ವರದಿಗಾರ ವಿಶೇಷ

ಬ್ಲೂವೇಲ್ : ಕರಾಳ ಜಗತ್ತಿನ ಒಳಹೊಕ್ಕಾಗ !

► ನಿಮ್ಮ ಜೀವವನ್ನೇ ಕೇಳುವ ಈ ಆಟದ ಗುಟ್ಟೇನು?

► ನಾವೆಲ್ಲರೂ ತಿಳಿದಿರಬೇಕಾದ ಮಹತ್ವದ ಸಂಗತಿಗಳು

► ಎಚ್ಚರದಿಂದಿರೋಣ ; ಎಲ್ಲರನ್ನೂ ಎಚ್ಚರಿಸೋಣ

 

ವರದಿಗಾರ :  ಏನಿದು ಬ್ಲೂವೇಲ್ ? ಇದೊಂದು ಆಟವೇ ? ಅದೂ ಓರ್ವನ ಸ್ವಯಂ ಜೀವವನ್ನು ಬಲಿ ಪಡೆಯುವಂತಹಾ ಆಟ !!? ಜಮ್ಮು ಕಾಶ್ಮೀರದ ಮಾಹಿತಿ ತಂತ್ರಜ್ನ ಮೃದುಲ್ ತಪ್ಲೂ ಈ ಕುರಿತಾಗಿ ಆಳವಾಗಿ ಅಧ್ಯಯನ ನಡೆಸಿ ವರದಿಯೊಂದನ್ನು ನಮ್ಮ ಮುಂದಿಟ್ಟಿದ್ದಾರೆ. ಈ ಕುರಿತಾಗಿನ ಒಂದು ನೋಟ.

ಆಟ ಯಾವತ್ತೂ ನಮ್ಮ ಮನಸ್ಸಿಗೆ ಮುದನೀಡುವಂತಿರಬೇಕೇ ಹೊರತು ನಮ್ಮ ಪ್ರಾಣ ಹರಣಕ್ಕೆ ಕಾರಣವಾಗಬಾರದು. ಬ್ಲೂವೇಲ್’ನಂತಹಾ ಅಪಾಯಕಾರಿ ಆಟ ಖಂಡಿತವಾಗಿಯೂ ನಮ್ಮ ಚಿಂತನಾ ಶಕ್ತಿಯನ್ನು ಕೊಂದು ಬಿಡುತ್ತದೆ. ಭಾರತದಲ್ಲಿ ಈ ‘ಬ್ಲೂವೇಲ್ ಆಟಕ್ಕೆ ತಮ್ಮ ಪ್ರಾಣ ಕಳಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಆದರೆ ಹೆಚ್ಚಿನ ಜನರಲ್ಲಿ ಇದೇನೆನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಏನಿದು ಬ್ಲೂವೇಲ್ ? ಇದೊಂದು ಆಟವೇ, ಅಪ್ಲಿಕೇಶನಾ ಅಥವಾ ವೈರಸ್ ?

ನಮ್ಮಲ್ಲಿ ಹೆಚ್ಚಿನವರೂ ಆನ್ಲೈನ್ ಚಾಟ್ ರೂಂಗಳ ಬಗ್ಗೆ ಕೇಳಿರಬಹುದು. ಈ ಚಾಟಿಂಗ್ ರೂಂಗಳಲ್ಲಿ ಅಪರಿಚಿತರು ಅಥವಾ ಗೆಳೆಯರು ಪರಸ್ಪರ ಸಂದೇಶ ವಿನಿಮಯಗೊಳಿಸುತ್ತಾ ಕಾಲಹರಣ ಮಾಡುತ್ತಾರೆ. ಬ್ಲೂ ವೇಲ್ ಕೂಡಾ ಇದೇ ಮಾದರಿಯ ಒಂದು ಜಾಲವಾಗಿದೆ. ಬ್ಲೂ ವೇಲ್ ಯಾವುದೇ ಇನ್’ಸ್ಟಾಲ್ ಮಾಡುವಂತಹ ಅಪ್ಲಿಕೇಶನ್ ಅಲ್ಲ. ಅದು ಒಂದು ಸಾಮಾಜಿಕ ಜಾಲ ತಾಣ ಕೇಂದ್ರಿತ ಮೇಸ್ಸೇಜಿಂಗ್ ಸೇವೆ. ನೀವು ಹೆಚ್ಚಿನ ವೆಬ್ ಸೈಟ್’ಗಳನ್ನು ಉಪಯೋಗಿಸುವಾಗ ಪಾಪ್ ಅಪ್ ಜಾಹೀರಾತುಗಳನ್ನು ನೋಡಿರಬಹುದು. ಬ್ಲೂವೇಲ್ ಕೂಡಾ ಅದೇ ರೀತಿ ಜಾಹೀರಾತುಗಳನ್ನು ಕಳುಹಿಸಿ ಜನರನ್ನು ತನ್ನತ್ತ ಸೆಳೆಯುತ್ತದೆ ಅಥವಾ ತಮ್ಮ ಏಜೆಂಟ್’ಗಳ ಮುಖಾಂತರ ಬ್ಲೂವೇಲ್ ಲಿಂಕ್’ಗಳನ್ನು ಕಳುಹಿಸುತ್ತಾರೆ.

