ವರದಿಗಾರ-ಮಹಾರಾಷ್ಟ್ರ: ಮಹಾರಾಷ್ಟ್ರ ಸರಕಾರವು ಪ್ರಕಟಿಸಿದ 7ನೇ ತರಗತಿಯ ನೂತನ ಇತಿಹಾಸ ಪಠ್ಯ ಪುಸ್ತಕದಲ್ಲಿ ಭಾರತ ಇತಿಹಾಸದಲ್ಲಿ ಮೊಘಲರು ಮತ್ತು ಇತರ ಸಾಮ್ರಾಜ್ಯಗಳ ಪಾತ್ರವನ್ನು ಕಡಿಮೆಗೊಳಿಸಿದ್ದಕ್ಕಾಗಿ ವಿವಾದಕ್ಕೀಡಾಗಿದೆ.
ಕೆಲವು ಅಧ್ಯಾಯಗಳನ್ನು ಹೊರತುಪಡಿಸಿ, ‘ಹಿಸ್ಟರಿ ಆಂಡ್ ಸಿವಿಕ್ಸ್’ ಎಂಬ ಪುಸ್ತಕದ ಹೆಚ್ಚಿನ ಅಧ್ಯಾಯಗಳು ಮರಾಠ ಸಾಮ್ರಾಜ್ಯದ ಉದಯ ಮತ್ತು ಮೊಘಲ್ ಸಾಮ್ರಾಜ್ಯ ಮತ್ತು ಪತನದ ಬಗ್ಗೆಯೇ ವಿವರಿಸುತ್ತವೆ. ವಿಜಯನಗರ, ಬಹಮನಿ, ದಿಲ್ಲಿ ಸುಲ್ತಾನರು, ಪಾಲಾಗಳು, ಚೋಳರು ಮತ್ತು ರಜಪೂತರಂತಹ ಇತರ ಸಾಮ್ರಾಜ್ಯಗಳ ವಿವರಗಳನ್ನು ‘ಇಂಡಿಯಾ ಬಿಫೋರ್ ದಿ ಟೈಮ್ಸ್ ಆಫ್ ಶಿವಾಜಿ ಮಹಾರಾಜ್’ ಎಂಬ ಏಕೈಕ ಅಧ್ಯಾಯದಲ್ಲಿ ತುರುಕಿಸಲಾಗಿದೆ.
ಹೊಸ ಮತ್ತು ಹಳೆಯ ಪಠ್ಯಪುಸ್ತಕದ ವಿಷಯ ಸಮಿತಿಗಳ ಸದಸ್ಯರಾಗಿದ್ದ ಬಾಪು ಸಾಹೇಬ್ ಶಿಂಧೆ, ಇತಿಹಾಸದ ಯಾವುದೇ ಭಾಗವನ್ನು ಬಿಟ್ಟುಬಿಡುವ ಪ್ರಯತ್ನ ನಡೆದಿಲ್ಲ ಎಂದು ಹೇಳಿದ್ದಾರೆ. “ನಾವು ಏನನ್ನೂ ಕಡಿತಗೊಳಿಸಿಲ್ಲ. ಎಲ್ಲಾ ರಾಜರನ್ನೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಪುಸ್ತಕದ ಸೀಮಿತ ಪುಟಗಳ ಕಾರಣದಿಂದ ಎಲ್ಲಾ ಸಾಮ್ರಾಜ್ಯಗಳ ಐತಿಹಾಸಿಕ ವಿವರಗಳನ್ನು ಒದಗಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಅನೇಕ ಇತಿಹಾಸ ಶಿಕ್ಷಕರು ನೂತನ ಪುಸ್ತಕದಿಂದ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ನಾಂದೇಡ್ ನ ಶಿಕ್ಷಕರೊಬ್ಬರು “ಮರಾಠರ ಬಗ್ಗೆ ಬೋಧಿಸುವುದರಲ್ಲಿ ಏನೂ ತಪ್ಪಿಲ್ಲ, ಆದರೆ ಒಬ್ಬರಿಗೆ ಅನುಪಾತದ ಪ್ರಜ್ಞೆ ಇರಬೇಕು. ನೂರಾರು ವರ್ಷಗಳ ಮುಘಲ್ ಆಳ್ವಿಕೆಯನ್ನು ಕೆಲವು ಪ್ಯಾರಾಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ತಮ್ಮ ಶಾಲೆಯ ಅವಧಿಗಳಲ್ಲಿ ಮೊಘಲರ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಗುವುದಿಲ್ಲ” ಎಂದು ಹೇಳಿದರು.
ರಾಜಕೀಯ ಲಾಭಕ್ಕಾಗಿ ಬಲಪಂಥೀಯ ಎನ್ ಡಿ ಎ ಸರಕಾರವು ಶಿವಾಜಿಯನ್ನು ಉಪಯೋಗಿಸುತ್ತಿದೆ ಎಂದು ಕೆಲವು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ರಾಜಕೀಯ ಲಾಭಕ್ಕಾಗಿ ಶಿವಾಜಿಯನ್ನು ವಿವಿಧ ಸಂದರ್ಭಗಳಲ್ಲಿ ಹಿಂದುತ್ವದ ಪ್ರತೀಕವಾಗಿಯೂ, ಬ್ರಾಹ್ಮಣರ ಪ್ರವರ್ತಕನಾಗಿಯೂ, ಹಿಂದುಳಿದ ವರ್ಗಗಳ ರಕ್ಷಕನಾಗಿಯೂ ಬಿಂಬಿಸಿದ್ದನ್ನು ಅವರು ನೆನಪಿಸಿದ್ದಾರೆ.
ಪಠ್ಯ ಪುಸ್ತಕದ ಮುಖಪುಟ
