ವರದಿಗಾರ ಅಲಿಘಡ : ಅಜ್ಞಾತ ವ್ಯಕ್ತಿಗಳಿಬ್ಬರು ಅಲಿಘಡ ಚಾಚಾ ನೆಹರೂ ಮದ್ರಸಾದ ನೀರಿನ ಸಂಗ್ರಹಣಾ ಟ್ಯಾಂಕಿಗೆ ಇಲಿ ಪಾಷಾಣ ಹಾಕಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಈ ಮದ್ರಸಾದಲ್ಲಿ ಸುಮಾರು 4000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಂದು ತಿಳಿದು ಬಂದಿದೆ. ಈ ಸಂಸ್ಥೆಯು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಪತ್ನಿ ಸಲ್ಮಾ ಅನ್ಸಾರಿಯವರ ‘ಅಲ್ ನೂರ್ ಚಾರಿಟೇಬಲ್ ಟ್ರಸ್ಟ್’ನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಕೃತ್ಯದ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ಸಲ್ಮಾ, ಇದೊಂದು ‘ಭೀಬತ್ಸಕ’ ಘಟನೆ ಎಂದಿದ್ದಾರೆ. 18 ವರ್ಷಗಳಿಂದ ಅಲ್ ನೂರ್ ಟ್ರಸ್ಟಿನ ವತಿಯಿಂದ ಈ ಮದ್ರಸಾ ನಡೆಸಲ್ಪಡುತ್ತಿತ್ತು. ಮದ್ರಸಾ ಮೇಲ್ವಿಚಾರಕರು ನೀಡಿದ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 328 (ವಿಷದ ಮೂಲಕ ಹಾನಿಯನ್ನು ಉಂಟು ಮಾಡಿದ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಇಬ್ಬರು ಅಜ್ಞಾತ ವ್ಯಕ್ತಿಗಳ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಘಟನೆಯ ನಂತರ ಮದ್ರಾಸಾ ಆವರಣದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಸಲ್ಮಾ ಹೇಳಿದ್ದಾರೆ.
ಅಲಿಘಡ ಹಿರಿಯ ಪೊಲೀಸ್ ಅಧೀಕ್ಷಕ ರಾಜೇಶ್ ಪಾಂಡೆಯ ಪ್ರಕಾರ, “ಅದೃಷ್ಟವಶಾತ್ ಅಫ್ಝಲ್ ಎನ್ನುವ ವಿದ್ಯಾರ್ಥಿ ಇಬ್ಬರು ಆಗಂತುಕರು ಮದ್ರಸಾದ ನೀರಿನ ಟ್ಯಾಂಕಿಗೆ ಏನನ್ನೋ ಕಲಸುತ್ತಿರುವುದನ್ನು ನೋಡಿ ವಿಚಾರಿಸಿದ್ದಾನೆ. ಆಗ ಅಲ್ಲಿದ್ದ ಇನ್ನೊಬ್ಬ ತನ್ನಲ್ಲಿದ್ದ ನಾಡ ಪಿಸ್ತೂಲಿನ ಮೂಲಕ ಸುಮ್ಮನಿರುವಂತೆ ಬೆದರಿಸಿದ್ದಾನೆ. ದೂರು ಬಂದ ನಂತರ ಘಟನಾ ಸ್ಥಳಕ್ಕೆ ತೆರಳಿ ನಾವು ಅಲ್ಲಿನ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ” ಎಂದರು.
ಆದರೆ ದುಷ್ಕರ್ಮಿಗಳು ಅಲ್ಲಿಂದ ತೆರಳಿದ ಕೂಡಲೇ ಅಲ್ಲಿಯೇ ಬಿದ್ದಿದ್ದ ಇಲಿ ಪಾಷಾಣದ ಪೊಟ್ಟಣವನ್ನು ವಿದ್ಯಾರ್ಥಿ, ವಾರ್ಡನ್ ಜುನೈದ್ ಸಿದ್ದಿಕಿಯವರಿಗೆ ತಲುಪಿಸಿದ್ದಾನೆ. ವಿಷಯದ ಗಂಭೀರತೆ ಅರಿತ ಜುನೈದ್ ಆ ಕೂಡಲೇ ವ್ಯಾಪ್ತಿಯ ಎಲ್ಲಾ ನೀರಿನ ಹೊರ ಹರಿವನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಇತರೆ ಟ್ಯಾಂಕುಗಳನ್ನು ಬಳಸುವಂತೆ ನಿರ್ದೇಶಿಸಲಾಯಿತು.
ಅಲಿಘಡದ ಜೆ ಎನ್ ವೈದ್ಯಕೀಯ ಕಾಲೇಜಿನ ಮುಖ್ಯಾಧಿಕಾರಿ ಡಾ. ಇಹ್ತಿಶಾಂ ಅಹ್ಮದ್’ರವರ ಪ್ರಕಾರ, ಇಲಿ ಪಾಷಾಣ ಮಕ್ಕಳ ಪ್ರಾಣಕ್ಕೆ ಎರವಾಗುವಷ್ಟು ಮಾರಕವಲ್ಲದಿದ್ದರೂ, ಕೆಲವೊಂದು ವೇಳೆ ರಕ್ತ ಹೆಪ್ಪುಗಟ್ಟುವ ರಾಸಾಯನಿಕವನ್ನು ಅದರೊಂದಿಗೆ ಸೇರಿಸಿದ್ದರೆ ಖಂಡಿತವಾಗಿಯೂ ಅದು ವಿಷಯುಕ್ತವಾಗುತ್ತದೆ. ಇಲಿ ಪಾಷಾಣ ಮಕ್ಕಳನ್ನು ಅಸ್ವಸ್ಥಗೊಳಿಸುವುದರಲ್ಲಿ ಸಂಶಯವಿರಲಿಲ್ಲ ಎಂದಿದ್ದಾರೆ. ಅದೂ ನೀರಿಗೆ ಸೇರಿಸಿರುವ ಇಲಿ ಪಾಷಾಣ ಪ್ರಮಾಣದ ಮೇಲೆ ನಿರ್ಧರಿತವಾಗುತ್ತದೆಯೆಂದು ಇಹ್ತಿಶಾಂ ತಿಳಿಸಿದ್ದಾರೆ.
ಒಟ್ಟಿನಲ್ಲಿ ವಿದ್ಯಾರ್ಥಿಗಳ ಸಮಯಪ್ರಜ್ಞೆಯಿಂದಾಗಿ ಬೃಹತ್ ದುರಂತವೊಂದು ತಪ್ಪಿ ಹೋದಂತಾಗಿದೆ. ಮಕ್ಕಳನ್ನೇ ಗುರಿಯಾಗಿರಿಸಿ ನಡೆಸಿದ ಈ ದಾಳಿಯ ಹಿಂದಿರುವ ದುಷ್ಕರ್ಮಿಗಳನ್ನು ಪೊಲೀಸರು ಆದಷ್ಟು ಬೇಗನೇ ಕಾನೂನು ಕ್ರಮಕ್ಕೆ ಒಳಪಡಿಸಬೇಕಾಗಿದೆ.
