ವರದಿಗಾರ- ದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (JNU)ದಲ್ಲಿ ಹೀನಾಯವಾಗಿ ಸೋಲನುಭವಿಸಿದ ಸಂಘಪರಿವಾರ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಗೆ ಕೆಲವೇ ದಿನಗಳ ಅಂತರದಲ್ಲಿ ಇನ್ನೊಂದು ಆಘಾತವಾಗಿದೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಪ್ರಮುಖ ಸ್ಥಾನಗಳು ಕಾಂಗ್ರೆಸ್ ನ ವಿದ್ಯಾರ್ಥಿ ಅಂಗವಾದ ಎನ್ ಎಸ್ ಯು ಐ ಪಾಲಾಗಿವೆ.
ಅಧ್ಯಕ್ಷರಾಗಿ ಎನ್ ಎಸ್ ಯು ಐ ಅಭ್ಯರ್ಥಿ ರಾಕ್ಕಿ ತುಶೀದ್ ಚುನಾಯಿತರಾಗಿದ್ದಾರೆ.
ಉಪಾಧ್ಯಕ್ಷರಾಗಿ ಕುನಾಲ್ ಶೆರಾವತ್, ಕಾರ್ಯದರ್ಶಿಯಾಗಿ ಎಬಿವಿಪಿಯ ಮಹಾಮೇಧಾ ನಾಗರ್, ಜೊತೆ ಕಾರ್ಯದರ್ಶಿಯಾಗಿ ಎಬಿವಿಪಿಯ ಉಮಾ ಶಂಕರ್ ಆಯ್ಕೆಯಾಗಿದ್ದಾರೆ.
ಎನ್ ಎಸ್ ಯು ಐ ಐದು ವರ್ಷಗಳ ಬಳಿಕ ಮತ್ತೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದೆ. ಕಳೆದ ವಿಧ್ಯಾರ್ಥಿ ಸಂಘದಲ್ಲಿ ಎಬಿವಿಪಿ ಮೂರು ಸ್ಥಾನಗಳನ್ನು ಹೊಂದಿತ್ತು.
ಜೊತೆ ಕಾರ್ಯದರ್ಶಿಯ ಫಲಿತಾಂಶದಲ್ಲಿ ಕೈಚಳಕ ನಡೆದಿದೆ ಎಂದು ಎನ್ ಎಸ್ ಯು ಐ ಆರೋಪಿಸಿದೆ ಹಾಗೂ ಸ್ಥಾನದ ಫಲಿತಾಂಶವನ್ನು ತಡೆಯಲು ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದೆ. ಈ ಸ್ಥಾನದ ಮತ ಎಣಿಕೆಯ ಸಂದರ್ಭದಲ್ಲಿ ಕ್ಯಾಮರಾ ಆಫ್ ಮಾಡಲಾಗಿತ್ತು ಎಂಬ ಅರೋಪಗಳು ಕೇಳಿ ಬರಲು ಪ್ರಾರಂಭಿಸಿದೆ.
ಕೆಲವೇ ದಿನಗಳ ಮೊದಲು ನಡೆದ ಜೆ ಎನ್ ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡಪಂಥೀಯ ಮೈತ್ರಿಕೂಟವು ಜಯಗಳಿಸಿತ್ತು ಹಾಗೂ ಎಬಿವಿಪಿ ಹೀನಾಯ ಸೋಲನುಭವಿಸಿತ್ತು.
