ವರದಿಗಾರ-ದೆಹಲಿ: ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಗೆ ಸಿಪಿಎಂ ತೀಕ್ಷವಾಗಿ ಪ್ರತಿಕ್ರಿಯಿಸುತ್ತಾ, ಸರಕಾರದ್ದು ಡೋಂಗಿ ಹೋರಾಟ ಎಂದಿದೆ.
ಭ್ರಷ್ಟಾಚಾರದ ವಿರುದ್ಧದ ಹೋರಾಟ ಸತ್ಯವೆಂದಾದಲ್ಲಿ ವ್ಯಾಪಂ ಹಗರಣ, ಪನಾಮಾ ಹಗರಣ, ಕರ್ನಾಟಕದ ಅಕ್ರಮ ಗಣಿಗಾರಿಕೆ ಮತ್ತು ಇತರ ಹಗರಣಗಳ ಬಗ್ಗೆ ಪ್ರಧಾನಿ ಮೋದಿ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದೆ.
ರಾಜಕೀಯ ವಿರೋಧಿಗಳನ್ನು ಹಣೆಯಲು ವಿರೋಧ ಪಕ್ಷಗಳ ನಾಯಕರ ವಿರುದ್ಧ ಮಾತ್ರ ಭ್ರಷ್ಟಾಚಾರ ಪ್ರಕರಣಗಳನ್ನು ಸರಕಾರ ಅಸ್ತ್ರಗಳಂತೆ ಬಳಸುತ್ತಿದೆ ಮತ್ತು ಸರಕಾರದ ದ್ವಂದ್ವ ನಿಲುವಿಗೆ ಇದಕ್ಕಿಂತ ಹೆಚ್ಚು ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದೆ.
ಬಿಜೆಪಿಗೆ ಸವಾಲು ಹಾಕಿರುವ ಸಿಪಿಎಂ, ಭ್ರಷ್ಟಾಚಾರದ ವಿರುದ್ಧ ಸಾರಿರುವ ಯುದ್ಧ ಸತ್ಯವಾಗಿದ್ದರೆ ಮೊದಲು ತೆರೆಮರೆಯಲ್ಲಿ ಅಡಗಿ ಹೋಗಿರುವ ಅಕ್ರಮ ಹಗರಣಗಳ ತನಿಖೆಗೆ ಆದೇಶಿಸಲಿ ಎಂದು ಹೇಳಿದೆ.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಡೆದ ಅಕ್ರಮ, ಭ್ರಷ್ಟಾಚಾರ ಮತ್ತು ಹಗರಣಗಳ ಪಟ್ಟಿ ದೊಡ್ಡದಿದೆ. ಅವುಗಳ ಪೈಕಿ ಇದುವರೆಗೂ ಒಂದೇ ಒಂದು ಹಗರಣದ ತನಿಖೆಯಾಗಿಲ್ಲ ಎಂದು ಸಿಪಿಎಂ ಪತ್ರಿಕಾ ಹೇಳಿಕೆಯಲ್ಲಿ ಹೇಳಿಕೊಂಡಿದೆ.
