ವರದಿಗಾರ-ಲಕ್ನೋ: ಹಲವು ಭರವಸೆಗಳೊಂದಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರಿದ ಯೋಗಿ ಅದಿತ್ಯನಾಥ್ ನೇತೃತ್ವದ ಸರಕಾರವು ವಿವಾದಗಳ ಮೂಲಕವೇ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ರೈತರಿಗೆ 19 ಪೈಸೆಯಿಂದ -ನೂರು ರೂಪಾಯಿ ವರೆಗಿನ ಸಾಲ ಮನ್ನಾ ಮಾಡಿ ಸಾಲ ಮನ್ನಾ ಯೋಜನೆಯ ಫಲಾನುಭವಿಗಳ ಸಂಖ್ಯೆ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪಗಳು ಹೊರಬಂದಿತ್ತು.
ಇದೀಗ ಉತ್ತರ ಪ್ರದೇಶದಲ್ಲಿ ರೈತನಿಗೆ 1 ಪೈಸೆಯ ಸಾಲಮನ್ನಾ ಮಾಡಲಾಗಿದೆ ಎಂದು ನೀಡಿದ ಪ್ರಮಾಣಪತ್ರದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪ್ರಮಾಣ ಪತ್ರವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಭಾವಚಿತ್ರಗಳನ್ನೂ ಹೊಂದಿದೆ.
ಈ ಪ್ರಮಾಣ ಪತ್ರದ ಚಿತ್ರವನ್ನು ಅಲ್ಲಿನ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಹಿತ ಹಲವು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ರೈತನಿಗೆ ನಗಣ್ಯ ಮೊತ್ತದ ಸಾಲಮನ್ನಾ ಮಾಡಿ ವೇದಿಕೆಗೆ ಕರೆಸಿ ಪ್ರಮಾಣ ಪತ್ರ ನೀಡಿರುವುದು ಈಗಾಗಲೇ ಸಾಲದ ಹೊರೆಯಲ್ಲಿ ಕೊರಗುತ್ತಿರುವ ರೈತನ ಅವಮಾನವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನ್ನಾ ಮಾಡಲಾದ ಸಾಲದ ಮೊತ್ತಕ್ಕಿಂತ ಹೆಚ್ಚು ಪ್ರಮಾಣ ಪತ್ರಕ್ಕೆ ಖರ್ಚಾಗಿರಬಹುದು ಎಂದು ಕೆಲವರು ವ್ಯಂಗವಾಡಿದ್ದಾರೆ.
