ವರದಿಗಾರ ವಿಶೇಷ : ಮೊನ್ನೆ ತಾನೇ ಕಾರು-ಬೈಕುಗಳನ್ನು ಹೊಂದಿರುವವರು ಯಾರೂ ಬಡವರಲ್ಲ, ಕಾರುಗಳನ್ನು ಖರೀದಿಸುವಷ್ಟು ಸ್ಥಿತಿವಂತರಾದವರಿಗೆ ಅದರ ಪೆಟ್ರೋಲ್ ಬೆಲೆ ಹೊರೆಯಾಗಲಿಕ್ಕಿಲ್ಲವೆಂದು ಹೇಳಿಕೆ ಕೊಟ್ಟಿದ್ದ ಕೇರಳ ಮೂಲದ ಕೇಂದ್ರ ಪ್ರವಾಸೋದ್ಯಮ ರಾಜ್ಯ ಮಂತ್ರಿ ಅಲ್ಫೋನ್ಸ್ ಕಣ್ಣಂತಾನಂ, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದ ವೇಳೆ ಅದನ್ನು ಪ್ರತಿಭಟಿಸಿ, “ನಾನು ಮತ್ತು ನನ್ನ ಮಗ ಇನ್ನು ಮುಂದೆ ಸೈಕಲ್ ಖರೀದಿಸಿ ಓಡಾಡುತ್ತೇವೆ” ಎಂದು ತನ್ನ ಐಶಾರಾಮಿ ಬೆಂಝ್ ಕಾರಿನ ಮುಂದೆ ನಿಂತು ಹೇಳಿದ್ದ ವೀಡಿಯೋ ಒಂದು ಸಾಮಾಜಿಕ ತಾಣ ಟ್ವಿಟ್ಟರ್’ನಲ್ಲಿ ಓಡಾಡುತ್ತಿದೆ.
ಐ ಎ ಎಸ್ ಅಧಿಕಾರಿಯಾಗಿದ್ದಾಗಲೇ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಅಖಾಡಕ್ಕೆ ಧುಮುಕಿದ್ದ ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಅಲ್ಫೋನ್ಸ್ ಕಣ್ಣಂತಾನಂ, ಸಚಿವರಾಗಿ ಅಧಿಕಾರ ವಹಿಸಿದಂದಿನಿಂದ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಅವರು ಒರಿಸ್ಸಾದ ಕಾರ್ಯಕ್ರಮವೊಂದರ ವೇಳೆ, ಭಾರತಕ್ಕೆ ಭೇಟಿ ಕೊಡುವ ವಿದೇಶಿಯರು ಅವರವರ ರಾಷ್ಟ್ರಗಳಲ್ಲೇ ಗೋ ಮಾಂಸ ತಿಂದು ಬರಬೇಕೆಂಬ ಹೇಳಿಕೆ ಕೊಟ್ಟು ವಿವಾದಕ್ಕೀಡಾಗಿದ್ದರು. ದೇಶದಲ್ಲಿ ದಿನೇ ದಿನೇ ತುಟ್ಟಿಯಾಗುತ್ತಿರುವ ತೈಲ ಬೆಲೆಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟು ಸುದ್ದಿಯಾಗಿದ್ದಾರೆ.
ಈಗ ವೈರಲ್ ಆಗಿರುವ ಹಳೆಯ ವೀಡಿಯೋದಲ್ಲಿ ಅಲ್ಫೋನ್ಸ್ ತನ್ನ ಐಶಾರಾಮಿ ಬೆಂಝ್ ಕಾರಿನ ಮುಂದೆ ನಿಂತು ಏರುತ್ತಿರುವ ಪೆಟ್ರೋಲ್ ಬೆಲೆಯ ಕುರಿತು ಧ್ವನಿ ಎತ್ತಿದ್ದರು. ಬೆಂಝ್ ಕಾರಿನ ಒಡೆಯನಾಗಿದ್ದರೂ ಅಲ್ಫೋನ್ಸ್’ಗೆ ಅಂದು ಬೆಲೆಯೇರಿಕೆಯ ಬಿಸಿ ತಟ್ಟಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಕೇಂದ್ರ ಸಚಿವರ ಹೇಳಿಕೆಗಳೂ ಬದಲಾಗಿವೆ ಎಂದು ಟ್ವಿಟ್ಟರಿಗರು ಕಿಡಿ ಕಾರಿದ್ದಾರೆ.
ವೈರಲ್ ಆಗಿರುವ ಅಲ್ಫೋನ್ಸ್’ರವರ ವೀಡಿಯೋ