ಯಾರಿದರ ಸಂಸ್ಥಾಪಕ ಅಡ್ಮಿನ್ ?

ಫಿಲಿಪ್ ಬುಡೇಕಿನ್ ಎನ್ನುವಂತಹಾ ಓರ್ವ ರಶ್ಯನ್ ಮನಃಶಾಸ್ತ್ರದ ವಿದ್ಯಾರ್ಥಿಯೇ ಇದನ್ನು ಜಗತ್ತಿಗೆ ಪರಿಚಯಿಸಿದ್ದು. ಆತ ವಿಶ್ವವಿದ್ಯಾನಿಲಯದಿಂದ ಹೊರ ಹಾಕಲ್ಪಟ್ಟ ವಿದ್ಯಾರ್ಥಿಯಾಗಿದ್ದ. 2015 ರಲ್ಲಿ ಬುಡೇಕಿನ್ ರಶ್ಯನ್ ಸೈಬರ್ ಪೊಲಿಸರಿಂದ ಬಂಧಿಸಲ್ಪಟ್ಟರೂ, ಅದರ ಇತರೆ ನಿರ್ವಹಣೆಗಾರರು ಅದರ ಜಾಲವನ್ನು ನಿಯಂತ್ರಿಸುತ್ತಿದ್ದಾರೆ. ಬುಡೇಕಿನ್ ಪ್ರಕಾರ ತಾನು ಈ ಜಗತ್ತನ್ನು ಮಾನಸಿಕವಾಗಿ ದುರ್ಬಲರಾಗಿರುವವರಿಂದ ಸ್ವಚ್ಛಗೊಳಿಸುತ್ತಿದ್ದೇನೆ ಎಂದಿದ್ದ !!

ಬ್ಲೂವೇಲ್ ಹೇಗೆ ಪ್ರಾರಂಭವಾಯಿತು ?

ಅಚ್ಚರಿಯಿರುವುದೇ ಇಲ್ಲಿ. ರಶ್ಯದ ಸುಪ್ರಸಿದ್ಧ ಜಾಲತಾಣವಾದ VKOntakte ತನಗರಿವಿಲ್ಲದೆ ಮತ್ತು ಅದರ ಕರಾಳ ಜಾಲದ ಬ್ಲೂವೇಲ್ ಆಟದ ಲಾಗಿನನ್ನು ಅಂಗೀಕರಿಸಿತು. ಹಿನ್ನೆಲೆಯ ಸತ್ಯಮಾಪನ ನಡೆಸದೆ ಅದು ಹೇಗೆ ಅಂಗೀಕರಿಸಿತು ಎಂಬುವುದು ಇನ್ನೂ ಉತ್ತರ ಸಿಗದ ಪ್ರಶ್ನೆಯಾಗಿದೆ. ಒಮ್ಮೆ ಲಾಗಿನ್ ಆಗಿ ‘ಬ್ಲೂವೇಲ್’ ಎಂದು ಹುಡುಕಿ ಅದರ ಒಳಗೆ ಹೋದ ನಂತರ ಅಲ್ಲಿಯ ಭಯಾನಕ ದೃಶ್ಯಗಳು ಕಣ್ಣಿಗೆ ರಾಚುತ್ತದೆ. ಎಳೆ ವಯಸ್ಸಿನ ಮಕ್ಕಳು ಜಿಗುಪ್ಸೆಗೊಂಡಿರುವ, ಖಿನ್ನತೆಯಿಂದ ಬಳಲುತ್ತಿರುವ ಮತ್ತು ಅದಕ್ಕಾಗಿ ತನ್ನ ಜೀವವನ್ನು ಅರ್ಪಿಸಲು ತಯಾರಾಗಿ ನಿಂತ ಸಂದೇಶಗಳು ಕಾಣ ಸಿಗುತ್ತದೆ. ಅವರ ಪ್ರೊಫೈಲ್ ಚಿತ್ರಗಳು ಇನ್ನೂ ಭಯಾನಕವಾಗಿರುತ್ತದೆ. ಅಲ್ಲಿ ತಮ್ಮ ಕೈಯ್ಯನ್ನು ಕೊಯ್ದಿರುವ, ಪ್ರೇತಗಳ ಭಯ ಹುಟ್ಟಿಸುವ ಚಿತ್ರಗಳು, ವಿಚಿತ್ರ ಜಗತ್ತಿನ ದರ್ಶನ ಮಾಡಿಸುತ್ತದೆ.

