ವರದಿಗಾರ-ಬುಲೆಟ್
ಅಚ್ಚಾಗುವವರೆಗೆ…!!!
ಹೆಣ್ಣಲ್ಲವೆ ಗೌರೀ
ಕ್ಷಣ ಕರುಣೆಯೂ ಬಂದಿಲ್ಲವೇ?
ಪೆನ್ನು ಮಾತಾಡಿತೆಂದು
ಗನ್ನು ಎಗರಾಡಿದಾಗ
ವಾದ ವಿಚಾರಗಳು ಠುಸ್ಸಾದೀತೇ?
ಇರಿದ ನೇರಗಳು ಮುಚ್ಚಿ ಹೋದೀತೇ?
ತಪ್ಪು ಅಚ್ಚಾಗಿದೆಯೆಂದರಿತಾಗ
ತಾನು ಸರಿಯಾಗುವುದೇ ನ್ಯಾಯ,
ಜೀವ ಜಡವಾಗಿಸಿದರೇನು
ಧ್ಯೇಯ ಕೊನೆಗಾಣುವುದೇ?
ಗನ್ನು ಗುರಿಮುಟ್ಟಿದರೇನು
ಚಿಂತನೆಗೆ ಬರವಾಗುವುದೇ?
ಅಳಿಯದ ಸಾರ ಸತ್ಯ ನಿಷ್ಠೆ
ಉಳಿಯದು ಘೋರ ಭ್ರಷ್ಟ ರಕ್ಷೆ!
ಗೆದ್ದಿರುವೆಯೆಂಬ ಅಹಂ?!!!
ಕ್ಷಣಿಕ ಖುಷಿಯ ಕುಣಿಕೆಯಿದು ನಿನಗೆ
ಗೊಡ್ಡು ತಲೆಮರೆಸಿದ
ಒಳ ಸಂಚು ಬೆದರಿಕೆಯಲೇನುಂಟು!
ಬರಹ ಬಡವಾಗಬೇಕೇ?
ಪದ ಪದಗಳಿಗೊಂದು ಗುಂಡು
ಒಟ್ಟಾಗಿಸಿಟ್ಟುಬಿಡು!
ಭಿನ್ನ ಭಿನ್ನ ಚಿಂತೆಗಳಿಗೊಂದು
ಗುಂಪು ಹಿಂಬಾಲಿಸಿಕೊಡು,
ಭತ್ಯೆ ನೀಡುವೆಯಲ್ಲ;ಹಿಂಬಾಲಿಸಲಿ ಬಿಡು
ನಿನ್ನ ಹಿಂಬಾಲಕರು ನಿನ್ನೆದೆಗೆ
ಗುರಿಯಿಟ್ಟ ಗೆರೆ ಅಚ್ಚಾಗುವವರೆಗೆ!
-ಅನ್ಸಾರ್ ಕಾಟಿಪಳ್ಳ
