ವರದಿಗಾರ-ತಿರುವನಂತಪುರಂ: ಹಾದಿಯಾ-ಶಫಿನ್ ಜಹಾನ್ ವಿವಾಹವನ್ನು ರದ್ದುಗೊಳಿಸಿ ಕೇರಳ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಯುವತಿಯನ್ನು ಬಲವಂತವಾಗಿ ಮತಾಂತರಿಸಲಾಗಿದೆ ಎಂದು ಆಕೆಯ ಹೆತ್ತವರು ಆರೋಪಿಸಿದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ವಿವಾಹವನ್ನು ರದ್ದುಪಡಿಸಿದ್ದರೆ, ತಂದೆಯೊಬ್ಬ ತನ್ನ 24 ವರ್ಷದ ಪುತ್ರಿಯ ಹಕ್ಕುಗಳನ್ನು ಪ್ರಶ್ನಿಸಬಹುದೇ? ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಈ ಹಿಂದೆ ಕೇರಳ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹಾದಿಯಾ ತನ್ನ ಹೆತ್ತವರ ರಕ್ಷಣೆಯಲ್ಲಿರಬೇಕೆಂದು ಹೇಳಿತ್ತು. ಈ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 16ರಂದು ಎನ್ಐಎಗೆ ವಹಿಸಿತ್ತು.
“ಸಂವಿಧಾನದ 226ನೇ ವಿಧಿಯನ್ವಯ ಹೈಕೋರ್ಟ್ ವಿವಾಹವೊಂದನ್ನು ರದ್ದು ಪಡಿಸಬಹುದೇ?” ಎಂದು ಮಂಗಳವಾರದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪ್ರಶ್ನಿಸಿದ್ದಾರೆ. “ನಾವು ಒಂದೋ ಲೊಕೊ ಪೇರೆಂಟಿಸ್(ಹೆತ್ತವರ ಜವಾಬ್ದಾರಿ ವಹಿಸಲು ವ್ಯಕ್ತಿ ಯಾ ಸಂಘಟನೆಗೆ ಕಾನೂನಾತ್ಮಕ ಜವಾಬ್ದಾರಿ ವಹಿಸುವುದು) ನೇಮಿಸುತ್ತೇವೆ. ಇಲ್ಲವೇ ಅವಳನ್ನು ಎಲ್ಲಿಯಾದರೂ ಸುರಕ್ಷಿತ ಸ್ಥಳಕ್ಕೆ ಕಳುಹಿಸುತ್ತೇವೆ. ಆಕೆಯನ್ನು ತನ್ನ ವಶಕ್ಕೆ ಒಪ್ಪಿಸಬೇಕೆಂದು ತಂದೆಯೊಬ್ಬ ಹೇಳುವ ಹಾಗಿಲ್ಲ” ಎಂದು ಜಸ್ಟಿಸ್ ಮಿಶ್ರಾ ಹೇಳಿದರು.
ಹಾದಿಯಾಳ ಪತಿ ಶಫಿನ್ ಜಹಾನ್ ಪರ ವಾದಿಸುತ್ತಿರುವ ಹಿರಿಯ ವಕೀಲ ದುಷ್ಯಂತ್ ದವೆ ತಮ್ಮ ವಾದ ಮಂಡಿಸುತ್ತಾ, “ಸುಪ್ರೀಂ ಕೋರ್ಟ್ ತನ್ನ ವ್ಯಾಪ್ತಿಯನ್ನು ಮೀರಿದೆ. ಎನ್ಐಎ ತನಿಖೆಯು ಈ ಬಹು ಧರ್ಮೀಯ ದೇಶದ ಬುನಾದಿಯನ್ನೇ ಅಲುಗಾಡಿಸುತ್ತಿದೆ” ಎಂದು ಹೇಳಿದರಲ್ಲದೆ “ಇಬ್ಬರು ಬಿಜೆಪಿ ನಾಯಕರು ಕೂಡ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರನ್ನು ವಿವಾಹವಾಗಿದ್ದಾರೆ. ಈ ವಿಚಾರದಲ್ಲೂ ಎನ್ಐಎ ತನಿಖೆಗೆ ಆದೇಶಿಸುತ್ತೀರಾ?” ಎಂದೂ ಪ್ರಶ್ನಿಸಿದ್ದಾರೆ.
ಈ ಪ್ರಕರಣ ಸಂಬಂಧ ಅಫಿದಾವತ್ ಸಲ್ಲಿಸುವ ಸಲುವಾಗಿ ಕೇರಳ ಸರಕಾರ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿತ್ತು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 9ರಂದು ನಡೆಯಲಿದೆ. ತನ್ನನ್ನು ಬಲವಂತವಾಗಿ ಮತಾಂತರಿಸಲಾಗಿದೆ ಎಂಬ ಆರೋಪವನ್ನು ಹಾದಿಯಾ ನಿರಾಕರಿಸಿದ್ದಾಳೆ.
