ವರದಿಗಾರ : ಮಾಧ್ಯಮ ಜಗತ್ತಿಗೇ ನಾಚಿಕೆಗೇಡೆಂಬಂತಿರುವ ರಿಪಬ್ಲಿಕ್ ಟಿವಿಯ ಸಿಬ್ಬಂದಿಗಳು ತಮ್ಮ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಯಂತೆಯೇ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಅರ್ನಾಬ್ ಸುಳ್ಳು ಸುದ್ದಿಗೆ ಮತ್ತು ಮಾನ ನಷ್ಟ ಮೊಕದ್ದಮೆಗಳಿಂದ ಸುದ್ದಿಯಾಗುತ್ತಿದ್ದರೆ, ಆತನ ಸಿಬ್ಬಂದಿ ವರ್ಗ ಬೇರೆಯದೇ ಹಾದಿ ತುಳಿದಿದ್ದಾರೆ. ಅವರ ಟಿ ಆರ್ ಪಿ ದಾಹಕ್ಕೆ ಈ ಬಾರಿ ಮೂಕ ಸಾಕ್ಷಿಯಾಗಿದ್ದು ಮಾತ್ರ ರಾಯನ್ ಇಂಟರ್ ನ್ಯಾಶಿನಲ್ ಶಾಲೆಯಲ್ಲಿ ಇತ್ತೀಚೆಗೆ ದುಷ್ಕರ್ಮಿಯಿಂದ ಬಲಿಯಾದ ಏಳರ ಹರೆಯದ ಬಾಲಕನ ತಂದೆ ವರುನ್ ಠಾಕೂರ್ !!
ವರುನ್ ಠಾಕೂರರ ಸಂದರ್ಶನ ತಮ್ಮಲ್ಲೇ ಮೊದಲಾಗಬೇಕೆಂಬ ರಿಪಬ್ಲಿಕ್ ಟಿವಿ ಸಿಬ್ಬಂದಿಗಳ ಅಮಾನವೀಯ ಕೃತ್ಯದ ಮುಂದೆ, ಮಗನನ್ನು ಕಳಕೊಂಡ ಓರ್ವ ತಂದೆಯ ಮನದಾಳದ ನೋವು ಕಾಣಿಸದೇ ಹೋದುದು ರಿಪಬ್ಲಿಕ್ ಟಿವಿಯವರ ಮಾಧ್ಯಮ ನೈತಿಕತೆಯೇ ಪ್ರಶ್ನಾರ್ಥಕವಾಗಿದೆ. ಮೂಲಗಳ ಪ್ರಕಾರ ಮೃತಪಟ್ಟ ಬಾಲಕ ಪ್ರಧ್ಯುಮಾನ್ ತಂದೆ ವರುನ್ ಠಾಕೂರ್ ಸೋಮವಾರ ಮೊದಲಾಗಿ ಟೈಮ್ಸ್ ನೌ ಚಾನೆಲಿಗೆ ಸಂದರ್ಶನ ಕೊಡುವುದಾಗಿ ನಿರ್ಧರಿಸಿದ್ದರು. ಆದರೆ ಈ ವೇಳೆ ಸ್ಥಳದಲ್ಲಿ ಹಾಜರಿದ್ದ ರಿಪಬ್ಲಿಕ್ ಟಿವಿಯ ಮಹಿಳಾ ಸಿಬ್ಬಂದಿಯೊಬ್ಬರು ಅತಿಕ್ರಮಿಸಿ ವರುನ್ ಠಾಕೂರರು ಸಿಕ್ಕಿಸಿಕೊಂಡಿದ್ದ ಟೈಮ್ಸ್ ನೌ ಚಾನೆಲಿನ ಮೈಕನ್ನು ಕಿತ್ತೆಸೆದು ಅಮಾನವೀಯವಾಗಿ ವರ್ತಿಸಿದ್ದಾರೆ. ಈ ಎಲ್ಲಾ ದೃಶ್ಯಗಳು ಅದಾಗಲೇ ನೇರ ಪ್ರಸಾರ ಮಾಡುತ್ತಿದ್ದ ಟೈಮ್ಸ್ ನೌ ಚಾನೆಲಿನಲ್ಲಿ ಪ್ರಸಾರವಾಗಿದ್ದು, ಇಡೀ ಮಾಧ್ಯಮ ಲೋಕವೇ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ.
ರಿಪಬ್ಲಿಕ್ ಟಿವಿ ಸಿಬ್ಬಂದಿಗಳ ಈ ಕೃತ್ಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೊದಲು ಟೈಮ್ಸ್ ನೌ ನಲ್ಲೇ ಕಾರ್ಯನಿರ್ವಹಿಸುತ್ತಿದ್ದ ಅರ್ನಾಬ್ ನಂತರ ಸಂಸದ ರಾಜೀವ್ ಚಂದ್ರಶೇಖರ್ ಮತ್ತು ಬಿಜೆಪಿಯ ಕಟ್ಟಾ ಬೆಂಬಲಿಗ ಮೋಹನ್ ದಾಸ್ ಪೈಯವರೊಂದಿಗೆ ಸೇರಿಕೊಂಡು ರಿಪಬ್ಲಿಕ್ ಟಿವಿಯನ್ನು ಪ್ರಾರಂಭಿಸಿದ್ದರು.
