ಪ್ರಕರಣವನ್ನು ಹಿಂಪಡೆಯಲು ಎಸ್.ಡಿ.ಪಿ.ಐ ಆಗ್ರಹ
ವರದಿಗಾರ-ಮೈಸೂರು: ಇತ್ತೀಚೆಗೆ ಬಿ.ಸಿ.ರೋಡಿನಲ್ಲಿ ಶರತ್ ಮಡಿವಾಳ್ ಕೊಲೆ ಪ್ರಕರಣದಲ್ಲಿ ಆರೋಪಿಯೆಂದು ಶಂಕಿಸಲಾಗಿರುವ ಖಲಂದರ್ ಮನೆಗೆ ಪೊಲೀಸರು ಅಕ್ರಮ ಪ್ರವೇಶಿಸಿ, ಪವಿತ್ರ ಗ್ರಂಥವಾದ ಕುರಾನ್ ಹಾಗೂ ಇತರ ಮದ್ರಸಾ ಪುಸ್ತಕಗಳನ್ನು ನೆಲೆಕ್ಕೆಸೆದು ಅವಮಾನಿಸಿದ್ದು ಮತ್ತು ಮನೆಯವರೊಂದಿಗೆ ಪೊಲೀಸರು ವರ್ತಿಸಿದ ಬಗ್ಗೆ ಖಲಂದರ್ ಪೋಷಕರು ಪತ್ರಕರ್ತರೊಂದಿಗೆ ಹಂಚಿಕೊಂಡಿದ್ದರು. ಈ ಬಗ್ಗೆ ವರದಿಗಾರನಾಗಿ ತನ್ನ ಪತ್ರಿಕಾ ಧರ್ಮದಡಿಯಲ್ಲಿ ಘಟನೆಯ ನೈಜತೆಯನ್ನು ಪತ್ರಿಕೆಯ ಮೂಲಕ ಬಿಚ್ಚಿಟ್ಟಿದ್ದು ಪೊಲೀಸರ ಕಣ್ಣು ಕೆಂಪಾಗಿಸಿತ್ತು. ಇದರಿಂದ ತಮ್ಮ ವೃತ್ತಿಗೆ ಧಕ್ಕೆ ಬರುತ್ತದೆ ಎಂದೆನಿಸಿಕೊಂಡು ದೌರ್ಜನ್ಯವೆಸಗಿದ ಪೊಲೀಸರು ಘಟನೆಯ ನೈಜತೆಯನ್ನು ಮರೆಮಾಚಲು ವರದಿ ಮಾಡಿದ ವರ್ತಾಭಾರತಿ ಪತ್ರಿಕೆಯ ವರದಿಗಾರನ ಮೇಲೆ ಹಾಗೂ ಪತ್ರಿಕೆಯ ಸಂಪಾದಕರ ಮೇಲೆಯೇ ಪ್ರಕರಣ ದಾಖಲಿಸಿ, ಕೈ ತೊಳೆದುಕೊಳ್ಳಲು ಪ್ರಯತ್ನಿಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.
ಅಕ್ಷರಶ ಈ ಘಟನೆಯು ಪತ್ರಿಕಾ ಸ್ವಾತಂತ್ರ್ಯವನ್ನು ಧಮನಿಸುವ ಭಾಗವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಅನ್ಯಾಯ, ದೌರ್ಜನ್ಯವನ್ನು ಸಹಿಸಲಾಗದು. ಸಾಮಾಜಿಕ ನ್ಯಾಯದ ಹರಿಕಾರವೆಂದು ಮತ್ತು ಜಾತ್ಯಾತೀತರೆಂದು ತನ್ನನ್ನು ತಾನೇ ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಮೂಗಿನ ನೇರದಲ್ಲಿ ಪತ್ರಿಕಾ ಸ್ವಾತಂತ್ಯದ ಮೇಲೆ ನಡೆದ ಧಮನಕಾರಿ ನೀತಿಯು ವಿಪರ್ಯಾಸವೆಂದು ಎಸ್.ಡಿ.ಪಿ.ಐ ಹೇಳಿದೆ.
