ವರದಿಗಾರ ಭೋಪಾಲ್ : ಪ್ರೀತಿ ಮಾಯೆ ಹುಶಾರು ಅಂತಾರೆ ಹಿರಿಯರು. ಪ್ರೀತಿಗೆ ಯಾವುದೇ ಗಡಿಯ ಮಿತಿಯಿರುವುದಿಲ್ಲವೆನ್ನುವುದಕ್ಕೆ ಮಧ್ಯಪ್ರದೇಶದ ಕಾಂಗ್ರೆಸ್ಸಿನ ಬುಡಕಟ್ಟು ಜನಾಂಗದ ‘ಭವಿಷ್ಯದ ನಾಯಕಿ’ ಎಂದೇ ಬಿಂಬಿತವಾಗಿದ್ದ ಹಿಮಾದ್ರಿ ಸಿಂಗ್ ಮತ್ತು ಬಿಜೆಪಿಯ ನಾಯಕ ನರೇಂದ್ರ ಸಿಂಗ್ ಮರಾವಿಯವರೇ ಸಾಕ್ಷಿಯಾಗಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ಸಿನ ಹಿರಿಯ ನಾಯಕಿಯಾಗಿದ್ದ ಹಿಮಾದ್ರಿಯವರ ತಾಯಿ 2009ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಸಿಂಗರನ್ನು ಸೋಲಿಸಿದ್ದರೆನ್ನುವುದು ಆಸಕ್ತಿದಾಯಕ ವಿಚಾರವಾಗಿದೆ.
ಕುತೂಹಲಕರ ಅಂಶವೆಂದರೆ ಹಿಮಾದ್ರಿ ಸಿಂಗ್, ಮಧ್ಯಪ್ರದೇಶದ ಭವಿಷ್ಯದ ನಾಯಕಿ ಎಂದೇ ಬಿಂಬಿತವಾಗಿದ್ದಾರೆ. ಬುಡಕಟ್ಟು ಪ್ರದೇಶದ ಜನರ ನಡುವೆ ಅವರಿಗಿರುವ ಬೆಂಬಲವೇ ಅದನ್ನು ಸಾರಿ ಹೇಳುತ್ತದೆ. ಸದ್ಯದಲ್ಲೇ ‘ಬಿಜೆಪಿ ಸೊಸೆ’ ಆಗಲಿರುವ ಹಿಮಾದ್ರಿ ಸಿಂಗ್, ದೀರ್ಘ ಕಾಲದ ಕಾಂಗ್ರೆಸ್ಸಿನ ಸಂಸದರಾಗಿದ್ದ ದಲ್ಜಿತ್ ಸಿಂಗ್ ಮತ್ತು ನಂದಿನಿ ರಾಜೇಶ್ ಸಿಂಗ್’ರವರ ಪುತ್ರಿಯಾಗಿದ್ದಾರೆ. 2016ರ ಶಾದೋಲ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಮಾದ್ರಿ ಸಿಂಗ್, ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದರು. ಗ್ಯಾನ್ ಸಿಂಗರೆದುರು ಹಿಮಾದ್ರಿ ಸಿಂಗ್ ಸೋಲೊಪ್ಪಿದ್ದರೂ, 2014ರ ಲೋಕಸಭಾ ಚುನಾವಣೆಗಿಂತ 2016 ರಲ್ಲಿ ಗಳಿಸಿದ ಮತಗಳಲ್ಲಿ ಏರಿಕೆಯಾಗಿತ್ತೆನ್ನುವುದು ಗಮನಾರ್ಹವಾಗಿತ್ತು. 2014 ರಲ್ಲಿ ಕಾಂಗ್ರೆಸ್ 2.41 ಲಕ್ಷ ಮತಗಳ ಅಂತರದಿಂದ ಸೋಲೊಪ್ಪಿದ್ದರೆ, 2016 ರಲ್ಲಿ ಹಿಮಾದ್ರಿ ಅದನ್ನು 59000 ಮತಗಳಿಗೆ ಇಳಿಸಿದ್ದರು.
