ಏಕಕಾಲಿಕ ಚುನಾವಣೆ ನಡೆಸಲು ಒಂದೇ ಸಮಯದಲ್ಲಿ ಎಲ್ಲಾ ರಾಜ್ಯ ಸಭೆಗಳನ್ನು ನೀವು ಹೇಗೆ ವಿಸರ್ಜಿಸಬಹುದು? ಅವಿಶ್ವಾಸ ಮತ ಗೊತುವಳಿಗೆ ಏನಾಗುತ್ತದೆ? ಲೋಕಸಭೆಯ ಅಧಿಕಾರಾವಧಿಗೆ ಅನುಗುಣವಾಗಿ ಅಸೆಂಬ್ಲಿಯ ಅವಧಿಯನ್ನು ಸರಿ ಹೊಂದಿಸಬಹುದೇ? ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group