ಸಮಾಧಾನ ಬಯಸಿದಾಗ
ಸಂಧಾನ ಮೆರವಣಿಗೆ
ಐದೈದು ವರುಷದಿ ಬಂತು,
ಸಾವಧಾನ,ಸಾವಧಾನವೆನುತ
ಪುಸಲಾಯಿಸುತಲೇ ಇತ್ತು
ಸಮಯವೆಲ್ಲಿದೆ ಸಾವಧಾನಕೆ…?
ಕಳೆದು ಹೋಗಿದೆ
ವರುಷ ಎಪ್ಪತ್ತು…!!!
ಊರ ಕೇರಿಗಳು ಕಾಯುತಿವೆ,
ಗಬ್ಬು ನಾಥವು ಮೇಳೈಸುತಿದೆ,
ಶೇಕಡವಾರು ಲೆಕ್ಕದಲಿ
ಶೌಚಾಲಯಗಳೂ ಕಳೆಗುಂದಿದೆ…
ಫಲವತ್ತಾದ ಭೂಮಿಯಲಿ
ಫಸಲಿನಂತೆ ಕಬ್ಬಿಣ,ಸಿಮೆಂಟುಗಳು
ಬೆಳೆದಿವೆ…!!
ಉಣ್ಣಲೆಲ್ಲಿವೆ ರೈತನ ಫಸಲು…?
ಬೇಲಿ ಹಾಕಿದೆ ಬೆಳೆದವರ ಕೈಗಳು…!
ಕಾರು, ‘ಬಾರು’ಗಳು ಏರುತಿವೆ,
ಕಪ್ಪು ಕಪ್ಪಗಳೇ ಮುಂದುವರಿದಿದೆ,
ಸಾರು, ಸೇರಿಗೂ,
ಸೂರು, ಊರಿಗೂ
ನಾಮ ಮೂರಷ್ಟೇ ಸೇರಿದೆ…!
ಮಧ್ಯೆ ಐದೈದು ವರುಷಕೂ
ಸಂಧಾನ ಮುಂದುವರಿದಿದೆ,
ಸಮಾಧಾನ ಕಳೆಗುಂದಿದೆ…!
ಕೇಸರಿ ಬಿಳಿ ಹಸಿರು
ಬಿಳಿಯರ ಜೊತೆ ಸೆಟೆದ
ಸಮಾಧಾನಕ್ಕಾದ ಹೋರಾಟ
ಇದೀಗ ಹುಡುಕಿದರೂ ಸಿಗದು
ವಿಜಯ ಫಲಕ ಕಳವಾದವೇ ಇಲ್ಲಿ?
ತುಸು ಬಿಡಿಸಿ ಹೇಳಬಹುದೇ…?
ಮಧ್ಯೆ ಐದೈದು ವರುಷಕೂ
ಸಂಧಾನ ಮುಂದುವರಿದಿದೆ…!
ಬದಲಾದವು ಜಾತ್ಯಾತೀತ ಹೋರಾಟ
ಬಲವಾಗಿದೆ ಜಾತೀಯತೆಯ ಮೇಳಾಟ!
ಅಲ್ಲಿ ಪುಟ್ಟ ಕಂದಮ್ಮಗಳ ಕೂಗಾಟ,
ಇಲ್ಲಿ ಸದ್ದು ಅಡಗಿಸುವ ಹುಚ್ಚಾಟ!
ಗುದ್ದಿ ಮುದ್ದಿಸುವ ಪರಿಪಾಠದಲಿ
ಇದ್ದವರದೇ ಬರೋಬ್ಬರಿ ಹಾರಾಟ,
ಇಲ್ಲದವರದು ಸಮಾಧಾನಕಷ್ಟೇ ಚೀರಾಟ…!
ಐದೈದು ವರುಷಕೂ
ಸಂಧಾನ ಮುಂದುವರಿದಿದೆ…!
ಜೋಪಡಿಗಳು ಇನ್ನಷ್ಟು ಏರಿದೆ,
ಬಹುಮಹಡಿಗಳು ಮತ್ತಷ್ಟು ಮೇಲಿದೆ,
ಹೊಡೆಬಡಿಗಳ ಘೋರ ಮುಂದುವರಿದಿದೆ,
ಅಮಾಯಕರಿಲ್ಲಿ ಅಪರಾಧಿಗಳು!
ಎದ್ದು ನಿಂತವರು ಕಂಬಿಯಾಳುಗಳು…!
ಏನಿದು ನ್ಯಾಯ,
ಸಂವಿಧಾನಕೇ ಅನ್ಯಾಯ…!
ಐದೈದು ವರುಷದ
ಸಂಧಾನವೂ ದಾರಿ ತಪ್ಪುತಿದೆ
ಮತ್ತೆ ಸಂಧಾನವು ಮುಂದುವರಿದಿದೆ…
ಸಮಾಧಾನ ಬಗಳಿಗೆ ಬಯಸಿ
ರಕ್ತದೋಕುಳಿಯ ಹರಿಸಿ
ಹಾರಿದ ಬಾವುಟವ ಸ್ಮರಿಸಿ…
ಹೊದ್ದು ಮಲಗಿದರೆ ಏಳಿ
ನಿಲ್ಲಲಿ ಸದ್ದು ಗುದ್ದುವ…
ಗೊಡ್ಡು ಬೆದರಿಕೆಯ ಚಾಳಿ,
ಬಾವುಟ ಒಂದಾಗಿ ಹಾರಾಡಿ ನೆರಳಾಗಲು
ಕೇಸರಿ ಬಿಳಿ ಹಸಿರು ಮೇಳೈಸಲು
ಮತ್ತೆ ಮಗದೊಮ್ಮೆ ವಿನಂತಿಯಷ್ಟೇ,,,
ಓ ವೇದಿಕೆಯ ಮೈಕು ಸಂಧಾನವೇ
ಮತ್ತೊಮ್ಮೆ ಬಳಿಬಾರದಿರು…
ಸಮಾಧಾನ (ಸ್ವಾತಂತ್ರ್ಯ) ಬೇಕಾಗಿದೆ…!
-ಅನ್ಸಾರ್ ಕಾಟಿಪಳ್ಳ
