ವರದಿಗಾರ-ಮೈಸೂರು: ಕಂಸ, ರಾವಣ, ಕೌರವರ ಬಳಿ ಯಾರಾದರೂ ಭಿಕ್ಷೆ ಬೇಡಿದ್ದಾರಾ? ಹಾಗೆ ನಾನು ಸಹ ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಭಿಕ್ಷೆ ಬೇಡುವುದಿಲ್ಲ.
ಸಿದ್ದರಾಮಯ್ಯ ರಾಕ್ಷಸರೆಂದು ಹೇಳುವುದಿಲ್ಲ. ಆದರೆ, ಅವರಲ್ಲಿ ಪೈಶಾಚಿಕ ಪ್ರವೃತ್ತಿಯಿದೆ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಭಿಕ್ಷಾಂದೇಹಿ ಅಭಿಯಾನದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶ್ರೀರಾಮ ಶಾಲೆಗೆ ಮೈಸೂರಿನಲ್ಲಿ ಸಂಗ್ರಹಿಸಿದ 138 ಕ್ವಿಂಟಲ್ ಅಕ್ಕಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಸಿದ್ದರಾಮಯ್ಯ ಅಹಿಂದದ ಹೆಸರು ಹೇಳಿ ಮುಖ್ಯಮಂತ್ರಿಯಾದರು. ಶ್ರೀರಾಮ ಶಾಲೆಯ ಮೂರೂವರೆ ಸಾವಿರ ವಿದ್ಯಾರ್ಥಿಗಳಲ್ಲಿ ಶೇ 94ರಷ್ಟು ಮಕ್ಕಳು ಹಿಂದುಳಿದ ವರ್ಗಕ್ಕೆ ಸೇರಿದವರು. ಈ ಮಕ್ಕಳ ಅನ್ನದ ಬಟ್ಟಲಿಗೆ ಕಲ್ಲು ಹಾಕಲಾಗಿದೆ. ದುಷ್ಟರ ಕಾಲು ಹಿಡಿದು ಅನ್ನ ಬೇಡುವ ಕೆಲಸ ಮಾಡುವುದಿಲ್ಲ. ಜೋಳಿಗೆ ಹಿಡಿದು ಜನರ ಬಳಿ ಹೋಗುತ್ತೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರಭಾಕರ್ ಭಟ್ ಮಾತು ಮುಂದುವರಿಸುತ್ತಾ, ಸಿದ್ದರಾಮಯ್ಯ ನವರೇ ದಯವಿಟ್ಟು ನಮ್ಮ ಶಾಲೆಗೆ ಬನ್ನಿ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನ್ನೂ ಜೊತೆಗೆ ಸೇರಿಸಿಕೊಳ್ಳಿ . ಮಕ್ಕಳೊಂದಿಗೆ ಕುಳಿತು ಊಟ ಮಾಡಿ ಎಂದು ವ್ಯಂಗ್ಯವಾಡುವ ಮೂಲಕ ಆಹ್ವಾನ ನೀಡಿದ್ದಾರೆ.
