ವರದಿಗಾರ-ದೆಹಲಿ: ಗೋರಕ್ಷಣೆಗೆ ಹಲವು ಮುಸ್ಲಿಮರು ಪ್ರಾಣಾರ್ಪಣೆಯನ್ನು ಮಾಡಿದ್ದಾರೆ. ಅವರು ಗೋವುಗಳ ಪಾಲನೆ ಮತ್ತು ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಗೋವುಗಳ ರಕ್ಷಣೆ ಯಾವುದೇ ಧರ್ಮಕ್ಕೆ ಸೀಮಿತಗೊಳ್ಳಬಾರದೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸಂಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಅವರು ವಿಜಯ ದಶಮಿ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಧರ್ಮವನ್ನು ಮೀರಿ ನಾವೆಲ್ಲರೂ ಗೋವುಗಳ ರಕ್ಷಣೆಯನ್ನು ಮಾಡಬೇಕು ಮತ್ತು ಗೋರಕ್ಷಕರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದಿದ್ದಾರೆ.
ಗೋವುಗಳು ದೇಶದಲ್ಲಿ ಹೆಚ್ಚಾಗಿ ಹಾಲು, ಕೃಷಿಗಳಿಗಾಗಿ ಬಳಸಲಾಗುತ್ತಿದೆ ಮತ್ತು ರೈತರ ಪ್ರಗತಿಗೆ ಗೋವುಗಳು ಅಗತ್ಯವಾಗಿದೆ. ಗೋವುಗಳ ರಕ್ಷಣೆ ಮತ್ತು ಗೋವು ಅವಲಂಬಿತ ಕೃಷಿಯನ್ನು ಸಂರಕ್ಷಿಸಬೇಕೆಂದು ಸಂವಿಧಾನದಲ್ಲೇ ನಿರ್ದೇಶನ ನೀಡಲಾಗಿದೆ ಎಂದು ಅವರು ಈ ವೇಳೆ ಹೇಳಿದ್ದಾರೆ.
