ವರದಿಗಾರ-ಬೆಂಗಳೂರು: ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಬಹಿರಂಗ ಚರ್ಚೆಗೆ ನಾವು ಸಿದ್ಧ, ವೇದಿಕೆ ಸಿದ್ಧಪಡಿಸಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಪಿ.ಮುರುಳೀಧರರಾವ್ ಇತ್ತೀಚೆಗೆ ಹಾಕಿದ್ದ ಸವಾಲನ್ನು ಸ್ವೀಕರಿಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮಾತನಾಡುತ್ತಾ, ರಾಜ್ಯ ಸರಕಾರದ ಮೇಲಿನ ಭ್ರಷ್ಟಾಚಾರ ಆರೋಪಗಳ ಕುರಿತು ಚರ್ಚೆಗೆ ನಾವೂ ಸಿದ್ಧ, ಸ್ಥಳ ಮತ್ತು ಸಮಯ ನೀವೇ ನಿಗದಿಪಡಿಸಿ ಎಂದು ಬಿಜೆಪಿಗೆ ಪ್ರತಿ ಸವಾಲು ಹಾಕಿದ್ದಾರೆ.
ಅವರು ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾತಾಡುವುದಕ್ಕೆ ಬಿಜೆಪಿ ನಾಯಕರಿಗೆ ನೈತಿಕ ಹಕ್ಕಿಲ್ಲ. ಅವರೇ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ. ಈ ಹಂತದಲ್ಲಿ ಸರಕಾರದ ವಿರುದ್ಧ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಗೌರಿ ಲಂಕೇಶ್ ಅಂತ್ಯಸಂಸ್ಕಾರ ನಡೆದಾಗ ಬಿಜೆಪಿ ನಾಯಕರು ಅತ್ತ ಸುಳಿಯಲಿಲ್ಲ. ಆ ಬಗ್ಗೆ ಮಾಧ್ಯಮಗಳೂ ತುಟಿ ಬಿಚ್ಚಲಿಲ್ಲ ಎಂದು ಮಾಧ್ಯಮಗಳ ದ್ವಿಮುಖ ಧೋರಣೆಯನ್ನು ಖಂಡಿಸಿದ್ದಾರೆ.
