ವರದಿಗಾರ-ಬೆಂಗಳೂರು: ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ರವರ ಹತ್ಯೆಯನ್ನು ಖಂಡಿಸಿ, ಗೌರಿ ಹತ್ಯೆ ವಿರೋಧಿ ಹೋರಾಟ ವೇದಿಕೆ ವತಿಯಿಂದ ‘ನಾನು ಗೌರಿ, ನಾವೆಲ್ಲರೂ ಗೌರಿ’ ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ “ನಾನು ಗೌರಿ-ನಾನು ಗೌರಿ” ಹೇಳುತ್ತಾ, ಗೌರಿ ಲಂಕೇಶ್ ರವರಿಗೆ ಗೌರವ ಅರ್ಪಿಸಿದರು.
ಅವರ ವಿಚಾರಧಾರೆಗಳನ್ನು ನಾನೂ ಮುಂದುವರಿಸುತ್ತೇನೆ ಎಂಬ ಸ್ಪಷ್ಟವಾದ ಸಂದೇಶಗಳೊಂದಿಗೆ, ಹಂತಕರ ಉದ್ದೇಶದ ಕನಸುಗಳನ್ನು ನುಚ್ಚುನೂರು ಮಾಡಿದೆ. ಈ ಮೂಲಕ ನಮ್ಮ ಧ್ವನಿಯನ್ನು ದಮನಿಸಲು ನಿಮ್ಮ ಗುಂಡಿನಿಂದ ಸಾಧ್ಯವಿಲ್ಲವೆಂಬ ಎಚ್ಚರಿಕೆಯನ್ನು ಎಲ್ಲರೂ ಗೌರಿಯಾದ ಪ್ರತಿರೋಧ ಸಮಾವೇಶದ ಜನಸಾಗರ ಏರು ಧ್ವನಿಯಲ್ಲಿ ಹೇಳಿದೆ.
ಮಾತನಾಡಿದ ಬಿ.ಟಿ.ಲಲಿತಾನಾಯಕ್, ಗೌರಿ ಹತ್ಯೆಯನ್ನು ಸಂಘ ಪರಿವಾರದವರು ಮಾಡಿದ್ದಾರೆ ಎಂದು ಆರೋಪಿಸಿದ್ದಕ್ಕೆ ನೋಟಿಸ್ ನೀಡಲಾಗಿದೆ. ಎಷ್ಟು ನೋಟಿಸ್ಗಳನ್ನು ಇವರು ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. 120 ಕೋಟಿ ನೋಟೀಸ್ ತಯಾರು ಮಾಡಿಕೊಳ್ಳಲಿ ಎಂದು ಕಿವಿಮಾತು ನೀಡಿದ್ದಾರೆ. ಎಲ್ಲಾ ನೋಟಿಸ್ಗೂ ಕಾನೂನು ಪ್ರಕಾರವೇ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವ ಕೆಲಸವಾಗಿದೆ. ಇದು ತೊಲಗಬೇಕು. ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲೆಡೆ ಇಂತಹ ಕೃತ್ಯಗಳು ಮಿತಿಮೀರುತ್ತಿದೆ. ಇದನ್ನು ನಾವೆಲ್ಲರೂ ಪ್ರತಿರೋಧಿಸಬೇಕು. ಪ್ರಜಾಪ್ರಭುತ್ವ ವಿರೋಧಿ ಧೋರಣೆ ವಿರುದ್ಧ ನಾವೆಲ್ಲ ಧ್ವನಿ ಎತ್ತದಿದ್ದರೆ ಸರ್ವಾಧಿಕಾರಿ ಧೋರಣೆ ತಲೆ ಎತ್ತಲಿದೆ ಎಂದು ಹೇಳಿದರು.
ಸರಕಾರ ಮುಂದಿನ ಒಂದು ವಾರದೊಳಗೆ ಗೌರಿ ಹತ್ಯೆಯ ಹಂತಕರನ್ನು ಬಂಧಿಸಬೇಕು. ಬಂಧಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂಬ ಎಚ್ಚರಿಕೆಯನ್ನು ಇದೇ ಸಂದರ್ಭ ನೀಡಿದ್ದಾರೆ.
