ವರದಿಗಾರ-ಬೆಂಗಳೂರು: ಅಧಿಕಾರದಲ್ಲಿರುವ ಬಲಪಂಥೀಯ ಹಿಂದುತ್ವವಾದಿ ಕೇಂದ್ರ ಸರಕಾರವು ಸಂಘಟನೆಗೆ ಕೆಟ್ಟ ಹೆಸರು ತರುವ ಮೂಲಕ ಮತ್ತು ಸಂಘಟನೆ ವಿರುದ್ಧ ಅಪಪ್ರಚಾರ ಸೇರಿದಂತೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಕ್ರಮಗಳ ಮೂಲಕ ಪಾಪ್ಯುಲರ್ ಫ್ರಂಟ್ನ ಕಾರ್ಯ ಚಟುವಟಿಕೆಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ‘ನಮಗೂ ಹೇಳಲಿಕ್ಕಿದೆ’ ಘೋಷಣೆಯೊಂದಿಗೆ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಹೇಳಿದ್ದಾರೆ.
ಅವರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅಭಿಯಾನದ ಬಗ್ಗೆ ವಿವರಿಸುತ್ತಿದ್ದರು.
ಅಭಿಯಾನದ ಅಂಗವಾಗಿ ಅಕ್ಟೋಬರ್ 15ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯಾಸಿರ್ ಹಸನ್ ಹೇಳಿದ್ದಾರೆ. ಸಾವರ್ಜನಿಕ ಸಮಾವೇಶದ ಅಂಗವಾಗಿ ರಾಜ್ಯದಲ್ಲಿ ಭಿತ್ತಿಪತ್ರ, ಕರಪತ್ರ ವಿತರಣೆ, ಬೀದಿ ನಾಟಕ, ವಾಹನ ಜಾಥಾ, ಸಾರ್ವಜನಿಕ ಸಭೆ, ಕಾರ್ನರ್ ಮೀಟ್ಗಳನ್ನು ಹಮ್ಮಿಕೊಂಡಿದೆ. ಪ್ರಜಾಪ್ರಭುತ್ವವಾದಿಗಳೆಲ್ಲರೂ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದೆ.
ಪತ್ರಿಕಾಗೋಷ್ಠಿಯ ಪ್ರೆಸ್ ನೋಟ್ ನಲ್ಲಿ ಉಲ್ಲೇಖಿಸಿದಂತೆ,
ಇತ್ತೀಚಿನ ಕೆಲವೊಂದು ಮಾಧ್ಯಮ ವರದಿಗಳ ಅನ್ವಯ ರಾಷ್ಟ್ರೀಯ ತನಿಖಾ ದಳದ ವರದಿಯೂ ಕೂಡಾ ಸಂಘಟನೆಯ ವಿರುದ್ಧ ಕೆಲವೊಂದು ಆರೋಪಗಳನ್ನು ಹೊರಿಸಿದೆ. ಅದರಲ್ಲಿ 7 ವರ್ಷದ ಹಿಂದೆ ಕೇರಳದಲ್ಲಿ ಪ್ರವಾದಿ ಸ.ಅ. ರ ವಿರುದ್ಧ ನಿಂದನಾತ್ಮಕ ಭಾಷೆ ಬಳಸಿದ ಪ್ರಾಧ್ಯಾಪಕರ ಮೇಲೆ ನಡೆದ ದಾಳಿಯಾಗಿತ್ತು. ಈ ಘಟನೆಯಲ್ಲಿ ಸಂಘಟನೆಯು ಭಾಗಿಯಾಗಿಲ್ಲ ಎಂಬುದನ್ನು ಸಂಘಟನೆಯು ಸ್ವತಃ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟಪಡಿಸಿತ್ತು. ಪ್ರಕರಣದ ಕುರಿತಂತೆ ತೀರ್ಪು ನೀಡಿದ ನ್ಯಾಯಾಲಯವು ಸಂಘಟನೆಯ ಶಾಮೀಲಾತಿಯನ್ನು ನಿರಾಕರಿಸಿತ್ತು. ಇನ್ನೊಂದು ಘಟನೆ ಸಂಘಟನೆಯ ವಾರ್ಷಿಕ ರಾಷ್ಟ್ರೀಯ ಅಭಿಯಾನವಾದ ‘ಜನಾರೋಗ್ಯವೇ ರಾಷ್ಟ್ರಶಕ್ತಿ’ ಕಾರ್ಯಕ್ರಮದ ಅಂಗವಾಗಿ ಸದಸ್ಯರಿಗೆ ಆಯೋಜಿಸಲಾಗಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮವಾಗಿತ್ತು. ಇದಕ್ಕೆ ಕಟ್ಟುಕಥೆ ಕಟ್ಟಿ ಶಸ್ತ್ರಾಸ್ತ್ರ ತರಬೇತಿ ಎಂಬಂತೆ ಬಿಂಬಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇರಲಾಗಿದ್ದ ಯುಎಪಿಎಯನ್ನು ಕೇರಳ ಹೈಕೋರ್ಟ್ ರದ್ದು ಪಡಿಸಿತ್ತು ಮತ್ತು ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಎನ್ಐಎಯ ಮನವಿಯನ್ನು ತಿರಸ್ಕರಿಸಿತ್ತು.
