ರಾಷ್ಟ್ರೀಯ ಸುದ್ದಿ

ಕೋಮು ದ್ವೇಷದ ಅಮಲಿನಲ್ಲಿ ಕಂದಮ್ಮಗಳನ್ನೂ ಬಿಡದ ನಕಲಿ ದೇಶಪ್ರೇಮಿಗಳು!!

►  ರೊಹಿಂಗ್ಯನ್ನರ ಕುರಿತಾಗಿನ ಅಪಪ್ರಚಾರದ ಹಿಂದಿರುವ ಆಘಾತಕಾರಿ  ಸತ್ಯಗಳು!

► ರೋಹಿಂಗ್ಯಾ ವಿರೋಧಿ ಅಲೆಯೆಬ್ಬಿಸಲು ನಕಲಿ ಚಿತ್ರಗಳೊಂದಿಗೆ ಅಪಪ್ರಚಾರದ ವ್ಯವಸ್ಥಿತ ಜಾಲ!!

 

ವರದಿಗಾರ ದೆಹಲಿ : ಅಸಹಾಯಕ ರೋಹಿಂಗ್ಯಾ ನಿರಾಶ್ರಿತರನ್ನು ಭಾರತದಿಂದ ಗಡೀಪಾರು ಮಾಡಲು ಕೇಂದ್ರ ಸರಕಾರ ವ್ಯವಸ್ಥಿತವಾಗಿ ಪ್ರಯತ್ನಗಳನ್ನು ಮಾಡುತ್ತಿರಲು, ಸರಕಾರದ ಪ್ರಯತ್ನ ಸರಿ ಎಂಬಂತೆ ಬಿಂಬಿಸಲು  ಮತ್ತು ದೇಶದ ಜನರನ್ನು ನಂಬಿಸಲು, ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದವರಿಗೆ ಹುಲ್ಲುಗಳೇ ಆಹಾರವಾಗಿರುವ  ರೋಹಿಂಗ್ಯನ್ನರಿಗೆ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಸಂಬಂಧ ಕಲ್ಪಿಸಿ ಪ್ರಚಾರಪಡುತ್ತಿರುವ ಗುಂಪು ಒಂದೆಡೆಯಾದರೆ, ಮತ್ತೊಂದೆಡೆ ಅದೇ ಉದ್ದೇಶವನ್ನಿಟ್ಟುಕೊಂಡಿರುವ ಅಪಪ್ರಚಾರಗಳಿಗಾಗಿ ಪುಟ್ಟ ಕಂದಮ್ಮಗಳ ವೀಡಿಯೋ ಮತ್ತು ಫೋಟೋಗಳನ್ನು ತಿರುಚಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಡುತ್ತಿರುವ ಆತಂಕಕಾರಿ ಘಟನೆಗಳು ವರದಿಯಾಗುತ್ತಿವೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗತಿ ಪಡೆಯುವುದರಲ್ಲಿ ಸಂಶಯವಿಲ್ಲ. ಕಳೆದ 24 ಘಂಟೆಗಳ ಅವಧಿಯೊಳಗಡೆ ಹರಿದಾಡುತ್ತಿರುವ ಎರಡು ಚಿತ್ರಗಳು ಮತ್ತು ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳು, ಈ ಘಟನೆಗಳು ಅದೆಷ್ಟರ ಮಟ್ಟಿಗೆ ವ್ಯವಸ್ಥಿತವಾಗಿ ಮತ್ತು ಅಷ್ಟೇ ಯೋಜನಾಬದ್ಧವಾಗಿ ಒಂದು ಧರ್ಮವನ್ನು ಗುರಿಯಾಗಿರಿಸಿಕೊಂಡು ಕಾರ್ಯಾಚರಿಸುತ್ತದೆ ಎಂದು ತಿಳಿದು ಬರುತ್ತದೆ.