ಇದನ್ನು ಆಡುವವರು ಯಾರು ?

ಈ ಬ್ಲೂವೇಲ್ ಆಟದ ಮುಖ್ಯ ಗುರಿ ಮಾನಸಿಕವಾಗಿ ನೆಮ್ಮದಿ ಕಳಕೊಂಡ ಎಳೆ ವಯಸ್ಸಿನ ಮಕ್ಕಳು ಮತ್ತು ಯುವಕರು. ಇಂದಿನ ಆಧುನಿಕ ಯುಗದಲ್ಲಿ ಯುವಜನತೆ ತಮ್ಮ ಜೀವನದಲ್ಲಿ ಸಂಭವಿಸುವ ಏನಾದರೂ ಎಡರು ತೊಡರುಗಳಿಗೆ ಪರಿಹಾರವಾಗಿ ಇಂಟರ್ನೆಟನ್ನು ಆರಿಸಿಕೊಳ್ಳುತ್ತಾರೆ. ಆ ಮೂಲಕ ನೆಮ್ಮದಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಬ್ಲೂವೇಲ್ ತಂಡ ಇದೇ ವರ್ಗವನ್ನು ತಮ್ಮ ಗುರಿಯಾಗಿಸುತ್ತದೆ. ಅವರ ಮಾನಸಿಕ ದುರ್ಬಲತೆಯನ್ನು ಬಂಡವಾಳ ಮಾಡಿಕೊಳ್ಳುತ್ತದೆ.

ಬ್ಲೂವೇಲ್ ಲಿಂಕ್ ಹೇಗೆ ಸಿಗುತ್ತದೆ ?

ಈ ಆಟದ ಕ್ರಮಾವಳೀನೇ ಹಾಗೆ. ಇಂಟರ್ನೆಟ್’ನಲ್ಲಿ ತಾನು ಹೆಚ್ಚು ಸರ್ಚ್ ಮಾಡಿದ್ದ ವಿಷಯಗಳ ಆಧಾರ ಮೇಲೆ ಅವಲಂಬಿತವಾಗಿರುತ್ತದೆ.
ಓರ್ವ ಮಾನಸಿಕವಾಗಿ ಕುಗ್ಗಿರುವ ವ್ಯಕ್ತಿ , ತನಗೆ ಸಮಾಧಾನ ಸಿಗುವ ವಿಷಯಗಳನ್ನೇ ಹೆಚ್ಚು ಸರ್ಚ್ ಮಾಡುತ್ತಾನೆ. ಇಂಟರ್ನೆಟ್’ನಲ್ಲಿ ನೀವು ಮಾಡುವ ಯಾವುದೇ ಕೆಲಸವು ಖಾಸಗಿಯಾಗಿ ಉಳಿಯುವುದಿಲ್ಲ ಎಂದು ಈಗಾಗಲೇ ಹಲವರಿಗೆ ತಿಳಿದಿದೆ. ಸರ್ಚ್ ಎಂಜಿನ್ ಮುಖಾಂತರ ಹುಡುಕುವ ವಿಷಯಗಳನ್ನಾಧರಿಸಿ ನಿಮ್ಮ ಮನೋಸ್ಥಿತಿಯನ್ನು ಗ್ರಹಿಸಬಹುದು. ಬ್ಲೂವೇಲ್ ಕೂಡಾ ಇದೇ ತರ ಮಾನಸಿಕವಾಗಿ ದುರ್ಬಲರನ್ನಾಗಿರುವವರನ್ನು ಗುರುತಿಸುತ್ತದೆ. ಅಂತಹಾ ಯುವಕರನ್ನು ತಮ್ಮ ಬಲೆಗೆ ಬೀಳಿಸಿ, ಅದರ ಲಿಂಕನ್ನು ಚಾಟ್ ರೂಂಗಳ ಮೂಲಕ ಅಥವಾ ಪಾಪ್ ಅಪ್’ಗಳ ಮೂಲಕ ತೋರುವಂತೆ ಮಾಡಿ ಅದನ್ನು ಕ್ಲಿಕ್ ಮಾಡಲು ಪ್ರಲೋಭನೆಗೊಳಿಸುತ್ತದೆ. ಮಾನಸಿಕವಾಗಿ ಕುಗ್ಗಿರುವವರು ಮದ್ಯ, ಮಾದಕ ವಸ್ತುಗಳ ದಾಸರಾಗುವ ರೀತಿಯಲ್ಲೇ ಬ್ಲೂವೇಲ್ ದಾಸರಾಗುತ್ತಾರೆ.

