ವರದಿಗಾರ- ರಾಮನಗರ: ಜೆಡಿಎಸ್ ನಲ್ಲಿ ಯಾವ ನಾಯಕರ ಬೆಳವಣಿಗೆಯನ್ನು ವರಿಷ್ಠರು ಸಹಿಸುವುದಿಲ್ಲ. ಹೀಗಾಗಿಯೇ ಅವರಿಂದ ಎಲ್ಲರೂ ದೂರವಾಗಿದ್ದೇವೆ. ಜಿಲ್ಲೆಯಲ್ಲಿ ಜೆಡಿಎಸ್ ದುರ್ಬಲಗೊಳ್ಳಲು ಅವರ ನಡವಳಿಕೆಗಳೇ ಕಾರಣ. ಯಾವ ಕಾರ್ಯಕರ್ತರ ಕಷ್ಟವನ್ನೂ ಅವರು ಕೇಳಲಿಲ್ಲ. ಚುಣಾವಣೆಗಳಲ್ಲಿ ಬಂದು ಕೆಲಸ ಮಾಡಲಿಲ್ಲ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೂಟಗಲ್ ಹೋಬಳಿಯಲ್ಲಿ ಶನಿವಾರ ಪತ್ರಕರ್ತರ ಜೊತೆ ಅವರು ಮಾತನಾಡುತ್ತಾ ಅವರು ಈ ವಿಷಯವನ್ನು ತಿಳಿಸಿದರು.
ರಾಜಕೀಯವಾಗಿ ನನ್ನನ್ನು ಮುಗಿಸುವ ದುರುದ್ದೇಶದಿಂದ ದೇವೇಗೌಡರು ಪಂಚಾಯಿತಿ ಮಟ್ಟದ ರಾಜಕಾರಣಕ್ಕೆ ಇಳಿದಿದ್ದು, ಇದು ಅವರಿಗೆ ಶೋಭೆ ತರುವ ಕೆಲಸವಲ್ಲ. ಅವರನ್ನು ನಾವು ಈಗಲೂ ನರೇಂದ್ರ ಮೋದಿ, ಸೋನಿಯಾ ಗಾಂಧಿ ಮಟ್ಟದಲ್ಲಿಯೇ ನೋಡುತ್ತೇವೆ. ಆದರೆ ನಮ್ಮ ಮಟ್ಟಕ್ಕೆ ಇಳಿದು ರಾಜಕಾರಣ ಮಾಡುವುದು ತರವಲ್ಲ. ದೇವೇಗೌಡರು ಏನಿದ್ದರೂ ತಮ್ಮ ಸರಿಸಮನಾದವರ ಎದುರು ತೊಡೆ ತಟ್ಟಿ ನಿಲ್ಲಬೇಕು ಎಂದು ಕಿವಿಮಾತು ನೀಡಿದ್ದಾರೆ.
ತಮಗೆ ರಾಜಕೀಯವಾಗಿ ಪುರ್ನಜನ್ಮ ನೀಡಿದ ರಾಮನಗರ ಜಿಲ್ಲೆಗಿಂತ ದೇವೇಗೌಡರಿಗೆ ಹಾಸನದ ಮೇಲೆಯೇ ಹೆಚ್ಚು ವ್ಯಾಮೋಹ, ಹೀಗಾಗಿ ಎಲ್ಲ ಯೋಜನೆಗಳನ್ನು ಅವರು ತಮ್ಮ ತವರು ಜಿಲ್ಲೆಗೆ ಕೊಂಡೊಯ್ಯುತ್ತಾರೆ. ಯಾವತ್ತೂ ಇಲ್ಲಿನ ಅಭಿವೃದ್ಧಿ
ಗಾಗಿ ಹೋರಾಟ ಮಾಡಿಲ್ಲ. ದೇವೇಗೌಡರು ಮತ್ತವರ ಕುಟುಂಬದವರು ರಾಮನಗರವನ್ನು ಕೇವಲ ರಾಜಕೀಯ ಉದ್ದೇಶಕ್ಕೆ ಸೀಮಿತ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