ಮೋದಿ ನೇತೃತ್ವದ ಸರಕಾರದಲ್ಲಿ ರೈಲ್ವೇ ಮಂತ್ರಿಯಾಗಿರುವ ಪಿಯೂಶ್ ಗೋಯೆಲ್ ಹಿಂಬಾಲಿಸುತ್ತಿರುವ (Follow)  ‘ಶಂಕನಾಧ’ ಎನ್ನುವ ಟ್ವಿಟ್ಟರ್ ಖಾತೆಯಲ್ಲಿ ರವೀಂದ್ರ ಸಂಗ್ವಾನ್ ಎನ್ನುವ ಬಲಪಂಥೀಯನೊಬ್ಬ ಒಂದು ಹುಡುಗಿ ಸಣ್ಣ ಮಗುವನ್ನು ಕೈಯಲ್ಲಿ ಹಿಡಿದಿರುವ ಚಿತ್ರ ಹಾಕಿ “ಈಕೆಯ ಮುಗ್ಧ ಮುಖವನ್ನೊಮ್ಮೆ ನೋಡಿ, ರೋಹಿಂಗ್ಯದ ಈಕೆಗೆ 14 ವರ್ಷ. ಈಕೆಗೆ ಎರಡು ಮಕ್ಕಳಿವೆ ಮತ್ತು ಈಕೆಯ ಗಂಡನಿಗೆ 56 ವರ್ಷ ಹಾಗೂ ಅವನಿಗೆ ಆರು ಹೆಂಡತಿಯರಿಂದ 18 ಮಕ್ಕಳಿದ್ದಾರೆ” ಎಂದು ಟ್ವೀಟ್ ಮಾಡಿದ್ದಾನೆ.

ಆದರೆ ವಾಸ್ತವದಲ್ಲಿ ಈ ಚಿತ್ರ ಬಿಬಿಸಿ ವರದಿಯೊಂದರ ಸ್ಕ್ರೀನ್ ಶಾಟ್ ಆಗಿದೆ ! ಬಿಬಿಸಿ ಬರ್ಮಾದಿಂದ ಓಡಿ ಹೋಗುತ್ತಿರುವ ಜನರ ಕುರಿತಾಗಿ ಮಾಡಿದ್ದ ವೀಡಿಯೋ ಒಂದರ ಸ್ಕ್ರೀನ್ ಶಾಟನ್ನು ತೆಗೆದು ಜನರನ್ನು ಧಾರ್ಮಿಕ ಆಯಾಮದಲ್ಲಿ ಉದ್ರೇಕಿಸುವ ವ್ಯವಸ್ಥಿತ ಷಡ್ಯಂತರದ ಭಾಗ ಇದೆಂದು ಯಾರಿಗೂ ಮನದಟ್ಟಾಗಬಹುದು. ರೋಹಿಂಗ್ಯನ್ನರೊಂದಿಗೆ ನಡೆದುಕೊಂಡು ಹೋಗುತ್ತಿರುವ ಬಿಬಿಸಿಯ ವರದಿಗಾರ ಸಂಜಯ್ ಮುಜುಂದಾರ್ ದೃಶ್ಯ ಕೂಡಾ ಇದೆ.  ಈ ವೀಡಿಯೋವನ್ನು ಬಿಬಿಸಿ ಸೆಪ್ಟಂಬರ್ 4 ರಂದು ಅಪ್ಲೋಡ್ ಮಾಡಿತ್ತು. ಅಪಪ್ರಚಾರದಲ್ಲಿ ಬಳಸಲ್ಪಟ್ಟ ಹುಡುಗಿಯು ವೀಡಿಯೋದಲ್ಲಿ 2 ನಿಮಿಷ 6 ಸೆಕೆಂಡಿನಿಂದ ಹಿಡಿದು 2 ನಿಮಿಷ 12 ಸೆಕೆಂಡಿನ ವರೆಗೆ ಕಾಣ ಸಿಗುತ್ತಾಳೆ.

ಅಚ್ಚರಿಯ ಇನ್ನೊಂದು ಅಂಶವೆಂದರೆ ಬಲಪಂಥೀಯರ ಫೇಸ್ಬುಕ್ ಪೇಜ್ “ಇಂಡಿಯಾ ರೈಸಿಂಗ್’ ನಲ್ಲೂ ಈ ಚಿತ್ರ ಪೋಸ್ಟ್ ಮಾಡಲ್ಪಟ್ಟಿದೆ !!


