ವರದಿಗಾರ ವಿಶೇಷ

‘ಸುಂದರಿ’ ಪತ್ರಕರ್ತೆ ಹಾಗೂ ಸಂಜೀವ್ ಭಟ್; ಮುಖವಾಡ ತೊಟ್ಟವರು ಯಾರು ?

► ಸೇಡು ಮತ್ತು ವಿಶ್ವಾಸಾರ್ಹತೆಯ ಪ್ರಶ್ನೆಗಳು

► ಚುಕ್ಕೆಗಳನ್ನು ಜೋಡಿಸುವ ಒಂದು ಪ್ರಯತ್ನ

ವರದಿಗಾರ :  2002 ರ ಗುಜರಾತ್ ಗಲಭೆ, ಸೊಹ್ರಾಬುದ್ದೀನ್ ನಕಲಿ ಎನ್’ಕೌಂಟರ್ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೆಂದ್ರ ಮೋದಿಯವರ ಪಾತ್ರಗಳನ್ನು ದುರ್ಬಲಗೊಳಿಸಲು ಓರ್ವ ಯುವ ‘ಸುಂದರಿ’ ಪತ್ರಕರ್ತೆಯನ್ನು ಬಲೆಗೆ ಬೀಳಿಸಲಾಗಿತ್ತೆಂದು ಗುಜರಾತಿನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸ್ಪೋಟಕ ಆರೋಪಗಳನ್ನು ಹೊರಿಸಿ ತನ್ನ ಫೇಸ್ಬುಕ್’ನಲ್ಲಿ ಪೋಸ್ಟ್ ಮಾಡಿದ್ದರು. ಆ ಯುವ ‘ಸುಂದರಿ’ ಪತ್ರಕರ್ತೆಗೆ ನಿಯತಕಾಲಿಕವೊಂದಕ್ಕಾಗಿ ತನಿಖಾ ವರದಿಯನ್ನು ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿತ್ತು ಮತ್ತು ಆಕೆ ಅದರಲ್ಲಿ ಬಹುತೇಕ ಯಶಸ್ವಿಯೂ ಆಗಿದ್ದಳು. ಆದರೆ ತನ್ನ ತನಿಖಾ ವರದಿಗೆ ಪೂರಕವಾಗಿರುವಂತಹ ವರದಿಗಳನ್ನು ಸಂಗ್ರಹಿಸುವ ಭರದಲ್ಲಿ ಆಕೆ ಓರ್ವ ಐಪಿಎಸ್ ಅಧಿಕಾರಿಯೊಂದಿಗೆ ಪ್ರೇಮದ ಬಲೆಯಲ್ಲಿ ಬಿದ್ದಿದ್ದಳು. ಅವರ ಏಕಾಂತ ಸಮಯದ ರಹಸ್ಯ ದೃಶ್ಯಗಳನ್ನು ಗುಜರಾತ್  ಪೊಲೀಸರು ಸೆರೆ ಹಿಡಿದಿದ್ದು ಅವರಿಬ್ಬರಿಗೂ ತಿಳಿದಿರಲಿಲ್ಲ. ಇದು ಕೊನೆಯಲ್ಲಿ ಆಕೆ ತಾನು ನಡೆಸಿದ್ದ ತನಿಖಾ ವರದಿಯಲ್ಲಿ ಗುಜರಾತ್ ಹತ್ಯಾಕಾಂಡದಲ್ಲಿ ಆಗಿನ ಮುಖ್ಯಮಂತ್ರಿ ಮೋದಿಯವರ ಪಾತ್ರಗಳನ್ನು ಮರೆ ಮಾಚುವ ‘ಒಪ್ಪಂದ’ಕ್ಕೆ ಬರುವಲ್ಲಿ ಸಹಕಾರಿಯಾಯಿತು. ತನ್ನ ಮಾನವನ್ನು ಬಹಿರಂಗವಾಗಿ ಹರಾಜಿಗೆ ಹಾಕುವವರಿಗೆ ಮಂಡಿಯೂರಿದ್ದ ಆ ‘ಸುಂದರಿ’ ಪತ್ರಕರ್ತೆ, ಪ್ರಕರಣದ ವಕೀಲನನ್ನೂ ಹಳಿ ತಪ್ಪುವಂತೆ ಮಾಡುವಲ್ಲಿ ಮತ್ತು ಆತ ನ್ಯಾಯಾಲಯದಲ್ಲಿ ಕೆಲವೊಂದು ಸೂಕ್ಷ್ಮ ವಿಷಯಗಳನ್ನು ಮನವರಿಕೆ ಮಾಡದಂತೆ ತಡೆಯುವಲ್ಲಿ ಈಕೆ ಯಶಸ್ವಿಯಾಗಿದ್ದಳು ಎಂದೆಲ್ಲಾ ಸಂಜೀವ್ ಭಟ್ ತಮ್ಮ ಪೋಸ್ಟಿನಲ್ಲಿ ಬರೆದುಕೊಂಡಿದ್ದರು.

