ವರದಿಗಾರ-ಗುಜರಾತ್: ಗಾರ್ಬಾ ನೋಡುತ್ತಿದ್ದ ಎಂಬ ಏಕೈಕ ಕಾರಣಕ್ಕೆ ದಲಿತ ಯುವಕನನ್ನು ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಓರ್ವ ಯುವಕನ ಸಾವಿಗೆ ಕಾರಣವಾದ ಘಟನೆ ಗುಜರಾತ್ ನ ಆನಂದ್ ಜಿಲ್ಲೆಯಲ್ಲಿ ನಡೆದಿದೆ.
ನವರಾತ್ರಿಯ ಪ್ರಯುಕ್ತ ಊರಿನ ದೇವಸ್ಥಾನದ ಬಳಿ ಆಯೋಜಿಸಿದ್ದ ಪ್ರತಿವರ್ಷದಂತೆ ನಡೆಯುವ ಗರ್ಬಾ ನೃತ್ಯ ನೋಡುತ್ತಿದ್ದ ನಾಲ್ವರು ಯುವಕರನ್ನು ಸ್ಥಳೀಯ ಪಟೇಲ್ ಸಮುದಾಯದ ಯುವಕರು ಮಾರಣಾಂತಿಕವಾಗಿ ಹಲ್ಲೆಗೈದಿದ್ದಾರೆ. ಜಯೇಶ್ ಸೋಲಂಕಿ ಹಾಗೂ ಸಹೊದರ ಪ್ರಕಾಶ್ ಸೋಲಂಕಿ ಎಂಬ ದಲಿತ ಯುವಕರು ತನ್ನ ಇತರ ಇಬ್ಬರು ದಲಿತ ಗೆಳೆಯರೊಂದಿಗೆ ಮುಂಜಾನೆ ಸುಮಾರು 4 ಗಂಟೆಯ ಸುಮಾರಿಗೆ ಗರ್ಬಾ ನೃತ್ಯ ನೋಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಪಟೇಲ್ ಸಮುದಾಯದ ಜನರು “ನಿಮಗೆ ಗರ್ಬಾ ನೋಡುವ ಯಾವುದೇ ಹಕ್ಕಿಲ್ಲ” ಎಂದು ಹೇಳುತ್ತಾ ಥಳಿಸಲಾರಂಭಿಸಿದ್ದಾರೆ. ಈ ಥಳಿತದಲ್ಲಿ ಜಯೇಶ್ ಸೋಲಂಕಿ ಎಂಬ ಸಾವನ್ನಪ್ಪಿದ್ದರೆ, ಇತರ ಮೂವರು ಯುವಕರು ಗಂಭೀರ ಗಾಯಾಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಎ.ಎಂ. ಪಟೇಲ್ ರವರು ಪ್ರತಿಕ್ರಿಯಿಸುತ್ತಾ “ಉದ್ರಿಕ್ತ ಗುಂಪಿನ ಕಾರಣದಿಂದಾಗಿ ಯುವಕನ ಕೊಲೆಯಾಗಿ. ಇದರಲ್ಲಿ ಯಾವುದೇ ಪೂರ್ವ ವೈಷಮ್ಯವಿಲ್ಲ. ಆರೋಪಿಗಳನ್ನು ತಕ್ಷಣ ಬಂಧಿಸಲಾಗುವುದು” ಎಂದು ಹೇಳಿದ್ದಾರೆ.
ಇದಲ್ಲದೆ ನಿನ್ನೆ ಗುಜರಾತ್ ನ ಎರಡು ಕಡೆಗಳಲ್ಲಿ ದಲಿತ ಯುವಕರು ಪಟೇಲ್ ಸಮುದಾಯದವರ ರೀತಿಯಲ್ಲಿ ನೀಳವಾದ ಮೀಸೆ ಬೆಳೆಸಿದ್ದರು ಎಂಬ ಕಾರಣಕ್ಕಾಗಿ ಥಳಿಸಲ್ಪಟ್ಟಿದ್ದರು. ಥಳಿಸುವ ಸಂದರ್ಭದಲ್ಲಿ “ನಮ್ಮ ಸಮುದಾಯದ ಹಾಗೆ ಮೀಸೆ ಬೆಳೆಸಿದ ಮಾತ್ರಕ್ಕೆ, ದಲಿತರು ನಮ್ಮ ಹಾಗೆ ಆಗಲು ಆಗುವುದಿಲ್ಲ” ಎಂದು ಹೇಳುತ್ತಾ ಥಳಿಸಿದ್ದರು.