ಭಾರತದಲ್ಲಿ ನೆಲೆಸಿರುವ 40000 ಕ್ಕೂ ಅಧಿಕ ರೋಹಿಂಗ್ಯಾ ನಿರಾಶ್ರಿತರನ್ನು ಹೊರದಬ್ಬುವ ಕೇಂದ್ರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮಾನವತಾವಾದಿಗಳು ಪ್ರಶ್ನಿಸಿರುವ ಮಧ್ಯೆಯೇ ಕೆಲ ತಥಾಕಥಿತ ‘ದೇಶಪ್ರೇಮಿಗಳು’, ಸಿಕ್ಕ ಅವಕಾಶವನ್ನು ತಿರುಚಿದ ಚಿತ್ರಗಳ ಮೂಲಕ ಚಾಣಾಕ್ಷವಾಗಿ ಬಳಸಿಕೊಳ್ಳುತ್ತಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರದ ನಿರ್ಧಾರ ಸರಿ ಎಂದು ನಂಬಿಸುವ ಒಂದು ಪ್ರಯತ್ನದಂತೆ ಇದು ಕಾಣಿಸುತ್ತಿರುವುದರಲ್ಲಿ ತಪ್ಪಿಲ್ಲ.

ಇನ್ನೊಂದು ಅದೇ ರೀತಿಯ ಅಭಿಯಾನದ ಭಾಗವಾಗಿ, ಬಲಪಂಥೀಯ ವಿಚಾರಧಾರೆಗಳನ್ನೇ ಹೆಚ್ಚಾಗಿ ಬೆಂಬಲಿಸುವ ದೆಹಲಿಯ ವಕೀಲ ಪ್ರಶಾಂತ್ ಪಿ ಉಮ್ರಾವ್ ಎನ್ನುವವರೂ ಕೂಡಾ ಬ್ರಝಿಲಿನ ರೋಗಗ್ರಸ್ತ ಹುಡುಗಿಯ ಚಿತ್ರವನ್ನು ಹಾಕಿ, “ಈಕೆ  9-12 ವರ್ಷದ ರೋಹಿಂಗ್ಯದ ಗರ್ಭಿಣಿ ಹುಡುಗಿ” ಎಂದು ಟ್ವೀಟ್ ಮಾಡಿದ್ದರು. ಇದು ನಕಲಿ ಎಂದು ತಿಳಿದ ನಂತರ ಅವರದನ್ನು ಅಳಿಸಿ ಹಾಕಿದ್ದಾರೆ.

 

ಇದು ಪಿತ್ತಜನಕಾಂಗ ಮತ್ತು ಮೇದೋಜೀರಕ ಗ್ರಂಥಿಗಳ ಸಮಸ್ಯೆಗೆ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದ ಸ್ಯಾಂಡಿ ಬ್ರಂಡಾವೋ ದ ಕ್ರೂಝ್ ಎನ್ನುವ 12 ರ ಹರೆಯದ ಬ್ರಝಿಲಿನ ಹುಡುಗಿಯ ವೀಡಿಯೋ ಆಗಿದೆ!  ಅದು ನವಂಬರ್ 2016 ರಲ್ಲಿ ಚಿತ್ರೀಕರಿಸಿದ ವೀಡಿಯೋ ಆಗಿತ್ತು. ಅದರಲ್ಲಿ ಆಕೆಯು ಪೋರ್ಚುಗೀಸ್ ಭಾಷೆಯಲ್ಲಿ ಮಾತನಾಡುತ್ತಾ, ನನಗೆ ಬ್ರಝಿಲಿನ ನೃತ್ಯ ಪಟು, ಹಾಡುಗಾರ ನಟ ರಾಡ್ರಿಗೋ ಫಾರೋರನ್ನು ಭೇಟಿ ಮಾಡುವ ಆಸೆಯಿದೆಯೆಂದು ಹೇಳುತ್ತಾಳೆ.

ಆಗಸ್ಟ್ 25 ರಿಂದ ರಾಖೈನ್ ಪ್ರಾಂತ್ಯದಲ್ಲಿ ನಡೆದ ಹಿಂಸಾಚಾರದ ಮುಂದಿವರಿದ ಭಾಗ ಎರಡೂ ಕಡೆಗಳಿಂದ ಉಲ್ಬಣಗೊಂಡಿದೆ.  ಆದರೆ ಸಂಘರ್ಷದ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಮರೆಮಾಚುವ ನಕಲಿ ಚಿತ್ರಗಳ ಒಂದು ಸ್ಥಿರವಾದ ಪ್ರವಾಹವನ್ನು ಹುಟ್ಟುಹಾಕಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group