ರಾಜ್ಯ ಸುದ್ದಿ

ಮಡೆ ಸ್ನಾನ, ಬೆತ್ತಲೆ ಸೇವೆ, ಮೂಢನಂಬಿಕೆಗೆ ರಾಜ್ಯದಲ್ಲಿ ನಿಷೇಧ

ವರದಿಗಾರ-ಬೆಂಗಳೂರು: ಕರ್ನಾಟಕ ಅಮಾನವೀಯ, ದುಷ್ಟ ಮತ್ತು ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನೆ ಮಸೂದೆ- 2017ಕ್ಕೆ (ಮೌಢ್ಯ ನಿಷೇಧ) ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ಕೊನೆಗೂ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.

ಸಮಾಜ ಕಲ್ಯಾಣ ಇಲಾಖೆ ಸಿದ್ಧಪಡಿಸಿದ್ದ ಕರಡು ಮಸೂದೆಯನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಪರಿಷ್ಕರಿಸಿದೆ. ಕರಡು ಮಸೂದೆಯಲ್ಲಿದ್ದ ‘ನರಬಲಿ’ ಮತ್ತು ‘ಅಘೋರಿ’ ಪದಗಳನ್ನು ಪರಿಷ್ಕೃತ ಮಸೂದೆಯಲ್ಲಿ ಕೈಬಿಡಲಾಗಿದೆ. ‘ಮಡೆ ಸ್ನಾನ’ ಮತ್ತು ‘ಕೊಂಡ ಹಾಯುವುದು’ ಎಂಬ ಪದಗಳಿಗೆ ಪರ್ಯಾಯ ಪದ ಬಳಸಲಾಗಿದೆ.

ಕಠಿಣ ಅಂಶಗಳನ್ನು ಒಳಗೊಂಡಿದ್ದ ಕರಡು ಮಸೂದೆಯನ್ನು ದುರ್ಬಲಗೊಳಿಸಲಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

‘ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿತ್ತರವಾಗುವ ಜ್ಯೋತಿಷ, ವಾಸ್ತು ಕಾರ್ಯಕ್ರಮಗಳನ್ನು ನಿರ್ಬಂಧಿಸುವ ಉದ್ದೇಶವಿತ್ತು. ಮೂಲ ಮಸೂದೆಯಲ್ಲಿ ಕೊಂಡ ಹಾಯುವ ಪದ್ಧತಿ ನಿಷೇಧಿಸಲಾಗಿತ್ತು. ಆದರೆ, ಜನರ ನಂಬಿಕೆ ಮೇಲೆ ಪ್ರಹಾರ ಮಾಡುವುದು ಬೇಡ ಎಂದು ಸಚಿವ ಸಹೋದ್ಯೋಗಿಗಳೇ ಆಕ್ಷೇಪ ವ್ಯಕ್ತಪಡಿಸಿದರು. ಚುನಾವಣೆ ಎದುರಿಸುವ ಹೊತ್ತಿನಲ್ಲಿ ಇಂತಹ ಆಚರಣೆಗಳನ್ನು ನಿಷೇಧಿಸಿದರೆ ವಿರೋಧ ಪಕ್ಷ, ಮಾಧ್ಯಮಗಳು ಸರಕಾರದ ವಿರುದ್ಧ ಅಪಪ್ರಚಾರಕ್ಕೆ ಬಳಸಬಹುದು ಎಂಬ ಕಾರಣಕ್ಕೆ ಕೈಬಿಡಲಾಯಿತು’ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.ಇಂಧನ ಸಚಿವ ಡಿ.ಕೆ. ಶಿವಕುಮಾರ್ ಒತ್ತಾಯದ ಮೇರೆಗೆ, ಕೆಂಡ ತುಳಿಯುವುದು, ಬಲಿ ಕೊಡುವುದು, ಧಾರ್ಮಿಕ ಆಚರಣೆಗೆ ನಿರ್ಬಂಧವನ್ನು ಕೈ ಬಿಡಲಾಗಿದೆ.

ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಉದ್ದೇಶಿತ ಮಸೂದೆಯನ್ನು ನವೆಂಬರ್‌ನಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು. ಹೊಸ ಅಂಶಗಳನ್ನು ಸೇರಿಸಲು ಅಥವಾ ಇರುವ ಅಂಶಗಳನ್ನು ಕೈ ಬಿಡಲು ಮುಕ್ತ ಅವಕಾಶವಿದೆ’ ಎಂದು ಹೇಳಿದ್ದಾರೆ.