ಈ ಆಟ ಹೇಗೆ ಪ್ರಾರಂಭಗೊಂಡು ಕಾರ್ಯಾಚರಿಸುತ್ತದೆ ?

ಮೊದಲಿಗೆ ಭಯಾನಕ ಸಿನೆಮಾಗಳನ್ನು ಒಬ್ಬನೇ ಇರುವಾಗ ನೋಡುವಂತೆ ಚಾಲೆಂಜ್ ನೀಡಲಾಗುತ್ತದೆ. ನೋಡಿದ ನಂತರ ಪುರಾವೆಯಾಗಿ ಅದರ ಒಂದು ಫೋಟೋವನ್ನು ಆಟವನ್ನು ನಿರ್ವಹಣೆ ಮಾಡುತ್ತಿರುವವನಿಗೆ ಕಳಿಸಬೇಕಾಗುತ್ತದೆ. ಹದಿಹರೆಯದವರೇ ಇದರ ಗುರಿಯಾಗಿರುತ್ತಾರೆ. ಚಾಲೆಂಜನ್ನು ಒಂದು ಪ್ರತಿಷ್ಟೆಯ ಪ್ರಶ್ನೆಯನ್ನಾಗಿ ಸ್ವೀಕರಿಸುವ ಇವರು, ತಾವು ಅದನ್ನು ಪೂರ್ತಿಗೊಳಿಸುತ್ತೇವೆಂಬ ಹುಂಬ ಧೈರ್ಯ ಹೊಂದುವಂತೆ ನಿರ್ವಹಣೆಗಾರರು ಅವರನ್ನು ಪ್ರೋತ್ಸಾಹಿಸುತ್ತಾರೆ. ಇದರಲ್ಲಿ ಒಟ್ಟು 50 ಚಾಲೆಂಜ್’ಗಳನ್ನು ನೀಡಲಾಗುತ್ತದೆ. ಸ್ವಂತ ದೇಹವನ್ನು ಹರಿತವಾದ ಆಯುಧಗಳಿಂದ ಚಿತ್ರ ಬಿಡಿಸುವುದು ಸೇರಿದಂತೆ, ಪ್ರತಿ ಹಂತವನ್ನು ಪೂರ್ತಿಗೊಳಿಸಿದ ಪುರಾವೆಯಾಗಿ ಅದರ ಫೋಟೋವನ್ನು ಕಳಿಸಬೇಕಾಗುತ್ತದೆ. 50ನೇ ಮತ್ತು ಕೊನೆಯ ಗುರಿ ಸ್ವಯಂ ಆತ್ಮಹತ್ಯೆ ಮಾಡಿಕೊಳ್ಳುವುದು.

ಚಾಲೆಂಜನ್ನು ಮಧ್ಯೆ ಬಿಟ್ಟು ಬಿಡಲಾಗುವುದಿಲ್ಲ ಯಾಕೆ?

