ವರದಿಗಾರ ಚಾಮರಾಜನಗರ : ಸೆಪ್ಟಂಬರ್ 15 ರ ಮಧ್ಯರಾತ್ರಿ ಚಾಮರಾಜನಗರದ ಗಾಳಿಪುರ ಬಡಾವಣೆಯಲ್ಲಿರುವ ವಿನಾಯಕ ದೇವಸ್ಥಾನದ ಮೇಲಿದ್ದ ಭಗವಾಧ್ವಜಕ್ಕೆ ಬೆಂಕಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ಬಡಾವಣೆಯ ಯುವಕರಾದ ಬಂಗಾರು, ಪ್ರಕಾಶ ಮತ್ತು ಮಂಜುನಾಥ ಎಂಬವರಾಗಿದ್ದಾರೆ ಆರೋಪಿಗಳು. ಆರೋಪಿಗಳ ಪೈಕಿ ಮಂಜುನಾಥ ಹಿಂದೆ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದವನೆಂದು ತಿಳಿದು ಬಂದಿದೆ.
ಘಟನೆ ನಡೆದ ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಹಿಂದೂಪರ ಸಂಘಟನೆಗಳು ಪ್ರತಿಭಟನೆ ಕೂಡಾ ನಡೆಸಿದ್ದರು. ತಮ್ಮ ಪ್ರತಿಭಟನೆಯಲ್ಲಿ ಮುಸ್ಲಿಂ ಸಂಘಟನೆಗಳ ಮೇಲೆ ಆರೋಪ ಹೊರಿಸಿದ್ದ ಆಝಾದ್ ಹಿಂದೂ ಸೇನೆಯ ಜಿಲ್ಲಾಧ್ಯಕ್ಷ ಪ್ರಥ್ವೀರಾಜ್, ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸದಿದ್ದರೆ ನಾವೇ ಬೀದಿಗಿಳಿದು ಸಂಘರ್ಷ ನಡೆಸುತ್ತೇವೆಂದು ಬೆದರಿಕೆ ಹಾಕಿದ್ದ. ಆದರೆ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ ಎಸ್ಪಿ ಧರ್ಮೇಂದ್ರ ಕುಮಾರ್ , ಹೆಚ್ಚುವರಿ ಎಸ್ಪಿ ಗೀತಾ ಮತ್ತು ಡಿವೈಎಸ್ಪಿ ಗಂಗಾಧರ್ ಸ್ವಾಮಿ, ವಿಚಾರಣೆಗಾಗಿ ಫರ್ಹಾತ್ ಎನ್ನುವ ಓರ್ವ ಯುವಕನನ್ನೂ ಸೇರಿದಂತೆ ಹಲವು ಮಂದಿಯನ್ನು ತನಿಖೆಗೊಳಪಡಿಸಿದ್ದರು. ಆದರೆ ಸ್ಪಷ್ಟ ಸುಳಿವನ್ನು ಆಧರಿಸಿ ಬಂಗಾರು, ಪ್ರಕಾಶ ಮತ್ತು ಮಂಜುನಾಥರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಪೊಲೀಸರ ಈ ಕ್ರಮ ಸ್ಥಳೀಯರ ಪ್ರಶಂಸೆಗೆ ಕಾರಣವಾಗಿದೆ.
ಇದರ ಹಿಂದಿರುವ ಸೂತ್ರಧಾರಿಗಳನ್ನು ಬಂಧಿಸಿ: ಚಾಮರಾಜನಗರ ಎಸ್ ಡಿ ಪಿ ಐ
ಕೇವಲ ಎರಡು ದಿನಗಳಲ್ಲಿ ದುಷ್ಕರ್ಮಿಗಳನ್ನು ಬಂಧಿಸಿರುವ ಪೊಲೀಸರು ಅಭಿನಂದನಾರ್ಹರು. ಈ ಮೂಲಕ ಜಿಲ್ಲೆಯನ್ನು ಅಶಾಂತಿಗೆ ಒಯ್ಯುವ ಕೆಲ ಸಮಾಜಘಾತುಕ ಶಕ್ತಿಗಳ ಬಣ್ಣ ಬಯಲಾಗಿದೆ. ಆದರೆ ಇದರಲ್ಲಿ ಈ ಮೂರು ಮಂದಿಯನ್ನು ಮಾತ್ರವಲ್ಲ, ಇದರ ಹಿಂದಿರುವ ಸಂಚುಕೋರರನ್ನೂ ಬಂಧಿಸಬೇಕಾಗಿದೆ. ಘಟನೆ ನಡೆದಾಕ್ಷಣ ಮುಸ್ಲಿಂ ಸಂಘಟನೆಗಳ ಮೇಲೆ ಗೂಬೆ ಕೂರಿಸುವವರು, ಅವರೇ ಹೆಣೆದ ಷಡ್ಯಂತರ ಬಯಲಾದ ತಕ್ಷಣ ಸುಮ್ಮನಿರುತ್ತಾರೆ. ಅವರನ್ನೆಲ್ಲಾ ಬಂಧಿಸಿ, ಸೂಕ್ತ ವಿಚಾರಣೆ ನಡೆಸಿದರೆ ಅವರ ಅಸಲಿ ಬಣ್ಣಗಳು ಬಯಲಾಗಬಹುದೆಂದು ಚಾಮರಾಜನಗರ SDPI ಜಿಲ್ಲಾ ಅಧ್ಯಕ್ಷ ಅಬ್ರಾರ್ ಅಹ್ಮದ್ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ಸಿನ ಭದ್ರ ಕೋಟೆಯಾಗಿದ್ದು, ಜನಮನ್ನಣೆ ಪಡೆಯಲು ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಏನೊಂದು ಕಾರ್ಯಸೂಚಿಗಳಿಲ್ಲದಾಗಿದೆ. ಹೀಗಿರುವಾಗ ಅಮಾಯಕ ಯುವಕರನ್ನು ಇಂತಹಾ ಕಾರ್ಯಗಳಿಗೆ ಕುಮ್ಮಕ್ಕು ಕೊಟ್ಟು ಜನರ ಮಧ್ಯೆ ಧ್ವೇಷ ಬಿತ್ತಿ , ಕೋಮುಗಲಭೆಗಳಿಗೆ ಕಾರಣವಾಗಿ, ಆ ಮೂಲಕ ತಮ್ಮ ರಾಜಕೀಯ ಲಾಭ ಪಡೆಯುವ ಹುನ್ನಾರ ಇದಾಗಿದೆ. ಯುವಕರು ಈ ಕುರಿತು ಎಚ್ಚರದಿಂದಿರಬೇಕಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ
ಆರೋಪಿಗಳ ಪೋಷಕರಿಂದ ಪ್ರತಿಭಟನೆ :
ಭಗವಾಧ್ವಜಕ್ಕೆ ಬೆಂಕಿ ಕೊಟ್ಟ ಆರೋಪಿಗಳ ಪೋಷಕರು, ತಮ್ಮ ಮಕ್ಕಳನ್ನು ಬಂಧಿಸುವಾಗ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ ಘಟನೆಯೂ ವರದಿಯಾಗಿದೆ.
ಹಿಂದೂ ಸಂಘಟನೆಗಳ ಪ್ರತಿಭಟನೆ ವೀಡಿಯೋ
