ವರದಿಗಾರ-ಮಂಗಳೂರು: ಇತ್ತೀಚೆಗೆ ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ,ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ರಿಗೆ ಬಿದ್ದ ಗುಂಡು ನಾಳೆ ನನಗೂ ಬೀಳಬಹುದು. ಆದರೆ ಸಾವಿಗೆ ಭಯಪಟ್ಟಿಲ್ಲ. ನಾವು ಕೆಟ್ಟ ಕಾಲದಲ್ಲಿದ್ದೇವೆ. ನಾವು ಮಾಡಬೇಕಾದ ಕೆಲಸ ಬಹಳಷ್ಟಿದೆ. ಅತೃಪ್ತ ಆತ್ಮಗಳಾಗಿ ಸಾಯಬಾರದು ಎಂದು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಅವರು ನಾರಾಯಣ ಗುರು ವಿಚಾರ ಕಮ್ಮಟ ವತಿಯಿಂದ ನಗರದ ಸೈಂಟ್ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಆರೆಸ್ಸೆಸ್ ಸಭೆಯಲ್ಲಿ ನನ್ನನ್ನು ಮಟ್ಟ ಹಾಕುವ ಕುರಿತು ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ಲಭ್ಯವಾಗಿದೆ. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕೂಡ ಆ ಸಭೆಯಲ್ಲಿ ಪಾಲ್ಗೊಂಡಿದ್ದರು. ‘ಮಟ್ಟುವನ್ನು ಮಟ್ಟ ಹಾಕಬೇಕು’ ಎಂಬ ಚರ್ಚೆ ಅಲ್ಲಿ ನಡೆದಿದೆ ಎಂಬುದಾಗಿ ಗುಪ್ತದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅಮೀನ್ ಮಟ್ಟು ಹೇಳಿದ್ದಾರೆ.
ಈ ಜಿಲ್ಲೆಯನ್ನು ಬುದ್ದಿವಂತರ, ಸೌಹಾರ್ಧ ಪ್ರೀಯರ, ಉದ್ಯಮಶೀಲರ, ವಿದ್ಯಾವಂತರ, ಸಂಸ್ಕೃತಿ ಪ್ರೀಯರ ನಾಡನ್ನಾಗಿ ಕಟ್ಟಿದ್ದು ಹಣೆಗೆ ಕುಂಕುಮ ಬಳಿದು ಕೇಸರಿ ಪಟ್ಟಿ ತೊಟ್ಟು, ಕೈಯ್ಯಲ್ಲಿ ಕತ್ತಿ ತಲವಾರು ಹಿಡಿದುಕೊಂಡವರಲ್ಲ. ಬದಲಾಗಿ ತ್ಯಾಗ, ಬಲಿದಾನ ಹೋರಾಟಗಳ ಮೂಲಕ, ಬೆವರನ್ನು ಸುರಿಸಿ ಈ ಜಿಲ್ಲೆಯನ್ನು ನಮ್ಮ ಹಿರಿಯರು ಕಟ್ಟಿದ್ದಾರೆ. ಯುವಕರ ಕೈಯ್ಯಲ್ಲಿ ಕತ್ತಿಕೊಟ್ಟು ಈ ಸುಂದರ ವಿದ್ಯಾವಂತರ, ಬುದ್ದಿವಂತರ ಜಿಲ್ಲೆಯನ್ನು ಕಟ್ಟಿಲ್ಲ. ಆದ್ದರಿಂದ ಯುವಕರು ಕತ್ತಿ ಎತ್ತುವಾಗ, ಅನ್ಯ ಧರ್ಮಿಯರ ವಿರುದ್ದ ಘೊಷಣೆ ಕೂಗುವಾಗ ಈ ನಾಡು, ಸಂಸ್ಕೃತಿಯನ್ನು ಕಟ್ಟಿದ್ದು ಯಾರೆಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕೆಂದು ಇದೇ ಸಂದರ್ಭ ಹೇಳಿದ್ದಾರೆ.
