ವರದಿಗಾರ ಥಾಣೆ : ನೈತಿಕ ಪೊಲೀಸ್’ಗಿರಿ ದೇಶದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವುದಕ್ಕೆ ಪುರಾವೆಯಾಗಿ ಥಾಣೆಯ ದೊಂಬಿವಿಲಿ ಪ್ರದೇಶದ ಟೌನ್’ಶಿಪ್ ಒಂದರ ಕೆಲ ಯುವಕರು, ತಮ್ಮ ಪ್ರದೇಶದಲ್ಲಿರುವ ಮಾಲ್ ಒಂದರಲ್ಲಿ ಅಡ್ಡಾಡುತ್ತಿದ್ದ ಯುವ ಜೋಡಿಗಳನ್ನು ತಡೆದು, ರಸ್ತೆ ಮಧ್ಯೆಯೇ ಮೊಣ ಕಾಲೂರುವಂತೆ ಮಾಡಿ, ಬಸ್ಕಿ ತೆಗೆಸಿದ್ದಾರೆ. ಪ್ರಕರಣ ಪಲಾವ ನಗರದ ಕಲ್ಯಾಣ ಶಿಲ್ ರಸ್ತೆಯ ಬಳಿ ನಡೆದಿದೆಯೆನ್ನಲಾಗಿದೆ.
ಮನ್ಪಾಡಾ ಪೊಲೀಸ್ ಮೂಲಗಳ ಪ್ರಕಾರ ಮುಂಬ್ರಾ, ದೊಂಬಿವಿಲಿ, ದೈಘರ್ ಮತ್ತು ಮಹಾಪೆ ಪ್ರದೇಶದ ಯುವ ಜೋಡಿಗಳು ತಮ್ಮ ಕಾಲೇಜು ಸಮಯದಲ್ಲಿ ಮತ್ತು ನಂತರ ಹತ್ತಿರದಲ್ಲೇ ಇರುವ ಎಕ್ಸ್’ಪೀರಿಯಾ ಮಾಲಿನಲ್ಲಿ ಕಾಲ ಕಳೆಯುತ್ತಿರುತ್ತಾರೆ. ಟೌನ್’ಶಿಪ್’ನಿಂದ ಹೊರಗಿನವರೂ ಈ ಮಾಲ್’ಗೆ ಬಂದು ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ. ಇದು ನಮ್ಮ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸ್ಥಳೀಯರು ದೂರುತ್ತಾರೆ.
ಇದನ್ನು ತಡೆಯಲು ಸ್ಥಳೀಯ ಕೆಲ ಯುವಕರು ಕಳೆದ ಬುಧವಾರದಂದು ಇಲ್ಲಿಗೆ ಆಗಮಿಸಿದ್ದ ಯುವ ಜೋಡಿಗಳನ್ನು ತಡೆದು ಬಲವಂತದಿಂದ ಬಸ್ಕಿ ಹೊಡೆಯುವಂತೆ ಮಾಡಿದ್ದರು. ಈ ವೇಳೆ ಆ ಯುವಕರು ಜೋಡಿಗಳ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದೇ ಅಲ್ಲದೆ, ಕೆಟ್ಟ ಪದಗಳನ್ನು ಬಳಸಿ ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ. ಇದು ಸುಮಾರು ಒಂದು ಗಂಟೆಗಳಷ್ಟು ಕಾಲ ನಡೆದಿದ್ದು, ಸ್ಥಳದಲ್ಲಿ ಹಾಜರಿದ್ದವರು ಇದರ ಫೋಟೋ ತೆಗೆಯುತ್ತಾ , ವೀಡಿಯೋ ಮಾಡುತ್ತಾ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಫೋಟೋ ಮತ್ತು ವೀಡಿಯೋ ವೈರಲ್ ಆಗುತ್ತಿದ್ದಂತೆ ಥಾಣೆ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ , ಮನ್ಪಾಡಾ ಪೊಲೀಸ್ ಠಾಣೆಗೆ ಕರೆ ಮಾಡಿ ನೈತಿಕ ಪೊಲೀಸ್’ಗಿರಿ ಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಪ್ರಕಾರ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಾಮಾಜಿಕ ತಾಣಗಲಲ್ಲಿ ವೈರಲ್ ಆಗಿದ್ದ ಫೋಟೋ ಮತ್ತು ವೀಡಿಯೋಗಳಲ್ಲಿ ಕಾಣಿಸಿಕೊಂಡಿದ್ದ ಯೋಗೇಶ್ ಪಾಟೀಲ್, ಶೈಲೇಶ್ ಕುರ್ಲೆ ಮತ್ತು ಶ್ರೀಕಾಂತ್ ಶಿಂಧೆ ಎನ್ನುವ ಮೂವರು ಯುವಕರನ್ನು ಬಂಧಿಸಿದ್ದಾರೆ.
ಟೌನ್’ಶಿಪ್ ವಾಸಿಗಳು ಯುವ ಜೋಡಿಗಳ ವರ್ತನೆಗಳ ಕುರಿತು ಇದು ವರೆಗೂ ನಮ್ಮ ಗಮನಕ್ಕೆ ತಂದಿಲ್ಲ ಮಾತ್ರವಲ್ಲ ಕಾನೂನನ್ನು ಕೈಗೆ ತಗೊಂಡಿದ್ದನ್ನು ಸಹಿಸುವಂತಿಲ್ಲ. ಸಂತ್ರಸ್ತ ಜೋಡಿಗಳ ಹೇಳಿಕೆಗಾಗಿ ಕಾಯುತ್ತಿದ್ದು, ಆ ಪ್ರಕಾರವೇ ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್’ಗಳನ್ನು ಹಾಕುವುದಾಗಿ ಮನ್ಪಾಡ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್’ಪೆಕ್ಟರ್ ಗಜಾನನ್ ಕಬ್ಜುಲೆ ತಿಳಿಸಿದ್ದಾರೆ.