ಕಾಯ್ದೆ ಉಲ್ಲಂಘಿಸಿದರೆ ಒಂದು ವರ್ಷದಿಂದ ಏಳು ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು 5,000ದಿಂದ 50,000 ರೂ. ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಇತರರು ಊಟ ಮಾಡಿದ ಎಂಜಲು ಎಲೆ ಮೇಲೆ ಉರುಳುವ ‘ಮಡೆ ಮಡೆ ಸ್ನಾನ’ ಹಾಗೂ ‘ಬೆತ್ತಲೆ ಸೇವೆ’ ನಿಷೇಧಿಸಲಾಗಿದೆ. ದೆವ್ವ ಬಿಡಿಸುವುದು ಎಂದು ಹೇಳಿ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಗ್ಗದಲ್ಲಿ ಅಥವಾ ಕಬ್ಬಿಣದ ಸರಳುಗಳಲ್ಲಿ ಕಟ್ಟಿ ಹಾಕಿ ಬೆತ್ತದಲ್ಲಿ ಅಥವಾ ಚಾಟಿಯಲ್ಲಿ ಹೊಡೆಯುವುದು, ಪಾದರಕ್ಷೆ ತೊಳೆದ ನೀರನ್ನು ವ್ಯಕ್ತಿಗೆ ಕುಡಿಸುವುದು, ಮೇಲ್ಚಾವಣಿಗೆ ನೇತು ಹಾಕಿ ಮೆಣಸಿನಕಾಯಿ ಹೊಗೆ ಹಾಕುವುದು, ಕಬ್ಬಿಣದ ಸಲಾಕೆ ಕಾಯಿಸಿ ದೇಹದ ಮೇಲೆ ಬರೆ ಹಾಕುವುದು, ಸೇವೆ ಹೆಸರಿನಲ್ಲಿ ಲೈಂಗಿಕ ಕ್ರಿಯೆ ನಡೆಸುವಂತೆ ಪ್ರೇರೇಪಿಸುವುದು, ಮಲ ತಿನ್ನಿಸುವುದು, ಮೂತ್ರ ಕುಡಿಸುವುದನ್ನು ಅಪರಾಧ ಎಂದು ಪರಿಗಣಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

 

ನಿಷೇಧವಾಗಿರುವುದು:-

1.ಎಂಜಲೆಲೆ ಮೇಲೆ ಉರುಳಾಟ (ಮಡೆ ಸ್ನಾನ),
2.ಬೆತ್ತಲೆ ಸೇವೆ
3.ಮಾಟ, ಮಾಯ–ಮಂತ್ರ, ಬಾನಾಮತಿ.
4.ಋತುಮತಿ ಅಥವಾ ಗರ್ಭಿಣಿಯರನ್ನು ಪ್ರತ್ಯೇಕವಾಗಿಡುವ ಪದ್ಧತಿ.

5.ಕೈ ಬೆರಳಿನಲ್ಲಿಯೇ ಚಿಕಿತ್ಸೆ ನಡೆಸುವುದಾಗಿ ನಂಬಿಸುವುದು.
6.ಭ್ರೂಣದ ಲಿಂಗ ಬದಲಿಸುವುದಾಗಿ ವಂಚಿಸುವುದು.
7.ನಾಯಿ, ಹಾವು, ಚೇಳು ಕಡಿತಕ್ಕೆ ಯಂತ್ರ ಕಟ್ಟಿಸಿಕೊಳ್ಳುವಂತೆ ಸಲಹೆ ನೀಡುವುದು.

ನಿಷೇಧ ಇಲ್ಲ:-

1.ಜ್ಯೋತಿಷಿ, ವಾಸ್ತು ಶಾಸ್ತ್ರ.
2.ಸ್ವಯಂ ಪ್ರೇರಿತವಾಗಿ ಬೆಂಕಿ ಮೇಲೆ ನಡೆಯುವುದು.
3.ಕಿವಿ- ಮೂಗು ಚುಚ್ಚುವ, ಚೌಲಾ (ಕೇಶ ಮುಂಡನ) ಮಾಡಿಸುವುದು.
4.ಮನೆ, ಮಠ, ಮಂದಿರ, ಮಸೀದಿ, ಗುರುದ್ವಾರ, ಚರ್ಚ್‍ಗಳಲ್ಲಿ ಪ್ರಾರ್ಥನೆ, ಹರಿಕಥೆ, 5.ಕೀರ್ತನೆ, ಭಜನೆ, ಪ್ರವಚನ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group