ಪ್ರತಿರೋಧ ಸಮಾವೇಶದಲ್ಲಿ ಸಾಹಿತಿಗಳು, ವಿಚಾರವಾದಿಗಳು, ಪ್ರಗತಿಪರರು, ರಾಷ್ಟ್ರ ಹಾಗೂ ರಾಜ್ಯ ಮತ್ತು ಜಿಲ್ಲಾ ಪತ್ರಕರ್ತರು, ಕೋಮು ಸೌಹಾರ್ದ ವೇದಿಕೆ, ಜನಶಕ್ತಿ ಕೇಂದ್ರ, ಎಸ್ಡಿಪಿಐ, ಡಿಎಸ್ಎಸ್ ಸಂಘಟನೆ, ಮಹಿಳಾ ಸಂಘಟನೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕಮ್ಯುನಿಷ್ಟ್ ಪಕ್ಷ, ಪ್ರಾಂತ ರೈತ ಸಂಘ ಸೇರಿದಂತೆ ನೂರಾರು ಸಂಘಟನೆಗಳ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಗೌರಿ ಹತ್ಯೆ ಘಟನೆಯನ್ನು ಖಂಡಿಸಿ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೂ ನಡೆದ ಬೃಹತ್ ರ್ಯಾಲಿಯಲ್ಲಿ ಕೈಜೋಡಿಸಿದರು.
ಸಮಾವೇಶದಲ್ಲಿ ಮಹಾರಾಷ್ಟ್ರದಲ್ಲಿ ಹತ್ಯೆಯಾದ ಪನ್ಸಾರೆ ಅವರ ಪುತ್ರಿ ಮೇಘನಾ ಪನ್ಸಾರೆ, ಖ್ಯಾತ ಪತ್ರಕರ್ತ ಪಿ.ಸಾಯಿನಾಥ್, ಸಿಪಿಎಂ ಮುಖಂಡ ಸೀತಾರಾಮ್ ಯಚೂರಿ, ಬಾಲಿವುಡ್ ನಿರ್ಮಾಪಕ ಆನಂದ್ ಪಟೂರಿ, ಪತ್ರಕರ್ತೆ ಸಿಸ್ತಾ ಸೆಟಲ್ವಾಡ್, ನರ್ಮದಾ ಬಚಾವೋ ಆಂದೋಲನ ಹೋರಾಟಗಾರ್ತಿ ಮೇಧಾ ಪಾಟ್ಕರ್, ಖ್ಯಾತ ವಕೀಲ ಪ್ರಶಾಂತ್ಭೂಷಣ್, ಗುಜರಾತ್ನ ದಲಿತ ಹೋರಾಟಗಾರ ಜಿಜ್ಞಾಶ್ ಮೇವಾನಿ, ಚಿತ್ರನಟ ಪ್ರಕಾಶ್ರೈ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗಿರೀಶ್ ಕಾಸರವಳ್ಳಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ಮಟ್ಟು, ನಾಗತಿಹಳ್ಳಿ ಚಂದ್ರಶೇಖರ್, ಸಿದ್ದನಗೌಡ ಪಾಟೀಲ್, ಮಾರುತಿ ಮಾನ್ಪಡೆ, ಸಾಹಿತಿ ಮರುಳಸಿದ್ಧಪ್ಪ, ಕೆ.ಶಿವರಾಮ್, ಕೆ.ಎಸ್.ವಿಮಲಾ, ಎಸ್.ಆರ್.ಹಿರೇಮಠ್ ಮತ್ತಿತರರು ಉಪಸ್ಥಿತರಿದ್ದರು.
ಗೌರಿ ಲಂಕೇಶ್ ಕುರಿತು 12 ಗೀತ ರೂಪಕಗಳನ್ನು ರಚಿಸಲಾಗಿದೆ. ರ್ಯಾಲಿಯುದ್ದಕ್ಕೂ ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ತಮ್ಮ ಹಾಡು, ಕುಣಿತ ಮೂಲಕ ಗೌರಿ ಸಾವಿಗೆ ನ್ಯಾಯ ಕೇಳುತ್ತಿದ್ದರು.