ಹಿಮಾದ್ರಿಯನ್ನು ಮದುವೆಯಾಗಲಿರುವ ಮರಾವಿ, ಮಧ್ಯಪ್ರದೇಶದ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷರಾಗಿದ್ದಾರೆ. ಈ ಜೋಡಿ ಜೂನ್ 8ರಂದು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನವಂಬರ್ 23 ರಂದು ಮದುವೆ ಮಾಡಿಕೊಳ್ಳಲಿದ್ದಾರೆ. 28 ವರ್ಷದ ಹಿಮಾದ್ರಿ ದೆಹಲಿ ವಿವಿಯಲ್ಲಿ ಸ್ನಾತ್ತಕೋತ್ತರ ಪದವಿ ಪೂರ್ತಿಗೊಳಿಸಿದ್ದು, 39 ವರ್ಷದ ಮರಾವಿ ಮೆಕಾನಿಕಲ್ ಇಂಜಿನಿಯರ್ ಆಗಿದ್ದಾರೆ. ಅವರು ಅನುಪ್ಪುರ್ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿದ್ದಾರೆ.
ಇಬ್ಬರ ರಾಜಕೀಯ ಜೀವನದ ಬಗ್ಗೆ ಕೇಳಿದಾಗ ಮರಾವಿ, ನಾನು ಜೀವನ ಪರ್ಯಂತ ಬಾಜಪಾದ ಕಾರ್ಯಕರ್ತನಾಗಿ ಇರಬಯಸುತ್ತೇನೆ ಎಂದರು. ತಾವು ಪಕ್ಷ ಬದಲಿಸುತ್ತೀರಾ ಎಂದು ಹಿಮಾದ್ರಿಗೆ ಪ್ರಶ್ನಿಸಿದರೆ, ದಯವಿಟ್ಟು ಆ ದೃಷ್ಟಿಯಲ್ಲಿ ವಿಮರ್ಶಿಸಬೇಡಿ, ಎಲ್ಲಾ ಹುಡುಗಿಯರು ಮದುವೆಯಾಗುವಂತೆ ನಾನೂ ಮದುವೆಯಾಗುತ್ತಿದ್ದೇನೆ. ಇದೊಂದು ಕುಟುಂಬ ತೀರ್ಮಾನಿತ ಮದುವೆಯಾಗಿದ್ದು, ನನ್ನ ಬಾಲ್ಯ ಕಾಲದಿಂದಲೂ ಪೋಷಕರು ಕಾಂಗ್ರೆಸ್ಸಿನಲ್ಲಿದ್ದರು, ನಾನೂ ಅದನ್ನೇ ನೋಡಿ ಬೆಳೆದವಳು. ಪಕ್ಷದ ಹೈಕಮಾಂಡ್ ನೀಡುವ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದೇ ನನ್ನ ಕೆಲಸ. ರಾಜಕೀಯ ಜೀವನದಲ್ಲಿ ಕುಟುಂಬ ಅಡ್ಡ ಬರುವುದಿಲ್ಲ. ಹೀಗಿರುವಾಗ ಪಕ್ಷನಿಷ್ಟೆ ಬದಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲವೆಂದು ಹಿಮಾದ್ರಿ ಉತ್ತರಿಸುತ್ತಾರೆ. ಮರಾವಿಯರಲ್ಲಿ ಈ ಕುರಿತು ಕೇಳಿದರೆ, ಹಿಮಾದ್ರಿಯವರು ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರಾಗಿದ್ದಾರೆ, ಅದರಲ್ಲಿ ನಾನು ಮಧ್ಯ ಪ್ರವೇಶಿಸುವುದಿಲ್ಲವೆಂದು ಹೇಳಿದ್ದಾರೆ. ಒಟ್ಟಿನಲ್ಲಿ ಮುಂದಿನ ಲೋಕಸಭಾ ಚುನಾವಣೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬಹುದೋ ಏನೋ?
