ರಾಜ್ಯ ಸುದ್ದಿ

ಬಿಜೆಪಿಯೊಳಗೆ ಮತ್ತೆ ಪ್ರತ್ಯಕ್ಷಗೊಂಡ ಭಿನ್ನಮತ

ವರದಿಗಾರ-ಬೆಂಗಳೂರು:ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕರ್ನಾಟಕ ರಾಜ್ಯದಲ್ಲಿ ಮತ್ತೆ ಭಿನ್ನಮತ ಪ್ರತ್ಯಕ್ಷಗೊಂಡಿದೆ.ಎಂದಿನಂತೆ ಈ ಸಲವೂ ಭಿನ್ನಮತ ರಾಜ್ಯ ನಾಯಕರ  ನಡುವಿನಲ್ಲಿ ನಡೆದಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಬೂತ್‌ ನಿರ್ವಹಣಾ ಸಮಿತಿ ಸಭೆಗೆ ಬರುವಂತೆ 40 ಸದಸ್ಯರಿಗೂ ಗುರುವಾರ ಆಹ್ವಾನ ನೀಡಲಾಗಿತ್ತು .ಆದರೆ ಬೂತ್‌ ನಿರ್ವಹಣಾ ಸಮಿತಿ ಸಭೆಗೆ ಭಾಗವಹಿಸದಂತೆ ಕೆಲವು ನಾಯಕರಿಗೆ ಸಭೆಯ ಅಂತಿಮ ಹಂತದಲ್ಲಿ ರಾಜ್ಯ ನಾಯಕತ್ವ ಸೂಚಿಸುವುದರೊಂದಿಗೆ ಬಿಜೆಪಿಯೊಳಗೆ ಹೊಗೆಯಾಡುತ್ತಿದ್ದ ಭಿನ್ನಮತ ಮತ್ತೆ ಸ್ಪೋಟಿಸಿದೆ.

ಈ ಭಿನ್ನಮತವು ಶುಕ್ರವಾರ ರಾತ್ರಿ ಪಕ್ಷದ ನಾಯಕರಾದ ನಿರ್ಮಲ್‌ ಕುಮಾರ್‌ ಸುರಾನ, ನಂದೀಶ್‌, ಗಿರೀಶ್‌ ಪ‍ಟೇಲ್‌ ಹಾಗೂ ಕೇಶವ ಪ್ರಸಾದ್‌ ಅವರಿಗೆ ದೂರವಾಣಿ ಮೂಲಕ ಸಭೆಗೆ ಭಾಗವಹಿಸದಂತೆ ತಾಕೀತು ಮಾಡುವ ಮೂಲಕ ಪ್ರಾರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ನಾಳಿನ ಸಭೆಗೆ ನೀವು ಬರಬಾರದು ಎಂದು ಕರೆ ಮಾಡಿದ ವ್ಯಕ್ತಿ ಹೇಳಿದರು. ನಾವು ಸಭೆಗೆ ಏಕೆ ಬರಬಾರದು ಎಂಬುದನ್ನು ತಿಳಿಸಲಿಲ್ಲ. ನಮ್ಮನ್ನು ನಿರ್ಬಂಧಿಸಿರುವುದರ ಹಿಂದೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಕೈವಾಡವಿದೆ ಎಂದು ಸದಸ್ಯರೊಬ್ಬರು ಆರೋಪಿಸಿದ್ದಾರೆ.

ನಾವು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪನವರ ಬೆಂಬಲಿಗರು. ಕೆಲವು ತಿಂಗಳ ಹಿಂದೆ ಯಡಿಯೂರಪ್ಪನವರ ವಿರುದ್ಧ ಅಮಿತ್‌ ಷಾ ಮತ್ತು ರಾಮ್‌ಲಾಲ್‌ ಅವರಿಗೆ ಕೊಟ್ಟ ದೂರಿಗೆ ನಾವು ಸಹಿ ಹಾಕಿದ್ದೆವು. ಈ ಕಾರಣಕ್ಕೆ ಯಡಿಯೂರಪ್ಪ ಸೇಡಿನ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದೂ ಅವರು ದೂರಿದ್ದಾರೆ.

ಈಶ್ವರಪ್ಪ ಅವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ವಿಧಾನಪರಿಷತ್‌ ಸದಸ್ಯ ಎಂ.ಬಿ. ಭಾನುಪ್ರಕಾಶ್‌ ಸಮಿತಿ ಸದಸ್ಯರಾಗಿದ್ದರೂ ವೈಯಕ್ತಿಕ ಕಾರಣಗಳಿಂದ ಸಭೆಯಲ್ಲಿ ಭಾಗವಹಿಸಲಿಲ್ಲ. ವಿಧಾನಪರಿಷತ್‌ ಮಾಜಿ ಸದಸ್ಯ ಎ.ಎಚ್‌. ಶಿವಯೋಗಿ ಸ್ವಾಮಿ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ.

ಯಡಿಯೂರಪ್ಪ ಮತ್ತೊಮ್ಮೆ ಪಕ್ಷದಲ್ಲಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ಅವರ ವಿರುದ್ಧ ವರಿಷ್ಠರಿಗೆ ದೂರು ಕೊಡುತ್ತೇವೆ. ಸದ್ಯದಲ್ಲೇ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ ಸಂದರ್ಭದಲ್ಲಿ ಅವಕಾಶ ಸಿಕ್ಕರೆ ರಾಜ್ಯದ ಬೆಳವಣಿಗೆ ಕುರಿತು ಪ್ರಸ್ತಾಪಿಸಲಾಗುವುದು. ನಮ್ಮ ಮುಂದಿನ ನಡೆ ಬಗ್ಗೆಯೂ ಚರ್ಚಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಜಿಲ್ಲಾ ಅಧ್ಯಕ್ಷರ ನೇಮಕಾತಿಯಲ್ಲಿ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ ಎಂದು ಯಡಿಯೂರಪ್ಪನವರ ವಿರುದ್ಧ ಸಡ್ಡು ಹೊಡೆದಿದ್ದ ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಬೂತ್‌ ಸಮಿತಿಗೆ ಕೆಲವರನ್ನು ಆಹ್ವಾನಿಸದೆ ಇರುವುದು ದುರದೃಷ್ಟಕರ. ಎಲ್ಲವೂ ಸರಿಹೋಯಿತು ಎಂಬ ಹಂತದಲ್ಲಿ ಮತ್ತೆ ಸಮಸ್ಯೆ ಸೃಷ್ಟಿಯಾಗಿದೆ ವಿಧಾನ ಪರಿಷತ್‌ ಸದಸ್ಯ ಎಂ.ಬಿ. ಭಾನುಪ್ರಕಾಶ್‌ ಹೇಳಿಕೊಂಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group