ಸಾಮಾಜಿಕ ತಾಣಗಳಲ್ಲಿ ಈ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಗುಜರಾತ್ ಗಲಭೆಯ ಕುರಿತು ಆಳವಾಗಿ ಅಧ್ಯಯನ ನಡೆಸಿದ ಯಾರಿಗೂ ಸಂಜೀವ್ ಭಟ್’ರವರು ಹೆಸರಿಸದೇ ಉಲ್ಲೇಖಿಸಿರುವ ಆ ‘ಸುಂದರಿ’ ಪತ್ರಕರ್ತೆ ಯಾರೆಂದು ತಿಳಿಯಬಹುದಾಗಿದೆ. ಆದರೆ ಇಲ್ಲಿ ಸಂಜೀವ್ ಭಟ್’ರವರು ಹೇಳುತ್ತಿರುವುದು ನಿಜವೇ ಎಂದಾದರೆ ಆಕೆಯ ಹೆಸರು ಉಲ್ಲೇಖಿಸಲು ಹಿಂಜರಿಕೆಯೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಆ ಪತ್ರಕರ್ತೆ ಮೇ 2016 ರಲ್ಲಿ ಗುಜರಾತ್ ಹತ್ಯಾಕಾಂಡ ಮತ್ತು ನಂತರದ ಘಟನಾವಳಿಗಳ ಕುರಿತಾಗಿ ತಾನು ನಡೆಸಿದ್ದ ತನಿಖಾ ವರದಿಯ ಪುಸ್ತಕವನ್ನೂ ಹೊರ ತಂದಿದ್ದು, ಅದು ಈಗಾಗಲೇ 11 ಭಾಷೆಗಳಲ್ಲಿ ಪ್ರಕಟಗೊಂಡಿದೆ ಕೂಡಾ. ಮಾತ್ರವಲ್ಲ 4 ದಿನಗಳ ಹಿಂದಷ್ಟೇ ಅದರ ಹಿಂದಿ ಅವತರಣಿಕೆ ಕೂಡಾ ಬಿಡುಗಡೆಗೊಂಡಿತ್ತು. ಹಿಂದಿ ಭಾಷೆಯಲ್ಲಿ ಬಿಡುಗಡೆಗೊಂಡಿರುವ ಪುಸ್ತಕ ಹೆಚ್ಚಿನ ಓದುಗರನ್ನು ತಲುಪಿ ಸಂಚಲನ ಸೃಷ್ಟಿಸಲಿದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

ಸಂಜೀವ ಭಟ್ 2011 ರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದ್ದರು.  ಅದರಲ್ಲಿ ನರೇಂದ್ರ ಮೋದಿಯವರು 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದು ‘ಹಿಂದೂಗಳಿಗೆ ಅಲ್ಪಸಂಖ್ಯಾತರ ಮೇಲಿರುವ ದ್ವೇಷವನ್ನು ತೀರಿಸಲು ಅನುಮತಿ ನೀಡುವಂತೆ’ ಆಜ್ಞೆ ನೀಡಿದ್ದರು ಎಂದು ಆರೋಪಿಸಿದ್ದರು. ಮೋದಿಯವರ ಆ ಸಭೆಯಲ್ಲಿ ತಾನೂ ಹಾಜರಿದ್ದೆನು ಎಂದು ಭಟ್ ಹೇಳಿದ್ದರು,  ಆದರೆ ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತನಿಖಾ ದಳವು ಭಟ್ ಆ ಸಭೆಯಲ್ಲಿ ಹಾಜರಿರಲಿಲ್ಲ ಎಂದಿತ್ತು, ಮೋದಿಯ ವಿರುದ್ಧ ಅವರ ಆರೋಪಗಳೂ ತಳ್ಳಲ್ಪಟ್ಟವು.  ಹಾಗೆ ಮುಖ್ಯಮಂತ್ರಿ ಮೋದಿ ಹೇಳಿದ್ದಲ್ಲಿ ಅದನ್ನು ಹೊರ ಜಗತ್ತಿಗೆ ತಿಳಿಸುವುದಕ್ಕೆ 9 ವರ್ಷಗಳ ಸಮಯ ತೆಗೆದುಕೊಂಡದ್ದನ್ನು ಹಾಗೂ ಭಟ್’ರ ವಿಶ್ವಾಸಾರ್ಹತೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.