ಕರಾವಳಿಯಲ್ಲಿ ಕೆಲವೊಂದು ಪೊಲೀಸರು ವ್ಯವಸ್ಥಿತವಾಗಿ ಪಾಲಿಸಿಕೊಂಡು ಬಂದಿರುವ ದ್ವಿಮುಖ ನೀತಿ ಅತ್ಯಂತ ಸ್ಪಷ್ಟವಾಗಿ ಇಂದು ಗೋಚರಿಸುತ್ತಿದೆ.ಸಮಾಜದ ಸ್ವಾಥ್ಥ್ಯ ಕೆಡಿಸುವ ಮತ್ತು ಕೋಮು ದ್ವೇಷವನ್ನು ಹರಡಿಸುವವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವ ಅಧಿಕಾರವಿದ್ದೂ, ತಮ್ಮಲ್ಲಿರುವ ಅಧಿಕಾರವನ್ನು ಅದೆಷ್ಟು ಬಾರಿ ಪ್ರಮಾಣಿಕವಾಗಿ ಉಪಯೋಗಿಸಿಕೊಂಡಿದ್ದೀರಿ? ಎಂದು ಅಬ್ದುಲ್ ಮಜೀದ್ ಪ್ರಶ್ನಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳೀನ್ ಕುಮಾರ್ ಕಟೀಲ್ ಜಿಲ್ಲೆಗೆ ಬೆಂಕಿ ಹಾಕಲು ಹರಸಾಹಸಪಟ್ಟಿರುವ ದೇರಳಕಟ್ಟೆಯ ಕಾರ್ತಿಕ್ ರಾಜ್ ಕೊಲೆ ಪ್ರಕರಣದಲ್ಲಿ ಸ್ವತಃ ಯುವಕನ ಸಹೋದರಿಯೇ ಕೊಲೆಯ ಹಿಂದಿರುವ ಆರೋಪಿಯೆಂದು ಸಾಬೀತಾದಾಗ ಪೊಲೀಸರೇಕೆ ಪೊಲೀಸ್ ಧರ್ಮವನ್ನು ಪಾಲಿಸಿ, ಸಂಸದನ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿಲ್ಲ? ಐದು ಕೋಮು ಪ್ರಚೋದನಕಾರಿ ಭಾಷಣ ಮಾಡಿರುವ ಪ್ರಕರಣ ದಾಖಲಾಗಿರುವ ಪ್ರಭಾಕರ್ ಭಟ್ ರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗದಿರುವುದಕ್ಕೆ ಕಾರಣ? ಇನ್ನು ಬಂಧಿಸುವ ವಿಚಾರ ಬಂದಾಗ ಪ್ರಭಾಕರ್ ಭಟ್ ರನ್ನು ಬಂಧಿಸಿದಲ್ಲಿ ಇಡೀ ಕರ್ನಾಟಕ ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಾರ್ವಜನಿಕ ಹೇಳಿಕೆ ನೀಡಿದಾಗಲೂ ಕೈ ಕಟ್ಟಿ ಮುಖ ಮುಖ ನೋಡಿದ್ದಲ್ಲವೇ? ಯಾಕೆ ಸ್ವಯಂ ಪ್ರೇರಿತ ದೂರು ದಾಖಲಿಸಲು ಮುಂದಾಗಿಲ್ಲ?
ಇಸ್ಲಾಂ ಭಯೋತ್ಪಾದನೆಯ ಧರ್ಮ, ಇಸ್ಲಾಂನ್ನು ನಿರ್ಮೂಲನೆಗೊಳಿಸಬೇಕೆಂಬ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯನ್ನು ಮಾದ್ಯಮದ ಮುಂದೆ ಸಂಸದ, ಹಾಲಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೊಂಡಾಗಲೆಲ್ಲಾ ನಿಮ್ಮ ಪೊಲೀಸ್ ಧರ್ಮ ಯಾರೊಂದಿಗೆ ಅಡವಿಟ್ಟುಕೊಂಡಿದ್ದರು? 2015ರ ಟಿಪ್ಪು ಜಯಂತಿಯ ಸಂದರ್ಭದಲ್ಲಿ ಕೋಮುಗಲಭೆಗೆ ತಯಾರಿ ನಡೆಸಿದ್ದ ಮತ್ತು ಲಾಠಿ ಚಾರ್ಚ್ ಸಂದರ್ಭ ಕಾಲು ಜಾರಿ ಬಿದ್ದು ಮೃತಪಟ್ಟ ಕುಟ್ಟಪ್ಪರ ಸಾವನ್ನು ಕೊಲೆಯೆಂದು ಬಿಂಬಿಸಿದ್ದು ಮತ್ರವಲ್ಲದೆ ಕೆ.ಜಿ ಬೋಪಯ್ಯ ಬಹಿರಂಗವಾಗಿ ಈ ಕೊಲೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ಇದರಿಂದ ಪ್ರಚೋದಿತರಾದ ಸಂಘಪರಿವಾರದ ಮೂರು ಕಾರ್ಯಕರ್ತರು ಶಾಹುಲ್ ಹಮೀದ್ ಎಂಬ ಯುವಕನ್ನು ಗುಂಡಿಕ್ಕಿ ಕೊಲ್ಲುತ್ತಾರೆ. ಈ ಘಟನೆಯ ಎಲ್ಲಾ ಸಂದರ್ಭದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಉದಾಹರಣೆಗಳಿವೆಯೇ?
