ವರದಿಗಾರ-ತುಮಕೂರು: ಪ್ರಸ್ತುತ ಎಲ್ಲಾ ಪಕ್ಷಗಳಲ್ಲಿಯೂ ಕಳ್ಳರೇ ತುಂಬಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಕಡಿಮೆ ಕಳ್ಳರಿದ್ದಾರೆ ಎಂದು ‘ಕಾಂಗ್ರೆಸ್ ಕಳ್ಳರ ಪಕ್ಷ’ ಎಂಬ ತಮ್ಮ ಹೇಳಿಕೆಯನ್ನು ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಸಮರ್ಥಿಸಿಕೊಂಡಿದ್ದಾರೆ.
ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಕಳ್ಳರ ಪಕ್ಷ ಇದ್ದ ಹಾಗೇ. ಒಳ್ಳೆ ಕೆಲಸ ಮಾಡುವವರ ವಿರುದ್ಧ ಕಾಂಗ್ರೆಸ್ ನಾಯಕರು ಯಾವಾಗಲೂ ಒಂದು ಕಣ್ಣಿಟ್ಟು ಬೆಳೆಯದಂತೆ ಮಾಡುತ್ತಾರೆ ಎಂದು ತಿಮ್ಲಾಪುರದಲ್ಲಿ ಆಯೋಜನೆ ಮಾಡಲಾಗಿದ್ದ ಹಾಲು ಒಕ್ಕೂಟ ಕಾರ್ಯಕ್ರಮದಲ್ಲಿ ಹೇಳಿದ್ದರು.
ಆದಿತ್ಯವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
2004ರ ಸಂದರ್ಭ ಕಾಂಗ್ರೆಸ್ ಪಕ್ಷವು ಕಳ್ಳರ ಪಕ್ಷವಾಗಿಯೇ ಇತ್ತು. ನನ್ನನ್ನು ಅ ಸಂದರ್ಭ ಪಕ್ಷದಿಂದ ಹೊರ ಹಾಕಿದ್ದರು. ಆಗ ಕಳ್ಳರೇ ಪಕ್ಷದಲ್ಲಿ ತುಂಬಿಕೊಂಡಿದ್ದರು. 1998ರಲ್ಲಿ ನಾನು ಚುನಾಯಿತನಾದರೂ 2004ರಲ್ಲಿ ನನಗೆ ಪಕ್ಷ ಟಿಕೆಟ್ ಕೊಡಲಿಲ್ಲ. ಈಗ ಅವರೆಲ್ಲಾ ಎಲ್ಲಿ ಹೋಗಿ ಕುಳಿತಿದ್ದಾರೆ ನೋಡಿ ಎಂದು ಇದೇ ಸಂದರ್ಭ ಅವರು ಮಾಧ್ಯಮದೊಂದಿಗೆ ಪ್ರಶ್ನಿಸಿದ್ದಾರೆ.
