ನಿರ್ಲಕ್ಷ್ಯಕ್ಕೊಳಗಾದ ರೈತರಿಂದ ವಿಶಿಷ್ಟ ಪ್ರತಿಭಟನೆ
68ನೇ ಜನ್ಮ ದಿನಾಚರಣೆಯ ಸಂಭ್ರಮದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ 68ಪೈಸೆಯ ಚೆಕ್ ಗಳನ್ನು ಕಳುಹಿಸಿದ ಆಂಧ್ರಪ್ರದೇಶದ ರೈತರು ಪ್ರಧಾನಿಯವರನ್ನು ತೀವ್ರ ಮುಜುಗರಕ್ಕೀಡಾಗಿಸಿದ್ದಾರೆ.
ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17ರಂದೇ ಆಂಧ್ರಪ್ರದೇಶದ ರಾಯಲ್ಸೀಮಾ ಪ್ರದೇಶದಿಂದ ನೂರಾರು ರೈತರು ಅವರಿಗೆ 68ಪೈಸೆಯ ಚೆಕ್ ಕಳುಹಿಸಿದ್ದಾರೆ.
ಪ್ರಧಾನ ಮಂತ್ರಿಯವರ ಜನ್ಮದಿನಕ್ಕೆ ಉಡುಗೊರೆಯಾಗಿ ಇಷ್ಟು ಮಾತ್ರ ಕೊಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ರಾಯಲ್ಸೀಮಾ ಸಗುನೀತಿ ಸದನ ಸಮಿತಿಯ ಸದಸ್ಯರೊಬ್ಬರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಕುರ್ನೂಲ್ ಜಿಲ್ಲೆಯೊಂದರಲ್ಲೇ ನಾವು 400 ಚೆಕ್ ಗಳನ್ನು ಸಂಗ್ರಹಿಸಿದ್ದೇವೆ, ರಾಯಲ್ಸೀಮಾ ಪ್ರದೇಶದ ನಾಲ್ಕು ಜಿಲ್ಲೆಗಳಿಂದ ಚೆಕ್ ಗಳನ್ನು ಪ್ರಧಾನಿಗೆ ಕಳುಹಿಸಲಾಗುತ್ತಿದೆ ಎಂದಿದ್ದಾರೆ.
ಎರಡು ನದಿಗಳು ಹರಿಯುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ಲಕ್ಷ್ಯದಿಂದ ರಾಯಲ್ಸೀಮಾ ಪ್ರದೇಶವು ಮರುಭೂಮಿಯಾಗಿ ಮಾರ್ಪಡುತ್ತಿದೆ ಎನ್ನುವುದು ಇಲ್ಲಿನ ಆಕ್ರೋಶಿತ ರೈತರ ನೋವಿನ ಮಾತು.
ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವವರು ಚುನಾವಣೆಯ ಸಂದರ್ಭದಲ್ಲಿ ರಾಯಲ್ಸೀಮಾ ಪ್ರದೇಶಕ್ಕೆ ಹಲವು ನೀರಾವರಿ ಯೋಜನೆಗಳ ಭರವಸೆಯನ್ನು ನೀಡಿದ್ದರೂ, ಅದರಲ್ಲಿ ಯಾವುದೇ ಭರವಸೆಗಳನ್ನು ಈಡೇರಿಸಲಾಗಿಲ್ಲ ಎನ್ನುವುದು ಇಲ್ಲಿನ ರೈತರ ಗಂಭೀರ ಆರೋಪ.