ಹಾಗೂ ಇತ್ತೀಚೆಗೆ ಕೊಡಗಿನ ಸಿದ್ಧಾಪುರ ದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಕಂಠೀ ಕಾರ್ಯಪ್ಪ ಎಂಬಾತ ಮಾತನಾಡುತ್ತಾ, ದೇಶದಲ್ಲಿರುವ ಶೇಕಡಾ 15% ಇರುವ ಮುಸ್ಲಿಮರನ್ನು ನಿರ್ಮೂಲನೆ ಮಾಡಲು ಐದೇ ನಿಮಿಷ ಸಾಕು ಎಂದು ಹೇಳಿದಾಗ ಸ್ವಯಂ ಪ್ರೇರಿತ ದೂರು ದಾಖಲಿಸಲು ಮೂದಾಗದಿರುವುದಕ್ಕೆ ಕಾರಣ? ಇದೇ ರೀತಿ ಸಮಾಜದಲ್ಲಿ ಅಶಾಂತಿ ಸೃಷ್ಠಿಸುವುದಕ್ಕಾಗಿ ಕೋಮು ಪ್ರಚೋದಿತ ಭಾಷಣ ಮಾಡಿದಾಗಲೆಲ್ಲಾ ಪೊಲೀಸರು ಮೌನ ಸಮ್ಮತಿ ಸೂಚಿಸಿರುವುದ್ಯಾಕೆ?
ಪತ್ರಿಕೆ ತನ್ನ ಸ್ವಾತಂತ್ರ್ಯದ ಆಧಾರದ ಮೇಲೆ ನೈಜ ವರದಿಯನ್ನು ಪ್ರಕಟಿಸಿದಾಗ ಪತ್ರಿಕೆಯ ವಿರುದ್ಧವೇ ದೂರು ದಾಖಲಿಸುತ್ತಾರೆ ಎಂದಾದರೆ? ಪೊಲೀಸರ ದ್ವಿಮುಖ ನೀತಿಗೆ ಬೇರೆ ಉದಾಹರಣೆಗಳು ಬೇಕೇ? ಪೊಲೀಸರ ೀ ರೀತಿಯ ದ್ವಿಮುಖ ನೀತಿಯನ್ನು ಸರಿಪಡಿಸದೇ ಹೋದರೆ ಈ ದೇಶಕ್ಕೆ ಇದು ಬಹಳ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಎಲ್ಲಾ ಸಂದರ್ಭದಲ್ಲಿ ಕೋಬ್ರಾ ಪೋಸ್ಟ್ ನಿಂದ ಹೊರಬಂದ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ರ ಪೊಲೀಸ್ ಇಲಾಖೆಯೊಳಗೆ ಶೇಕಡಾ 60%ಕ್ಕಿಂತಲೂ ಅಧಿಕ ಪೊಲೀಸರು ಸಂಘಪರಿವಾರದ ಹಿನ್ನಲೆಯುಳ್ಳವರು ಎಂಬ ಹೇಳಿಕೆಗೆ ಬಹಳಷ್ಟು ಪುಷ್ಠಿ ನೀಡುತ್ತಿದೆ.
ಪೊಲೀಸ್ ಇಲಾಖೆಯೊಳಗಿರುವ ದ್ವಿಮುಖ ನೀತಿಯ ಬಗ್ಗೆ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕಾದ ತುರ್ತು ಅವಶ್ಯಕತೆ ನಿರ್ಮಾಣವಾಗಿದೆ. ಹಾಗೂ ಕೂಡಲೇ ವಾರ್ತಾಭಾರತಿ ಪತ್ರಿಕೆಯ ವರದಿಗಾರನ ಮೇಲೆ ಮತ್ತು ಪತ್ರಿಕೆಯ ಸಂಪಾದಕರ ಮೇಲೆ ದಾಖಲಿಸಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತಿದ್ದೇವೆ. ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಕಾರ್ಯಕ್ಕೆ ಸರಕಾರ ಮುಂದಾಗಬೇಕು. ದಾಖಲಿಸಲಾಗಿರುವ ಪ್ರಕರಣವನ್ನು ಹಿಂಪಡೆಯದಿದ್ದಲ್ಲಿ ಪಕ್ಷವು ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.