ನೀವು ಒಂದು ಬಾರಿ ಆಟವನ್ನು ಪ್ರಾರಂಭಿಸಿದ್ದೀರೆಂದಾದರೆ, ಅದರ ನಿರ್ವಹಣೆಯನ್ನು ಮಾಡುವವರು ನಿಮ್ಮ ಫೋನಿನಲ್ಲಿದ್ದ ಎಲ್ಲಾ ವೈಯುಕ್ತಿಕ ದಾಖಲೆಗಳನ್ನು, ಫೋಟೋ, ವೀಡೀಯೋ , ನಿಮ್ಮ ಕಾಂಟಾಕ್ಟ್ ಎಲ್ಲವನ್ನೂ ಕಾಪಿ ಮಾಡಿಟ್ಟುಕೊಂಡಿರುತ್ತಾರೆ. ನೀವು ಆಟ ನಿಲ್ಲಿಸಲು ಯೋಚಿಸಿದರೆ, ನಿಮ್ಮ ವೈಯುಕ್ತಿಕ ದಾಖಲೆಗಳನ್ನು ಮುಂದಿಟ್ಟುಕೊಂಡು ನಿಮ್ಮನ್ನು ಅಕ್ಷರಶಃ ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸುತ್ತಾರೆ. ಒಂದು ವೇಳೆ ನಿಮ್ಮ ಖಾಸಗಿ ದಾಖಲೆಗಳು ಯಾವುದೂ ಅವರ ಬಳಿ ಇರದಿದ್ದರೆ, ಹೊತ್ತಲ್ಲದ ಹೊತ್ತಿನಲ್ಲಿ ನಿಮಗೆ ಕರೆ ಮಾಡಲು ಪ್ರಾರಂಭಿಸುತ್ತಾರೆ. ಅದೇ ರೀತಿ ನಿಮ್ಮ ಕುಟುಂಬಿಕರಿಗೆ, ಗೆಳೆಯರಿಗೆ ಕೂಡಾ ಈ ರೀತಿಯ ಕರೆ ಮಾಡಲು ಪ್ರಾರಂಭಿಸಿ ನಿಮ್ಮನ್ನು ಮತ್ತೊಮ್ಮೆ ಆಟಕ್ಕೆ ಸೇರುವಂತೆ ಒತ್ತಡ ತರಲಾಗುತ್ತದೆ. ಕುಟುಂಬಿಕರನ್ನು ಕೊಲ್ಲುತ್ತೇವೆಂಬ ಬೆದರಿಕೆಯನ್ನೂ ಹಾಕುತ್ತಾರೆ.

ಬ್ಲೂವೇಲ್ ಜಾಲಕ್ಕೆ ಬೀಳದಂತೆ ತಡೆಯುವುದು ಹೇಗೆ?

