ವರದಿಗಾರ-ಸಾಮಾಜಿಕ ತಾಣ ಹೈಲೈಟ್ಸ್ : ನರೇಂದ್ರ ಮೋದಿ ನೇತೃತ್ವದ ಸರಕಾರವು ಬಹು ನಿರೀಕ್ಷೆಯೊಂದಿಗೆ ಆಡಳಿತಕ್ಕೇರಿತ್ತು. ಭ್ರಷ್ಟಾಚಾರ, ಬೆಲೆಯೇರಿಕೆ ವಿರುದ್ಧ, ತೆರಿಗೆ ಸುಧಾರಣೆ ಬಗ್ಗೆ ಘಂಟೆಗಟ್ಟಲೆ ಭಾಷಣ ಮಾಡಿ ಹಿಂದಿನ ಸರಕಾರದ ಆಡಳಿತದಿಂದ ಬೇಸತ್ತ ಜನತೆಯನ್ನು ಕನಸಿನ ಗೋಪುರಗಳನ್ನು ನಿರ್ಮಿಸುವಂತೆ ಮಾಡಿದ್ದರು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ.
ಆದರೆ ಮೋದಿ ಸರಕಾರದ ಆಡಳಿತದಲ್ಲಿ ತೆರಿಗೆ ಸುಧಾರಣೆಯಾಗದೆ, ಬಂಡವಾಳಶಾಹಿಗಳ ಗುಲಾಮರಂತೆ ಸರಕಾರ ವರ್ತಿಸುತ್ತದೆ ಎನ್ನುವುದು ವಿರೋಧ ಪಕ್ಷಗಳ ಅಭಿಪ್ರಾಯ. ಇತ್ತೀಚೆಗೆ ಜಾರಿಗೆ ಬಂದ ಜಿ ಎಸ್ ಟಿ, ಸಣ್ಣ ವ್ಯಾಪಾರಿಗಳಿಗೆ ಬಹು ದೊಡ್ಡ ಹೊಡೆತವಾಗಿದೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಭಿಮಾನಿಯಾಗಿದ್ದು, ಈಗ ಅವರ ಅತೀ ದೊಡ್ಡ ಟೀಕಾಕಾರನಾಗಿರುವ ಒಬ್ಬರನ್ನಾದರು ನೀವು ತಿಳಿದಿರಬಹುದು.
ಇದೇ ರೀತಿ ಬಹು ನಿರೀಕ್ಷೆಯೊಂದಿಗೆ ಬಿಜೆಪಿಗೆ ಮತ ನೀಡಿ ಈಗ ಖೇದಿಸುತ್ತಿರುವ ಓರ್ವ ವ್ಯಾಪಾರಿಯು ವಿಭಿನ್ನ ರೀತಿಯಲ್ಲಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ. ತಾನು ಗ್ರಾಹಕರಿಗೆ ನೀಡುವ ರಶೀದಿಯಲ್ಲೇ ‘ಕಮಲ್ ಕಾ ಫೂಲ್, ಹಮಾರಿ ಭೂಲ್ (ಕಮಲದ ಹೂವನ್ನು ಆರಿಸಿದ್ದು, ನನ್ನ ತಪ್ಪು)’ ಎಂದು ಮುದ್ರಿಸಿದ್ದಾರೆ.
ಇದೀಗಂತೂ ಈ ಬಿಲ್ ನ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದೆಡೆ ಸತ್ಯವನ್ನು ತಿಳಿಸಿದ ಕಾರಣಕ್ಕಾಗಿ ವ್ಯಾಪಾರಿಯ ವಿರುದ್ಧ ಆಕ್ರೋಶವು ವ್ಯಕ್ತವಾಗುತ್ತಿದೆ. ಅದಲ್ಲದೆ ಈ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಮೊದಲು ಹಂಚಿದ್ದ ಪತ್ರಕರ್ತನ ಖಾತೆ ಬ್ಲಾಕ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪತ್ರಕರ್ತ, ‘ಇದು ಫೇಸ್ಬುಕ್ ಫ್ಯಾಶಿಸಂ’ ಎಂದಿದ್ದಾರೆ.
ಫೇಸ್ಬುಕ್ ಈ ನಡೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಖಂಡನೀಯ ಎಂದು ಕೆಲ ಪತ್ರಕರ್ತರು ಹಾಗೂ ಪ್ರಗತಿಪರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
