ವರದಿಗಾರ ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ದಿನ ಶಂಕಿತ ವ್ಯಕ್ತಿಯೋರ್ವ ಅಲ್ಲಿಗೆ ಮೂರು ಬಾರಿ ಭೇಟಿ ನೀಡಿದ್ದನ್ನು ತನಿಖಾ ತಂಡಗಳು ಪತ್ತೆ ಹಚ್ಚಿವೆ. ಸೆಪ್ಟಂಬರ್ 5 ರಂದು ಸಂಜೆ 8.10 ರ ಸುಮಾರಿಗೆ ಗೌರಿಯವರ ಹತ್ಯೆಯಾಗಿತ್ತು. ಇದರ 30-45 ನಿಮಿಷಗಳ ಮುಂಚೆ ಗೌರಿಯವರ ಮನೆ ಮುಂದೆ ಮೋಟಾರು ಬೈಕಿನಲ್ಲಿ ಉದ್ದ ಕೈ, ಬಿಳಿ ಅಂಗಿ ತೊಟ್ಟ ವ್ಯಕ್ತಿಯೋರ್ವ ಬಂದಿದ್ದ. ಅದೇ ವ್ಯಕ್ತಿ ಮದ್ಯಾಹ್ನ 3.27 ರ ಸುಮಾರಿಗೆ ಗೌರಿಯವರ ಮನೆ ಮುಂದೆ ಬಂದು, ಗೇಟಿನಿಂದ 10 ಅಡಿ ಅಂತರದಲ್ಲಿ ತನ್ನ ಬೈಕನ್ನು ತಿರುಗಿಸಿ ಬಂದ ದಾರಿಯಲ್ಲೇ ಹಿಂತಿರುಗಿ ಹೋಗಿದ್ದ. ಆತನ ವಯಸ್ಸು 35ಕ್ಕಿಂತಲೂ ಕಡಿಮೆಯಿರಬಹುದೆಂದು ಶಂಕಿಸಲಾಗಿದೆ. ತಜ್ಞರ ಪ್ರಕಾರ ಆತ ಮೊದಲ ಬಾರಿ ಬಂದಿದ್ದು , ತಾನು ಗೌರಿಯವರನ್ನು ಗುಂಡಿಕ್ಕಲು ಬೇಕಾಗಿದ್ದ ಅಂತರವನ್ನು ಅಳೆಯಲಾಗಿತ್ತೆಂದು ಅಭಿಪ್ರಾಯಿಸಲಾಗಿದೆ.
ಆತ ಬಂದಿದ್ದ ರಸ್ತೆಯಲ್ಲಿ ಕೇವಲ ಒಂದು ಮನೆಯಲ್ಲಿ ಮಾತ್ರವೇ ಸಿಸಿಟಿವಿ ಇದೆಯೆನ್ನಲಾಗಿದೆ. ಆಗಂತುಕ ತನ್ನ ಎರಡು ಭೇಟಿಗಳಲ್ಲೂ ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿದ್ದ. ಕೈಯ್ಯಲ್ಲೇನೂ ಇರಲಿಲ್ಲವೆನ್ನಲಾಗಿದೆ. ಆದರೆ ಮೂರನೇ ಬಾರಿಗೆ ಆತ ಬಂದಾಗ ಆತ ಒಂದು ಬ್ಯಾಗ್ ಹಾಕಿಕೊಂಡಿದ್ದ. ಅಧಿಕಾರಿಗಳ ಪ್ರಕಾರ ಆ ಬ್ಯಾಗಿನಲ್ಲಿ ತಾನು ಗೌರಿಯವರ ಮೇಲೆ ದಾಳಿ ಮಾಡಲು ತಂದಿದ್ದ ಗನ್ನನ್ನು ಅದರಲ್ಲಿಟ್ಟಿದ್ದ ಎನ್ನಲಾಗಿದೆ. ತನಿಖಾಧಿಕಾರಿಗಳ ಶಂಕೆಯ ಪ್ರಕಾರ ದುಷ್ಕರ್ಮಿಯ ಮೊದಲ ಗುಂಡು ಗೌರಿಯವರ ಬೆನ್ನಿಗೆ ಹೊಕ್ಕಿದ್ದು, ಮೂರನೇ ಮತ್ತು ನಾಲ್ಕನೇ ಗುಂಡೂ ಎದೆ ಭಾಗಕ್ಕೆ ಗುರಿಯಿರಿಸಿದ್ದನೆನ್ನಲಾಗಿದೆ. ಗೌರಿಯವರು ಗೇಟ್ ತೆರೆಯುತ್ತಿದ್ದ ವೇಳೆ ಹಾರಿಸಿದ್ದ ಎರಡನೇ ಗುಂಡು ಗುರಿ ತಪ್ಪಿದ್ದು, ತನಿಖಾ ತಂಡಕ್ಕೆ ಗುಂಡು ಘಟನಾ ಸ್ಥಳದಲ್ಲಿ ಅಂದು ದೊರೆತಿರಲಿಲ್ಲ. ಇಡೀ ಸ್ಥಳವನ್ನು ಸ್ಕ್ಯಾನಿಂಗ್ ನಡೆಸಿದ ವೇಳೆ ಮರುದಿನ ಅದು ಪತ್ತೆಯಾಗಿತ್ತು.
ಗೌರಿ ಹತ್ಯೆ : ಸಿಸಿಟಿವಿ ದೃಶ್ಯದ ಅಸಲಿಯತ್ತೇನು ?
ಸಾಮಾಜಿಕ ಜಾಲ ತಾಣಗಳಲ್ಲಿ ಕಳೆದ ವಾರ ವೈರಲ್ ಆಗಿದ್ದ ಗೌರಿ ಹತ್ಯೆಯ ಸಿಸಿಟಿವಿ ದೃಶ್ಯಗಳು ಅದು ಘಟನೆಯ ಮರು ಸೃಷ್ಟಿಯ ವೀಡಿಯೋ ಆಗಿದ್ದು, ನೈಜ ಸಿಸಿಟಿವಿ ದೃಶ್ಯಗಳಲ್ಲವೆಂದು ತಿಳಿದು ಬಂದಿದೆ. ಕೆಲವೊಂದು ದೃಶ್ಯ ಮಾಧ್ಯಮಗಳೂ ಕೂಡಾ ಇದನ್ನು ಸಿಸಿಟಿವಿಯ ನೈಜ ದೃಶ್ಯಗಳೆಂದೇ ಪ್ರಸಾರಿಸಿದ್ದವು
