ವರದಿಗಾರ-ಬೆಂಗಳೂರು: ಕಾಂಗ್ರೆಸ್ ಕುದಿಯುವ ನೀರು, ಪ್ರಾದೇಶಿಕ ಪಕ್ಷಗಳು ನಿಂತ ನೀರು, ಕಮ್ಯುನಿಸ್ಟ್ ಪಕ್ಷಗಳು ಶುದ್ದ ನೀರಾದರೂ ಅದು ಪಾತಾಳ ಗಂಗೆ. ಆಳದಲ್ಲಿದೆ, ಕುಡಿಯಲೂ ಸಿಗಲ್ಲ, ತೊಳೆಯಲೂ ಸಿಗಲ್ಲ. ಆದರೆ ಬಿಜೆಪಿ ಸರ್ವನಾಶದ ಬೆಂಕಿ. ನಿಂತ ನೀರು, ಆಳದ ನೀರು, ಕುದಿಯುವ ನೀರು ಎಲ್ಲಾ ಜೊತೆಯಾಗಿ ಸರ್ವನಾಶವಾಗುವುದು. ಬಿಜೆಪಿಯೆಂಬ ಬೆಂಕಿಯನ್ನು ನಾಶ ಮಾಡಿ, ಈ ದೇಶದ ಸಂವಿಧಾನ, ಸಂಸ್ಕೃತಿ ಮತ್ತು ಸಮಾಜವನ್ನು ಉಳಿಸಬೇಕಿದೆ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದ್ದಾರೆ.
ಅವರು ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ರವರ ಹತ್ಯೆಯನ್ನು ಖಂಡಿಸಿ, ಗೌರಿ ಹತ್ಯೆ ವಿರೋಧಿ ಹೋರಾಟ ವೇದಿಕೆ ವತಿಯಿಂದ ‘ನಾನು ಗೌರಿ, ನಾವೆಲ್ಲರೂ ಗೌರಿ’ ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ರಾಜ್ಯ ಸರಕಾರವನ್ನು ಉಲ್ಲೇಖಿಸಿ ಮಾತನಾಡುತ್ತಾ, ಕಲ್ಬುರ್ಗಿ, ಗೌರಿ ಹತ್ಯೆಯ ಪ್ರಾಯೋಜಕರು ಕರ್ನಾಟಕದಲ್ಲೇ ಇದ್ದಾರೆ. ಅವರನ್ನು ಎಳೆದು ತರಲು ಮುಂದಾಗಿ ಎಂದು ಹೇಳಿದ್ದಾರೆ.