ಆಕೆ ತನ್ನ ಈ ಪುಸ್ತಕದಲ್ಲಿ ಸಂಜೀವ ಭಟ್ ನರೇಂದ್ರ ಮೋದಿಯವರ ಮೇಲೆ ಹೊರಿಸಿದ ಆರೋಪದಲ್ಲಿ ತನಗೆ ವಿಶ್ವಾಸವಿಲ್ಲವೆಂದೂ, ಅವರನ್ನು ‘ವಿಶ್ವಾಸರ್ಹವಲ್ಲ’ವೆಂದು ಸುಪ್ರೀಂ ಕೋರ್ಟ್ ಹೇಳಿದ್ದನ್ನು ವಿವರಿಸಿದ್ದರು. ಪ್ರತಿಯಾಗಿ ಈಗ ಅವರು ಆ ಪತ್ರಕರ್ತೆಯ ಮೇಲೆ ಇರುವ ಸೇಡನ್ನು ಈ ರೀತಿಯಾಗಿ ತೀರಿಸಿಕೊಳ್ಳುತ್ತಿದ್ದಾರೆ ಎಂದು ಎಲ್ಲರೂ ಪ್ರತಿಕ್ರಿಯಿಸುತ್ತಿದ್ದಾರೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಏಕೆಂದರೆ ಸಂಜೀವ್ ಭಟ್ ಈ ಎಲ್ಲಾ ವಿಷಯಗಳನ್ನು ಇಷ್ಟು ವರ್ಷಗಳ ಕಾಲ ಹೊರ ಜಗತ್ತಿಗೆ ತಿಳಿಸದೇ ಇರಲಿಕ್ಕಿರುವ ಕಾರಣಗಳೇನು ? ಅದಲ್ಲದೆ ಆ ಪತ್ರಕರ್ತೆ ಕಳೆದ ವರ್ಷ ತನ್ನ ಪುಸ್ತಕ ಬಿಡುಗಡೆಗೊಳಿಸಿದ್ದ ಸಂದರ್ಭದಲ್ಲೂ ಇದ್ಯಾವುದನ್ನೂ ಸಂಜೀವ್ ಭಟ್ ಉಲ್ಲೇಖಿಸಿರಲಿಲ್ಲ. ಆದರೆ ಈಗ ಅದರ ಹಿಂದಿ ಅವತರಣಿಕೆ ಬಿಡುಗಡೆಗೊಂಡ ಕೆಲವೇ ದಿನದಲ್ಲಿ ಈ ರೀತಿಯ ಆರೋಪಗಳನ್ನು ಹೊರಿಸಿದ್ದು ಹಲವಾರು ಸಂಶಯಗಳನ್ನು ಹುಟ್ಟು ಹಾಕಿದೆ.

ಗುಜರಾತ್ ಗಲಭೆಯಲ್ಲಿ ಮರೆ ಮಾಚಲಾದ ಸತ್ಯಗಳ ಬೆನ್ನತ್ತಿ, ಎಲ್ಲಾ ಅಡೆ ತಡೆಗಳನ್ನು ಮೀರಿ ಪುಸ್ತಕ ರೂಪದಲ್ಲಿ ತನ್ನ ತನಿಖಾ ವರದಿಯನ್ನು ಜಗತ್ತಿನ ಮುಂದಿಟ್ಟ ಪತ್ರಕರ್ತೆಯ ಧೈರ್ಯವನ್ನು ದೇಶ -ವಿದೇಶಗಳಿಂದ ಜನರು ಕೊಂಡಾಡುತ್ತಿರುವಾಗ ಸಂಜೀವ್ ಭಟ್’ರ ಈ ಆರೋಪ ಅವರ ವಿಶ್ವಾಸಾರ್ಹತೆಯನ್ನು ಮತ್ತೆ ಪ್ರಶ್ನಿಸುವಂತಿದೆ. ಗುಜರಾತ್ ಗಲಭೆಯ ಬಗ್ಗೆ ಪತ್ರಕರ್ತೆಯು ಬರೆದ ಪುಸ್ತಕದ ಹಿಂದಿ ಅನುವಾದವು ಕಳೆದ ವಾರವಷ್ಟೇ ಬಿಡುಗಡೆಗೊಂಡಿತ್ತು. ಕೆಲವೇ ತಿಂಗಳಲ್ಲಿ ಚುನಾವಣೆ ನಿರೀಕ್ಷಿಸುತ್ತಿರುವ ಗುಜರಾತನ್ನೊಳಗೊಂಡಂತೆ ದೇಶದ ಉದ್ದಗಲಕ್ಕೂ ಹಿಂದಿ ಅನುವಾದವು ಸಂಚಲನ ಸೃಷ್ಟಿಸಬಹುದು ಎಂದು ಅಭಿಪ್ರಾಯಗಳು ಹೊರಬಂದಾಗಲೇ ಸಂಜೀವ್ ಭಟ್ ಈ ರೀತಿ ಆರೋಪಿಸಿರುವುದು ಗಮನಾರ್ಹ.

ತನ್ನ ಫೇಸ್ಬುಕ್ ಪೋಸ್ಟ್’ನಲ್ಲಿ ಸಂಜೀವ್ ಭಟ್ ಆರೋಪಗಳನ್ನು ಹೊರಿಸಿದ ವಕೀಲರು ಈಗ ಜೀವಂತವಿಲ್ಲ.  ಆದರೆ ಆ ವಕೀಲರ ಮಗನು ಇತ್ತೀಚೆಗೆ ತನ್ನ ವೆಬ್ ಸೈಟ್’ನಲ್ಲಿ ಸಂಜೀವ್ ಭಟ್ ತನ್ನ ಮೋದಿ ವಿರೋಧದ ಅಮಲಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಮಾಹಿತಿಗಳನ್ನು ಹರಡಿದ್ದರ ಬಗ್ಗೆ ಬರೆದಿದ್ದರು.  ಆದ್ದರಿಂದ ಸಂಜೀವ್ ಭಟ್’ರ ಈ ಆರೋಪಗಳಲ್ಲಿ ಸೇಡಿನ ವಾಸನೆಯಿದೆ ಎಂದರೂ ತಪ್ಪಾಗಲಾರದು. ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಚಾಣಾಕ್ಷತನವೇ?  ‘ಸುಂದರಿ ಪತ್ರಕರ್ತೆ ‘ ಇದುವರೆಗೂ ಈ ಬಗ್ಗೆ ಪ್ರತ್ರಿಕ್ರಿಯಿಸಿಲ್ಲ. ಆದರೆ ಈ ಆರೋಪಗಳು ಸಾಬೀತಾದಲ್ಲಿ ಪತ್ರಕರ್ತೆಯ ಮುಖವಾಡ ಹಾಗೂ ಸುಳ್ಳಾದಲ್ಲಿ ಸಂಜೀವ್ ಭಟ್’ರ ಮುಖವಾಡ ಕಳಚಿ ಬೀಳಲಿದೆ.  ಎರಡರಲ್ಲಿ ಒಂದು ಮುಖವಾಡ ಕಳಚಿ ಬೀಳುವುದಂತೂ ಖಚಿತ, ಅದು ಯಾರದ್ದೆಂದು ಕಾಲವೇ ತಿಳಿಸಬೇಕಾಗಿದೆ, It is just a matter of time.  ಸುಪ್ರೀಂ ಕೋರ್ಟ್’ನಿಂದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲ್ಪಟ್ಟ ವ್ಯಕ್ತಿಯೊಬ್ಬರು ಅನುಮಾನಾಸ್ಪದ ಸಮಯದಲ್ಲಿ ಮುಖಪುಟದ ಗೋಡೆಯಲ್ಲಿ ಗೀಚಿದ್ದನ್ನು ನಂಬುವುದು ಎಷ್ಟು ಸರಿ ಎನ್ನುವುದನ್ನು ನಿಮ್ಮ ಯೋಚನೆಗೆ ಬಿಡುತ್ತಿದ್ದೇವೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group