ಇದು ಹೆಚ್ಚು ಸಣ್ಣ ಪ್ರಾಯದ ಯುವಕ ಯುವತಿಯರನ್ನು ಗುರಿಯಾಗಿರಿಸಿರುತ್ತಾರೆ. ಅವರಿಗೆ ತಮ್ಮ ಸಮಸ್ಯೆಗಳನ್ನು ಯಾರೊಂದಿಗೂ ಹಂಚಲು ಸಾಧ್ಯವಿಲ್ಲದಾಗ ಅದಕ್ಕೋಸ್ಕರ ಇಂಟರ್ನೆಟನ್ನು ತಮ್ಮ ಗೆಳೆಯರನಾಗಿಸುತ್ತಾರೆ ಮತ್ತು ತಮ್ಮ ಸಮಸ್ಯೆಗಳಿಗೆ ಅದರಲ್ಲೇ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ. ಪೋಷಕರು ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೊಂದು ಕಣ್ಣು ಯಾವತ್ತೂ ಇಡಬೇಕು. ಮನಶಾಸ್ತ್ರ ತಜ್ಞರ ಪ್ರಕಾರ ಬ್ಲೂವೇಲ್ ಆಟ ಆಡಲು ಆರಂಭಿಸಿದ ನಂತರ ಅವರು ಪೋಷಕರಿಂದ, ಗೆಳೆಯರಿಂದ ಅಂತರ ಕಾಪಾಡಲು ಪ್ರಾರಂಭಿಸುತ್ತಾರೆ. ಮನೆಯಿಂದ ಓಡಿ ಹೋಗುವ ಮತ್ತು ಸಾಯುವ ಕುರಿತು ಹೆಚ್ಚು ಹೆಚ್ಚು ಮಾತನಾಡುತ್ತಿರುತ್ತಾರೆ. ಅವರ ಊಟದ ಶೈಲಿಯಲ್ಲಿ ಬದಲಾವಣೆಗಳಾಗುತ್ತದೆ. ಬ್ಲೂವೇಲ್ ಆಟದ ಚಾಲೆಂಜ್’ಗಳಲ್ಲಿ ಪ್ರತಿ ದಿನ ತಮ್ಮ ದೇಹದಲ್ಲಿ ಮುರಿತವಾಗುವಂತಹಾ ಗಾಯಗಳನ್ನು ಮಾಡುವ ಸವಾಲು ಕೊಟ್ಟಿರುತ್ತಾರೆ. ತಮ ಮಕ್ಕಳ ಮೈ ಮೇಲೆ ಈ ತರಹ ಯಾವುದಾದರೂ ಗಾಯಗಳಾಗಿದೆಯೇ ಎಂಬುವುದನ್ನು ನಾವು ಪ್ರತಿದಿನ ಗಮನಿಸುತ್ತಿರಬೇಕು. ಒಂದು ವೇಳೆ ಸಂಶಯಗಳು ಕಂಡು ಬಂದರೆ, ಆ ಕೂಡಲೇ ಸೂಕ್ತ ತಜ್ಞರೊಂದಿಗೆ ಸಮಾಲೋಚನೆ ಮಾಡಿ ಅದರಿಂದ ಮುಕ್ತಿ ಪಡೆಯಬಹುದಾಗಿದೆ. ಅದೇ ರೀತಿ ಬೆಳಗ್ಗೆ 4.20 ಕ್ಕೆ ಏಳುವಂತಹ ಸವಾಲು, ಭಯಾನಕ ಸಿನೆಮಾ ಅಥವಾ ವೀಡಿಯೋಗಳನ್ನು ನೋಡುವುದು, ಮನೆಯ ಮಹಡಿಯಲ್ಲಿ ಜೋರಾಗಿ ಕಿರುಚಿಕೊಳ್ಳುವಂತಹಾ ಅಸಾಮಾನ್ಯ ಚಟುವಟಿಕೆಗಳು ಕಂಡಬಂದಲ್ಲಿ, ಕೂಡಲೇ ತಜ್ಞರ ಮಾರ್ಗದರ್ಶನ ಪಡೆಯಬೇಕಾಗುತ್ತದೆ.

ನಿಮ್ಮ ಮಗು ಬ್ಲೂವೇಲ್ ಆಡುತ್ತಿದ್ದರೆ ?

ಕೂಡಲೇ ಇಂಟನೆಟ್ ಸಂಪರ್ಕ ಕಡಿತಗೊಳಿಸಿ. ಪೊಲೀಸರಿಗೆ ಈ ಕುರಿತೊಂದು ಮಾಹಿತಿ ನೀಡಿ, ನಿಮ್ಮ ಮಕ್ಕಳನ್ನು ಮಾನಸಿಕ ತಜ್ಞರ ಬಳಿಗೆ ಕರೆದುಕೊಂಡು ಹೋಗಿ. ನೀವು ಮತ್ತು ನಿಮ್ಮ ಮಕ್ಕಳ ನಡುವೆ ಇರುವ ಅಂತರವನ್ನು ಆದಷ್ಟು ಕಡಿಮೆಗೊಳಿಸಿ, ಅವರ ಕುಂದುಕೊರತೆಗಳಿಗೆ ಸೂಕ್ತವಾಗಿ ಸ್ಪಂದಿಸಿ. ಆ ಮೂಲಕ ಅವರ ಸಮಸ್ಯೆಗಳ ಕುರಿತು ಅರಿತುಕೊಳ್ಳಿ. ಯಾವುದೇ ಆಟಕ್ಕಿಂತಲೂ ನಿನ್ನ ಜೀವನ ಅಮೂಲ್ಯ ಎನ್ನುವುದನ್ನು ಅವರಿಗೆ ಮನದಟ್ಟು ಮಾಡಿಸಿಕೊಡಿ. ಈ ಸಮಯದಲ್ಲೆಲ್ಲಾ ನೀವು ಅವರೊಂದಿಗೆ ಪ್ರೀತಿ-ವಾತ್ಸಲ್ಯದಿಂದ ಇರಬೇಕಾದುದು ಕಡ್ಡಾಯವಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group