ವರದಿಗಾರ-ದೆಹಲಿ: ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿ ಗೋವಿನ ಹೆಸರಿನಲ್ಲಿ ಹಲವು ಜೀವಗಳನ್ನು ಬಲಿಪಡೆದುಕೊಂಡಿರುವ ಗೋ ರಕ್ಷಕರು, ಗೋ ರಕ್ಷಣೆ ಹೆಸರಿನಲ್ಲಿ ನಡೆಸುವ ದಾಳಿಯನ್ನು ತಡೆಯಲು ಪ್ರತೀ ಜಿಲ್ಲೆಗೆ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯನ್ನು ನೇಮಿಸುವಂತೆ ಸುಪ್ರೀಂಕೋರ್ಟ್ ರಾಜ್ಯ ಸರಕಾರಗಳಿಗೆ ಆದೇಶ ನೀಡಿದೆ.
2017 ಅಕ್ಟೋಬರ್ 13ರ ಒಳಗೆ ಈ ನಿರ್ದೇಶನವನ್ನು ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಗೋ ರಕ್ಷಣೆ ಹೆಸರಿನಲ್ಲಿ ದಾಳಿಗೆ ಒಳಗಾದವರಿಗೆ ರಾಜ್ಯ ಸರಕಾರಗಳು ಸೂಕ್ತ ಪರಿಹಾರ ನೀಡಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಜಾನುವಾರು ಸಾಗಣೆಯನ್ನು ಗುರಿಯಾಗಿಸಿಕೊಂಡು ಹೆದ್ದಾರಿಗಳಲ್ಲಿ ನಡೆಯುವ ದಾಳಿಗಳನ್ನು ತಡೆಯಲು ರಾಜ್ಯ ಸರಕಾರಗಳು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ಬಗ್ಗೆಯೂ ವರದಿ ಸಲ್ಲಿಸಲು ನ್ಯಾಯಪೀಠ ಸೂಚನೆ ನೀಡಿದೆ.
ಪ್ರತೀ ಜಿಲ್ಲೆಗೆ ನೇಮಿಸಿರುವ ಪೊಲೀಸ್ ಅಧಿಕಾರಿಯು, ಜಿಲ್ಲೆಗಳಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ನಡೆಸುವ ದಾಳಿಗಳಿಗೆ ಜವಾಬ್ದಾರರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ .
