► ಟೆಕ್ಕಿಗಳು, ಕಾಲೇಜು ವಿದ್ಯಾರ್ಥಿಗಳನ್ನಾದಿಯಾಗಿ ಮೋಡಿ ಮಾಡಿರುವ ಹಾಡು
► ಅಂತರ್ಜಾಲದಲ್ಲಿ ಮಿಲಿಯನ್ ದಾಟಿದ ವೀಡಿಯೋ ವೀಕ್ಷಕರ ಸಂಖ್ಯೆ
ವರದಿಗಾರ : ಮಲಯಾಳಂ ಸಿನೆಮಾ ಲೋಕದ ಹೆಸರಾಂತ ನಟ ಮೋಹನ್ ಲಾಲ್ ಅಭಿನಯದ ‘ವೆಳಿಪಾಡಿಂಡೆ ಪುಸ್ತಗಂ’ ಎಂಬ ಮಲಯಾಳ ಸಿನೆಮಾದ ಹಾಡು ‘ಎಂಡೆಮ್ಮೆಡೆ ಜಿಮಿಕ್ಕಿ ಕಮ್ಮಲ್’ ಹಾಡು ಅಂತರ್ಜಾಲ ತಾಣದಾದ್ಯಂತ ಸಂಚಲನ ಸೃಷ್ಟಿಸಿದೆ. ಇದರರ್ಥ ‘ನನ್ನ ತಾಯಿಯ ಕಿವಿಯೋಲೆ’ ಎಂದಾಗಿದೆ. ಯೂಟ್ಯೂಬಿನಲ್ಲಿ ಈ ಹಾಡು 17 ಮಿಲಿಯನ್’ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ. ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು, ಕಂಪನಿ ಉದ್ಯೋಗಿಗಳು ಸೇರಿದಂತೆ ಎಲ್ಲಾ ವರ್ಗದ ಸಂಗೀತ ಪ್ರಿಯರು ಈ ಬಾರಿಯ ಓಣಂ ಹಬ್ಬದ ಸಮಯದಲ್ಲಿ ‘ಜಿಮಿಕ್ಕಿ ಹಾಡಿಗೊಂದು ಡ್ಯಾನ್ಸ್’ ಎಂಬ ಸವಾಲು ಹಾಕಿ ತಮ್ಮ ಕಾಲೇಜಿನಲ್ಲಿ, ಕಂಪನಿಗಳಲ್ಲಿ ಈ ಹಾಡಿಗೆ ನೃತ್ಯ ಮಾಡಿ ಅದನ್ನು ಯೂಟ್ಯೂಬಿನಲ್ಲಿ ಅಪ್ಲೋಡ್ ಮಾಡಿದ್ದಾರೆ. ಹೀಗೆ ಅಪ್ಲೋಡ್ ಮಾಡಲ್ಪಟ್ಟ ಕೆಲವೊಂದು ನೃತ್ಯಗಳ ವೀಡಿಯೋಗಳು ಮಿಲಿಯನ್’ಗಿಂತಲೂ ಹೆಚ್ಚು ವೀಕ್ಷಿಸಿದ್ದಾರೆ.
ಅದರಲ್ಲಿ ಅಗ್ರ ಪಂಕ್ತಿಯಲ್ಲಿರುವ ಹೆಚ್ಚು ವೀಕ್ಷಕರನ್ನು ಆಕರ್ಷಿಸಿದ ವೀಡಿಯೋಗಳು ಕೆಳಗಿವೆ.
ಭಾರತೀಯ ವಾಣಿಜ್ಯ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಮಾಡಿದ್ದ ನೃತ್ಯ ಮೊದಲ ಸ್ಥಾನದಲ್ಲಿದೆ. ಈ ವರದಿಯನ್ನು ಬರೆಯುವ ಸಂದರ್ಭ ಅದು ಯೂಟ್ಯೂಬಿನಲ್ಲಿ 16 ಮಿಲಿಯನ್ ವೀಕ್ಷಕರನ್ನು ಆಕರ್ಷಿಸಿದೆ.
ಅದೇ ರೀತಿ ನೆರೆಯ ತಮಿಳುನಾಡಿನ DSA ಎನ್ನುವ ನೃತ್ಯ ಶಾಲೆಯ ವಿದ್ಯಾರ್ಥಿಗಳು ಕೇವಲ ಒಂದು ಗಂಟೆಯ ಅವಧಿಯಲ್ಲಿ ಸಂಯೋಜಿಸಿದ ನೃತ್ಯ 4 ಮಿಲಿಯನ್ ವೀಕ್ಷಕರನ್ನು ಯೂಟ್ಯೂಬಿನಲ್ಲಿ ತನ್ನತ್ತ ಆಕರ್ಷಿಸಿದೆ.
ಮೂರನೇ ಸ್ಥಾನದಲ್ಲಿ ಓಣಂ ವಿಶೇಷ ಊಟಕ್ಕೆ ಕೂತಿದ್ದ ಕುಟುಂಬವೊಂದು ಮಾಡಿರುವ ನೃತ್ಯ. ಸದ್ಯ 3.9 ಮಿಲಿಯನ್ ವೀಕ್ಷಕರು ಈ ವೀಡಿಯೋವನ್ನು ಯೂಟ್ಯೂಬಿನಲ್ಲಿ ವೀಕ್ಷಿಸಿದ್ದಾರೆ.
ಮುಂಬೈ ಮೂಲದ ‘ನಾಚ್’ ತಂಡದ ಸದಸ್ಯರಿಬ್ಬರು ಈ ಜಿಮಿಕ್ಕಿ ಕಮ್ಮಲ್ ಹಾಡಿಗೆ ನೃತ್ಯ ಮಾಡಿದ್ದು, ಯೂಟ್ಯೂಬಿನಲ್ಲಿ ಅದು 1.8 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟಿದೆ.
ಐಟಿ ಉದ್ಯೋಗಿಗಳೂ ಈ ಚಾಲೆಂಜಿನಲ್ಲಿ ತಾವೇನೂ ಕಡಿಮೆಯಿಲ್ಲವೆಂಬಂತೆ ತಮ್ಮ ಕಛೇರಿಯಲ್ಲೇ ವಿಶಿಷ್ಟವಾಗಿ ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ನೃತ್ಯ 1.1 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟಿದೆ.
ಅಮೆರಿಕಾದ ಟಾಕ್ ಶೋ ನಡೆಸಿ ಕೊಡುವ ಜಿಮ್ಮಿ ಕಿಮ್ಮೆಲ್ ತನ್ನ ಹೆಸರನ್ನು ಸೂಚಿಸುವ ಹಾಡೊಂದು ಭಾರತದಲ್ಲಿ ಜನಪ್ರಿಯವಾಗಿರುವ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದರು. ತಾನೂ ಕೂಡಾ ಈ ಹಾಡನ್ನು ಇಷ್ಟಪಟ್ಟಿರುವುದಾಗಿ ಹೇಳಿ ಹಲವರ ಹುಬ್ಬೇರಿಸಿದ್ದರು. ಜಿಮ್ಮಿಯ ಅಭಿಮಾನಿಯೋರ್ವ ಈ ಹಾಡಿನ ಕುರಿತಾಗಿ ಟ್ವೀಟ್ ಮಾಡಿ ಜಿಮ್ಮಿಗೆ ತಿಳಿಸಿದ್ದರು.