ಇನ್ನೊಂದು ಆರೋಪವೆನಂದರೆ ಸಂಘಟನೆಯು ಸಿರಿಯಾ ಮತ್ತು ಇರಾಕ್ನಲ್ಲಿ ಸಕ್ರಿಯವಾಗಿರುವ ಐಎಸ್ಐಎಸ್ಗಾಗಿ ಸದಸ್ಯರ ನೇಮಕಾತಿ ಮಾಡುತ್ತಿದೆ ಎಂದಾಗಿತ್ತು. ವಾಸ್ತವವೆಂದರೆ, ಪಾಪ್ಯುಲರ್ ಫ್ರಂಟ್ ಬಹಳ ಮೊದಲೇ ಐಎಸ್ನಂತಹ ರಹಸ್ಯ ಗುಂಪುಗಳು ಮತ್ತು ಯುವಜನರಿಗೆ ಆಮಿಷ ನೀಡಿ ಸೆಳೆಯುವ ಸಾಮಾಜಿಕ ತಾಣದಲ್ಲಿನ ಅವರ ಜಾಲದ ಕುರಿತು ತನ್ನ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿತ್ತು. ಪಾಪ್ಯುಲರ್ ಫ್ರಂಟ್ ಯಾವಾಗಲೂ ಎಲ್ಲಾ ವಿವಿಧ ಭಯೋತ್ಪಾಧನೆಯನ್ನು ವಿರೋಧಿಸುತ್ತದೆ. ಹಾಗೂ ಹಿಂದುತ್ವ ಶಕ್ತಿಗಳು ಜನಾಂಗೀಯ ಪ್ರಚಾರದ ಮೂಲಕ ‘ಲವ್ ಜಿಹಾದ್’ ನೊಂದಿಗೆ ಸಂಘಟನೆಯನ್ನು ಜೋಡಿಸುವ ಪ್ರಯತ್ನವು ಸಂಪೂರ್ಣವಾಗಿ ಆಧಾರ ರಹಿತವಾಗಿದೆ. ಇದರ ಜೊತೆಗೆ ಸಂವಿಧಾನ ಖಾತರಿಪಡಿಸಿರುವ ಮೂಲಭೂತ ಹಕ್ಕಾಗಿರುವ ಯಾವುದೇ ಧರ್ಮವನ್ನು ಸ್ವೀಕರಿಸುವ ಮತ್ತು ಅದನ್ನು ಪ್ರಚಾರ ಪಡಿಸುವ ಹಕ್ಕನ್ನು ನಿರಾಕರಿಸುವುದು ಅವರ ಗುರಿಯಾಗಿದೆ ಎಂಬುದನ್ನು ನಾವು ಗಮನಿಸಬೇಕಾಗಿದೆ ಎಂದು ಪ್ರೆಸ್ ನೋಟ್ ನಲ್ಲಿ ಉಲ್ಲೆಖಿಸಿದೆ.
ಫ್ಯಾಶಿಸಂ ಎಂಬುವುದು ಪ್ರಸಕ್ತ ಸಮಯದಲ್ಲಿ ದೇಶಕ್ಕೆ ಬಹುದೊಡ್ಡ ಗಂಡಾಂತರವಾಗಿದೆ ಎಂಬ ಪಾಪ್ಯುಲರ್ ಫ್ರಂಟ್ ನಿಲುವು ಇದೀಗ ಎಲ್ಲರಿಗೂ ಸ್ಪಷ್ಟವಾಗಿದೆ. ಕೇವಲ ಇದೇ ಕಾರಣಕ್ಕಾಗಿ ಸಂಘಟನೆಯನ್ನು ಕೇಂದ್ರ ಸರಕಾರವು ಗುರಿಪಡಿಸುತ್ತಿದೆ. ಸಾಂವಿಧಾನಿಕ ನೆಲೆಯಲ್ಲಿ ರೂಪುಗೊಂಡ ಸಂಘಟನೆಯು ಪ್ರತಿಯೋರ್ವ ಪೌರನ ಹಕ್ಕು ಮತ್ತು ಸ್ವಾತಂತ್ರ್ಯದ ಖಾತರಿಯನ್ನು ಬಯಸುತ್ತದೆ. ಪಾಪ್ಯುಲರ್ ಫ್ರಂಟ್ ತನ್ನ ವಿರುದ್ಧ ಮಾಡಲಾಗುತ್ತಿರುವ ಎಲ್ಲಾ ಪ್ರಯತ್ನಗಳನ್ನು ಪ್ರಜಾಪ್ರಭುತ್ವ ಮತ್ತು ಕಾನೂನಾತ್ಮಕ ರೀತಿಯಲ್ಲಿ ಎದುರಿಸಲಿದೆ ಎಂದು ಈ ಸಂದರ್ಭ ಸ್ಪಷ್ಟ ಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ಬೆಂಗಳೂರು ಜಿಲ್ಲಾಧ್ಯಕ್ಷ ಇಲ್ಯಾಸ್ ಅಹ್ಮದ್ ಉಪಸ್ಥಿತರಿದ್ದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಸಂಘಟನೆಯ ಮೇಲೆ ಹೊರಿಸಲಾಗುತ್ತಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ನಾಯಕರು:
